ADVERTISEMENT

ಚಿಕ್ಕಬಳ್ಳಾಪುರ: ನಗರ ಯೋಜಕ ಸದಸ್ಯ ಕೃಷ್ಣಪ್ಪ ಅಮಾನತು

ರಿಯಲ್ ಎಸ್ಟೆಟ್ ಉದ್ಯಮಿಯೊಬ್ಬರಿಗೆ ಲಂಚಕ್ಕೆ ಬೇಡಿಕೆ ಇಟ್ಟ ಆರೋಪದಲ್ಲಿ ಎಸಿಬಿ ದಾಳಿಯಲ್ಲಿ ಬಂಧನ

​ಪ್ರಜಾವಾಣಿ ವಾರ್ತೆ
Published 6 ಜನವರಿ 2020, 13:20 IST
Last Updated 6 ಜನವರಿ 2020, 13:20 IST
ಎಚ್.ಆರ್.ಕೃಷ್ಣಪ್ಪ
ಎಚ್.ಆರ್.ಕೃಷ್ಣಪ್ಪ   

ಚಿಕ್ಕಬಳ್ಳಾಪುರ: ಭೂಪರಿವರ್ತನೆಗೊಂಡ ನಿವೇಶನಗಳಿಗೆ ಬಿಡುಗಡೆ ಅನುಮತಿ ಪತ್ರ ನೀಡಲು ರಿಯಲ್ ಎಸ್ಟೆಟ್ ಉದ್ಯಮಿಯೊಬ್ಬರಿಗೆ ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳಿಂದ ಬಂಧನಕ್ಕೆ ಒಳಗಾಗಿದ್ದ ನಗರಾಭಿವೃದ್ಧಿ ಪ್ರಾಧಿಕಾರದ ನಗರ ಯೋಜಕ ಸದಸ್ಯ ಎಚ್.ಆರ್.ಕೃಷ್ಣಪ್ಪ ಅವರನ್ನು ಅಮಾನತುಗೊಳಿಸಲಾಗಿದೆ.

ಬೆಂಗಳೂರಿನ ಆರ್‌.ಕೆ.ಹೆಗಡೆ ನಗರದ ನಿವಾಸಿ, ರಿಯಲ್ ಎಸ್ಟೆಟ್ ಉದ್ಯಮಿ ಎನ್.ರಾಮಾಂಜಿನಪ್ಪ ಅವರು ಕಳೆದ ಅಕ್ಟೋಬರ್ 16 ರಂದು ಕೃಷ್ಣಪ್ಪ ಅವರು ₹9 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು, ಆ ಪೈಕಿ ಶಾಸಕರಿಗೆ ₹5 ಲಕ್ಷ ಕೊಡಬೇಕು ಎಂದು ತಿಳಿಸಿರುವುದಾಗಿ ಎಸಿಬಿಯಲ್ಲಿ ದೂರು ದಾಖಲಿಸಿದ್ದರು.

ಅ.17 ರಂದು ಎಸಿಬಿ ಅಧಿಕಾರಿಗಳು ನಗರದ ವಾಪಸಂದ್ರದಲ್ಲಿರುವ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯ ಮೇಲೆ ದಾಳಿ ನಡೆಸಿ, ನಗರ ಯೋಜಕ ಸದಸ್ಯ ಎಚ್.ಆರ್.ಕೃಷ್ಣಪ್ಪ ಹಾಗೂ ₨3 ಲಕ್ಷ ಲಂಚದ ಹಣ ಪಡೆಯುತ್ತಿದ್ದ ಖಾಸಗಿ ಎಂಜಿನಿಯರ್ ಅಚ್ಯುತ್ ಕುಮಾರ್ ಅವರನ್ನು ವಶಕ್ಕೆ ಪಡೆದಿದ್ದರು.

ADVERTISEMENT

ಎಸಿಬಿ ವರದಿ ಆಧರಿಸಿ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಸಿ.ಎಸ್.ಶಿವಕುಮಾರಸ್ವಾಮಿ ಅವರು ಕೃಷ್ಣಪ್ಪ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಏನಿದು ಪ್ರಕರಣ?

ಕುಪ್ಪಳ್ಳಿ ಗ್ರಾಮದಲ್ಲಿ ತಮ್ಮ ಸಹೋದರ ಆನಂದ್‌ ಕುಮಾರ್ ಅವರ ಹೆಸರಿನಲ್ಲಿ ಖರೀದಿಸಿ ಭೂಪರಿವರ್ತನೆ ಮಾಡಿಸಿದ 2 ಎಕರೆ 15 ಗುಂಟೆ ಜಮೀನಿನಲ್ಲಿ ಬಾಕಿ ಉಳಿದಿದ್ದ ಶೇ 40ರಷ್ಟು ನಿವೇಶನಗಳ ಬಿಡುಗಡೆಗೆ ಅನುಮತಿ ಪತ್ರಕ್ಕಾಗಿ ಅ.14 ರಂದು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಗೆ ಹೋದ ವೇಳೆ ಕೃಷ್ಣಪ್ಪ ಅವರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಈ ವಿಚಾರ ಆಯುಕ್ತೆ ಪ್ರಜ್ಞಾ ಅಮ್ಮೆಂಬಳ ಅವರ ಗಮನಕ್ಕೂ ತಂದಿದ್ದೆ. ಆದರೂ ಕೃಷ್ಣಪ್ಪ ಅವರು ಹಣಕ್ಕೆ ಪೀಡಿಸಿದ್ದರು ಎಂದು ಎಸಿಬಿಗೆ ದೂರು ನೀಡಿದ್ದ ರಾಮಾಂಜಿನಪ್ಪ ಅವರು, ಕೃಷ್ಣಪ್ಪ ಮತ್ತು ಆಯುಕ್ತೆ ಪ್ರಜ್ಞಾ ಅವರೊಂದಿಗಿನ ಸಂಭಾಷಣೆಯನ್ನು ಧ್ವನಿ ಮುದ್ರಿಸಿಕೊಂಡು, ಪೆನ್‌ಡ್ರೈವ್‌ ಮೂಲಕ ಅದನ್ನು ಸಾಕ್ಷಿಯನ್ನಾಗಿ ನೀಡಿದ್ದರು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.