
ಗೌರಿಬಿದನೂರು: ನಗರದಿಂದ ಕೂಗಳತೆ ದೂರದಲ್ಲಿರುವ ಕುರುಬರಹಳ್ಳಿ ಪಂಚಾಯಿತಿ ವ್ಯಾಪ್ತಿಯ ವಡ್ಡರ ಬಂಡೆ ಇಂದಿಗೂ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ.
ಸರ್ಕಾರ 2003ರಲ್ಲಿ ವಡ್ಡರ ಬಂಡೆಯನ್ನು ನವ ಗ್ರಾಮ ಎಂದು ನಾಮಕರಣ ಮಾಡಿ, ಬಡವರಿಗೆ ನಿವೇಶನ ಹಂಚಿಕೆ ಮಾಡಿತು. ಇಲ್ಲಿ ಬಹುತೇಕ ಕೂಲಿ ಕಾರ್ಮಿಕರೇ ವಾಸವಾಗಿದ್ದಾರೆ. 150ಕ್ಕೂ ಹೆಚ್ಚು ಮನೆಗಳಿವೆ. ಸರ್ಕಾರವೇನೋ 22 ವರ್ಷಗಳ ಹಿಂದೆ ನಿವೇಶನ ನೀಡಿ ಕೈತೊಳೆದುಕೊಂಡಿದೆ. ಆದರೆ ಇಲ್ಲಿ ವಾಸಿಸುತ್ತಿರುವ ನಿವಾಸಿಗಳ ಸಮಸ್ಯೆಗಳು ಮಾತ್ರ ಇಂದಿಗೂ ನೀಗಿಲ್ಲ.
ಇವರ ಗೋಳನ್ನು ಕೇಳಿಸಿಕೊಳ್ಳಲು ಯಾವ ಅಧಿಕಾರಿಗಳು ಸಹ ಈ ಕಡೆ ತಲೆ ಹಾಕುತ್ತಿಲ್ಲ. ಸಕಾಲಕ್ಕೆ ಶುದ್ಧ ಕುಡಿಯುವ ನೀರಾಗಲಿ, ರಸ್ತೆ ವ್ಯವಸ್ಥೆಯಾಗಲಿ ಇಲ್ಲ. ಇಲ್ಲಿನ ಮಕ್ಕಳಿಗೆ ಶಿಕ್ಷಣ ಕೊಡಿಸಲು ಅಂಗನವಾಡಿ, ಶಾಲೆಯಾಗಲಿ ಇಲ್ಲದೇ ಇರುವುದರಿಂದ ಹಿರೇಬಿದನೂರು ಅಥವಾ ಚೀಕಟಗೆರೆ ಗ್ರಾಮಕ್ಕೆ ಕಳಿಸಬೇಕು.
ಈ ಗ್ರಾಮ ಚಿಕ್ಕಬಳ್ಳಾಪುರದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿದೆ. ಆದರೂ ಸಹ ಗ್ರಾಮದ ಒಳಗಡೆ ಓಡಾಡಲು ಸರಿಯಾದ ರಸ್ತೆ ವ್ಯವಸ್ಥೆ ಇಲ್ಲ. ಕೆಲವೇ ವರ್ಷಗಳ ಹಿಂದೆ ನಿರ್ಮಿಸಿರುವ ಅಲ್ಪ ಸ್ವಲ್ಪ ರಸ್ತೆ ಸಹ ಹಾಳಾಗಿ ಕಿತ್ತುಹೋಗಿದೆ. ಚರಂಡಿಗಳನ್ನು ಸ್ವಚ್ಛ ಮಾಡಿ ವರ್ಷಗಳೇ ಉರುಳಿವೆ. ಕೆಸರು ತುಂಬಿ ರೋಗ ಭೀತಿ ಎದುರಾಗಿದೆ.
ಇನ್ನು ಮಳೆ ಬಂದರೆ ಗೋಳು ಹೇಳ ತೀರದಾಗಿದೆ. ರಸ್ತೆಗಳೆಲ್ಲ ಕೆಸರುಮಯವಾಗಿ ಓಡಾಡಲು ಆಗುವುದಿಲ್ಲ. ರಸ್ತೆ ಮಧ್ಯದಲ್ಲಿಯೇ ವಿದ್ಯುತ್ ಕಂಬವಿದೆ. ಮಳೆ ಬಂದಾಗ ವಿದ್ಯುತ್ ಹರಿಯುವ ಸಂಭವವಿದೆ. ಆದರೂ ಅದನ್ನು ತೆರವುಗೊಳಿಸುವ ಗೋಜಿಗೆ ಯಾರೂ ಹೋಗಿಲ್ಲ. ಕೆಲವೆಡೆ ಕಂಬಗಳಿದ್ದರು ವಿದ್ಯುತ್ ದೀಪಗಳಿಲ್ಲ. ಇದರಿಂದ ಇಲ್ಲಿನ ನಿವಾಸಿಗಳು ಕತ್ತಲೆಯಲ್ಲಿ ಓಡಾಡಬೇಕಾದ ಪರಿಸ್ಥಿತಿ ಇದೆ.
ಜನರ ನಿತ್ಯ ಜೀವನಕ್ಕೆ ಅವಶ್ಯಕವಾಗಿ ಬೇಕಾಗಿರುವ ಕುಡಿಯುವ ನೀರಿನ ವ್ಯವಸ್ಥೆ ಸಹ ಸರಿಯಾಗಿ ಇಲ್ಲ. ನಲ್ಲಿಗಳಲ್ಲಿ ಮಾತ್ರ ಆಗೊಮ್ಮೆ, ಈಗೊಮ್ಮೆ ಬರುವ ನೀರಿನಿಂದಲೇ ಎಲ್ಲ ಕಾರ್ಯಗಳು ನಡೆಯಬೇಕು. ಕೆಲವೊಮ್ಮೆ 15 ದಿನ ಕಳೆದರು ನೀರು ಬರುವುದಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದರು.
ಜನರು ಓಡಾಡಲು ಗ್ರಾಮದಲ್ಲಿರುವ ಎಲ್ಲ ರಸ್ತೆಗಳ ಪಕ್ಕದಲ್ಲಿ ಗಿಡಗಳು ಬೆಳೆದು ಪೊದೆಗಳಾಗಿ ನಿಂತು ರಸ್ತೆಯೇ ಮುಚ್ಚಿ ಹೋಗಿದೆ. ಇದರಿಂದ ಬೆಳಗ್ಗೆ ರಾತ್ರಿ ಎನ್ನದೆ ಈ ಪೊದೆಗಳಿಂದ ಪ್ರತಿನಿತ್ಯ ಒಂದಲ್ಲ ಒಂದು ರೀತಿಯ ಹಾವು, ಚೇಳು ಸೇರಿದಂತೆ ವಿಷ ಜಂತುಗಳು ಕಾಣಿಸಿಕೊಳ್ಳುತ್ತಿವೆ. ಕತ್ತಲೆಯಲ್ಲಿ ಯಾರಿಗಾದರೂ, ಏನಾದರು ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.
ಈ ಗ್ರಾಮ ಇಂದಿಗೂ ಅಭಿವೃದ್ಧಿಯಿಂದ ಸಂಪೂರ್ಣವಾಗಿ ದೂರ ಉಳಿದಿದೆ. ಇಲ್ಲಿನ ಜನ ಸಣ್ಣಪುಟ್ಟ ಗುಡಿಸಲುಗಳನ್ನು ನಿರ್ಮಾಣ ಮಾಡಿಕೊಂಡು 22 ವರ್ಷದಿಂದ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ ಇಂಥವರ ಜೀವನ ಮಟ್ಟವನ್ನು ಸುಧಾರಿಸಲು ಸರ್ಕಾರ ಕೋಟ್ಯಂತರ ರೂಪಾಯಿಗಳನ್ನು ಸುರಿದು ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಆದರೆ ಈ ಯೋಜನೆ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪುತ್ತಿಲ್ಲ. ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಅಧಿಕಾರಿಗಳು ಮಾತ್ರ ಕಂಡು ಕಾಣದಂತೆ ಇರುವುದು ವಿಪರ್ಯಾಸವೇ ಸರಿ. ಇದು ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಗೆ ಉದಾಹರಣೆಯಾಗಿದೆ ಎಂದು ಪ್ರಜ್ಞಾವಂತ ನಾಗರೀಕರ ಆರೋಪವಾಗಿದೆ.
ಸಮಸ್ಯೆ ಬಗೆಹರಿಸಲು ಕ್ರಮ
ನನ್ನ ವ್ಯಾಪ್ತಿಯಲ್ಲಿ ಬರುವ ಎಲ್ಲ ಹಳ್ಳಿಗಳನ್ನು ಭೇಟಿ ಮಾಡುತ್ತಿದ್ದೇನೆ. ವಡ್ಡರಬಂಡೆಗೂ ಎರಡು ತಿಂಗಳ ಹಿಂದೆ ಭೇಟಿ ನೀಡಿದ್ದೆ. ಇಲ್ಲಿ ಯಾವುದೇ ಸಮಸ್ಯೆಗಳಿದ್ದರು ಹಂತ ಹಂತವಾಗಿ ಬಗೆಹರಿಸಲು ಕ್ರಮಕೈಗೊಳ್ಳಲಾಗುವುದು. ಮಿರ್‌ಫಯಾಜ್ ಕುರುಬರಹಳ್ಳಿ ಪಿಡಿಒ ಅಧಿಕಾರಿಗಳಿಗೆ ತಾತ್ಸಾರ ಇಲ್ಲಿನ ಗ್ರಾಮಕ್ಕೆ ಅಧಿಕಾರಿಗಳು ಕಂದಾಯ ವಸೂಲಿ ಮಾಡಲು ಮಾತ್ರ ಬರುತ್ತಾರೆ. ಇಲ್ಲಿನ ಸಮಸ್ಯೆಗಳ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಸಹ ಯಾವುದೇ ಸ್ಪಂದನೆ ಇಲ್ಲ. ದೂರು ನೀಡಿದರೆ ಉತ್ತರವಿಲ್ಲ. ಇದು ಬಡವರ ಬಗ್ಗೆ ಅಧಿಕಾರಿಗಳಿಗಿರುವ ತಾತ್ಸಾರ ಮನೋಭಾವ. ಸರಸ್ವತಿ ವಡ್ಡರಬಂಡೆ ಗ್ರಾಮಸ್ಥೆ ಭಯದಿಂದಲೇ ಬದುಕುವಂತಾಗಿದೆ ಗ್ರಾಮದಲ್ಲಿ ವಿದ್ಯುತ್ ಸಮಸ್ಯೆ ಇದೆ ರಸ್ತೆಯಲ್ಲಿ ಹಗಲು ರಾತ್ರಿ ಎನ್ನದೆ ಹಾವುಗಳ ಕಾಟ ಜಾಸ್ತಿ ಇದೆ. ಮಕ್ಕಳು ಓಡಾಡುವಾಗ ಏನಾದರು ಹೆಚ್ಚು ಕಮ್ಮಿಯಾಗುವ ಭಯದಿಂದಲೇ ಬದುಕುವಂತಾಗಿದೆ. ಇಲ್ಲಿಗೆ ಯಾವುದೇ ಅಧಿಕಾರಿಗಳು ಭೇಟಿ ನೀಡುವುದಿಲ್ಲ. ಮೌಲ ಸ್ಥಳೀಯರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.