ADVERTISEMENT

ಮೇಲೇರದ ಲಿಫ್ಟ್, ರೋಗಿಗಳ ಪರದಾಟ

ಜಿಲ್ಲಾ ಆಸ್ಪತ್ರೆಯಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದ ಹೆಸರಿಗಷ್ಟೇ ಸೀಮಿತವಾದ ಲಿಫ್ಟ್, ಮೇಲಿನ ಮಹಡಿಗಳಿಗೆ ತೆರಳಲು ಅಂಗವಿಕಲರು, ಅನಾರೋಗ್ಯ ಪೀಡಿತರ ನರಳಾಟ

ಈರಪ್ಪ ಹಳಕಟ್ಟಿ
Published 16 ಡಿಸೆಂಬರ್ 2019, 19:30 IST
Last Updated 16 ಡಿಸೆಂಬರ್ 2019, 19:30 IST
ಮಳೆಗಾಲದಲ್ಲಿ ಮಡುಗಟ್ಟು ನೀರಿನಿಂದಾಗಿ ಕೆರೆಯಂತಾಗುವ ಜಿಲ್ಲಾ ಆಸ್ಪತ್ರೆಯ ನೆಲಮಹಡಿಯ ಚಿತ್ರಣ
ಮಳೆಗಾಲದಲ್ಲಿ ಮಡುಗಟ್ಟು ನೀರಿನಿಂದಾಗಿ ಕೆರೆಯಂತಾಗುವ ಜಿಲ್ಲಾ ಆಸ್ಪತ್ರೆಯ ನೆಲಮಹಡಿಯ ಚಿತ್ರಣ   

ಚಿಕ್ಕಬಳ್ಳಾಪುರ: ಜಿಲ್ಲಾ ಆಸ್ಪತ್ರೆ ಹೊಸ ಕಟ್ಟಡದಲ್ಲಿ ಹೆಸರಿಗಷ್ಟೇ ಸೀಮಿತವಾಗಿರುವ ಲಿಫ್ಟ್ ಬಾಗಿಲು ತೆರೆದು ಸೇವೆ ನೀಡದ ಕಾರಣ, ತೀವ್ರ ಅನಾರೋಗ್ಯ ಪೀಡಿತ ರೋಗಿಗಳು, ಅಂಗವಿಕಲರು ನಿತ್ಯವೂ ಮೇಲಿನ ಮಹಡಿಗಳಿಗೆ ಚಿಕಿತ್ಸೆಗಾಗಿ ತೆರಳಲು ಪರದಾಡುವ ಸ್ಥಿತಿ ಮುಂದುವರಿದುಕೊಂಡೇ ಬರುತ್ತಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಾಲ್ಕು ಎಕರೆ ಪ್ರದೇಶದಲ್ಲಿ ₹23.35 ಕೋಟಿ ವೆಚ್ಚದಲ್ಲಿ ಈ ನೂತನ ಆಸ್ಪತ್ರೆಯನ್ನು ನಿರ್ಮಿಸಿ ಮೂರು ವರ್ಷ ಕಳೆದಿದೆ. ಹೊಸ ಕಟ್ಟಡದಲ್ಲಿ ಆಸ್ಪತ್ರೆ ಕಾರ್ಯಾರಂಭ ಮಾಡಿ ಎರಡೂವರೆ ವರ್ಷವಾಗಿದೆ. ಈವರೆಗೆ ಇಲ್ಲಿನ ಲಿಫ್ಟ್ ರೋಗಿಗಳಿಗಾಗಿ ಬಳಕೆಯಾಗಿದ್ದು ಅತಿ ವಿರಳ. ಅಷ್ಟಕ್ಕೂ ಇಲ್ಲಿ ಏನಾಗಿದೆ ಸಮಸ್ಯೆ ಎಂದು ವಿಚಾರಿಸಿದರೆ ಅವೈಜ್ಞಾನಿಕ ರೀತಿಯಲ್ಲಿ ಕಟ್ಟಡ ನಿರ್ಮಿಸಿದ್ದೇ ಲಿಫ್ಟ್‌ ಬಳಕೆಗೆ ಕಂಟಕವಾಗಿದೆ ಎಂದು ತಿಳಿದು ಬರುತ್ತದೆ.

ಜೋರಾಗಿ ಮಳೆ ಸುರಿದ ವೇಳೆ ಜಿಲ್ಲಾ ಆಸ್ಪತ್ರೆ ನೂತನ ಕಟ್ಟಡದ ನೆಲ ಮಾಳಿಗೆಯಲ್ಲಿ ಮಳೆ ನೀರು ಮಡುಗಟ್ಟಿ ಸಣ್ಣದೊಂದು ಕೆರೆ ನಿರ್ಮಾಣವಾಗುತ್ತದೆ. ಅದರಿಂದಾಗಿ ನೆಲಮಹಡಿಗೆ ಇಳಿಯುವ ಲಿಫ್ಟ್‌ನ ಯಂತ್ರಗಳು ಪದೇ ಪದೇ ಕೆಟ್ಟು ಕಾರ್ಯ ನಿರ್ವಹಿಸದಂತಾಗುತ್ತಿವೆ. ಹೀಗಾಗಿ, ಲಿಫ್ಟ್‌ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ನಿತ್ಯ ನೂರಾರು ಜನರು ಆಸ್ಪತ್ರೆಯ ಮೊದಲ ಮತ್ತು ಎರಡನೇ ಮಹಡಿಗಳಿಗೆ ಹೋಗಿ ಚಿಕಿತ್ಸೆ ಪಡೆಯಲು ತೀವ್ರ ನೋವು ಅನುಭವಿಸುವ ದೃಶ್ಯಗಳು ಗೋಚರಿಸುತ್ತವೆ.

ADVERTISEMENT

ಮಳೆಗಾಲದಲ್ಲಿ ಮಡುಗಟ್ಟುವ ನೀರಿನಿಂದಾಗಿ ಆಸ್ಪತ್ರೆಯಲ್ಲಿ ವಿಪರೀತ ಸೊಳ್ಳೆಗಳ ಕಾಟ ಕೂಡ ರೋಗಿಗಳಿಗೆ ತೊಂದರೆ ಉಂಟು ಮಾಡುತ್ತಿದೆ. 2017ರ ಸೆಪ್ಟೆಂಬರ್‌ನಲ್ಲಿ ‘ಪ್ರಜಾವಾಣಿ’ ಕೆರೆಯಂತಾದ ಆಸ್ಪತ್ರೆಯ ನೆಲ ಮಹಡಿಯ ವಿಚಾರ ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದಾಗ, ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುವ ಜತೆಗೆ ಅಗ್ನಿಶಾಮಕ ವಾಹನ ತರಿಸಿ ನೆಲಮಹಡಿಯಲ್ಲಿ ಮಡುಗಟ್ಟಿದ್ದ ನೀರನ್ನು ಖಾಲಿ ಮಾಡಿಸಿದ್ದರು.

ಒಂದು ಕಾಲದಲ್ಲಿ ನಗರದ ಮಧ್ಯಭಾಗದಲ್ಲಿದ್ದ ತಿಮ್ಮೆಗೌಡ ಕೆರೆ ಪ್ರದೇಶದಲ್ಲಿ ಜನ ವಿರೋಧದ ನಡುವೆಯೂ ದೂರುದೃಷ್ಟಿ ಇಲ್ಲದ ಜನಪ್ರತಿನಿಧಿಗಳು, ಜಿಲ್ಲಾಡಳಿತ ಯೋಗ್ಯವಲ್ಲದ ಸ್ಥಳದಲ್ಲಿ ಆಸ್ಪತ್ರೆ ಕಟ್ಟಡ ನಿರ್ಮಿಸಿದ್ದೇ ಇವತ್ತು ಲಿಫ್ಟ್‌ ಕೆಡುವುದು ಸೇರಿದಂತೆ ಅನೇಕ ಸಮಸ್ಯೆಗಳನ್ನು ತಂದೊಡ್ಡುತ್ತಿದೆ ಎನ್ನುವುದು ಪ್ರಜ್ಞಾವಂತರ ಆರೋಪ.

ಯಾವುದೇ ಕಟ್ಟಡ ಕಟ್ಟಬೇಕಾದರೂ ಎಂಜಿನಿಯರ್‌ಗಳು ವೈಜ್ಞಾನಿಕವಾಗಿ, ತಾರ್ಕಿಕವಾಗಿ ಲೆಕ್ಕ ಹಾಕಿಯೇ ನಿರ್ಮಾಣ ಮಾಡುತ್ತಾರೆ. ಹಾಗಿದ್ದ ಮೇಲೆ ನೆಲ ಮಾಳಿಗೆಯಲ್ಲಿ ಮೊಳಕಾಲುದ್ದ ನೀರು ಏಕೆ ನಿಲ್ಲುತ್ತಿದೆ. ಈ ಬೇಜವಾಬ್ದಾರಿ ಕೆಲಸಕ್ಕೆ ಯಾರು ಹೊಣೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಈ ಬಗ್ಗೆ ವಿಚಾರಿಸಿದರೆ ಜನಪ್ರತಿನಿಧಿಗಳಲ್ಲಿ, ಅಧಿಕಾರಿ ವರ್ಗದಲ್ಲಿ ಸ್ಪಷ್ಟ ಉತ್ತರ ಸಿಗುತ್ತಿಲ್ಲ.

ಲಿಫ್ಟ್‌ ಕಾರ್ಯನಿರ್ವಹಿಸದ ಬಗ್ಗೆ ಜಿಲ್ಲಾ ಆಸ್ಪತ್ರೆಯ ಮುಖ್ಯಸ್ಥರೂ ಆಗಿರುವ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಅನಿಲ್‌ ಕುಮಾರ್ ಅವರನ್ನು ಪ್ರಶ್ನಿಸಿದರೆ, ‘ಆಸ್ಪತ್ರೆಯ ನೆಲಮಹಡಿಯಲ್ಲಿ ನೀರು ಮಡುಗಟ್ಟುವ ಕಾರಣಕ್ಕೆ ಪದೇ ಪದೇ ಲಿಫ್ಟ್‌ ಕೆಟ್ಟು ನಿಂತು ಸಮಸ್ಯೆ ಸೃಷ್ಟಿಯಾಗುತ್ತಿದೆ. ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಇತ್ತೀಚೆಗೆ ಲಿಫ್ಟ್‌ ಅಳವಡಿಸಿದ ಕಂಪೆನಿಯವರನ್ನು ಕರೆಯಿಸಿ ಚರ್ಚಿಸಿದ್ದೇವೆ. ಅವರು ರಿಪೇರಿ ಮಾಡಿ, ಮಳೆಗಾಲದಲ್ಲಿ ನೆಲ ಮಹಡಿಗೆ ಲಿಫ್ಟ್ ಇಳಿಯದಂತೆ ವ್ಯವಸ್ಥೆಯಲ್ಲಿ ಮಾರ್ಪಾಡು ಮಾಡಿಕೊಡುವುದಾಗಿ ತಿಳಿಸಿದ್ದಾರೆ. ಶೀಘ್ರದಲ್ಲಿಯೇ ಲಿಫ್ಟ್ ಸಮಸ್ಯೆ ಸರಿ ಹೋಗುತ್ತದೆ’ ಎಂದು ತಿಳಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.