ಶಿಡ್ಲಘಟ್ಟ: ಮಹರ್ಷಿ ವಾಲ್ಮೀಕಿ ಅವರ ಪೂರ್ವಾಶ್ರಮ ಎಂದೇ ಪ್ರತೀತಿ ಹೊಂದಿರುವ ತಲಕಾಯಲಬೆಟ್ಟದಲ್ಲಿ ಇದೇ 7ರಂದು ವಾಲ್ಮೀಕಿ ಜಯಂತಿ ಆಚರಿಸಲಾಗುವುದು. ಈ ಹಿನ್ನೆಲೆಯಲ್ಲಿ ಬೆಟ್ಟದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಮತ್ತು ಮಹರ್ಷಿಯ ಸ್ಮರಣೆ ನಡೆಯಲಿದೆ.
ತಾಲ್ಲೂಕಿನ ಉತ್ತರ ದಿಕ್ಕಿಗೆ 25 ಕಿ.ಮೀ. ದೂರದ ಪಾಪಾಗ್ನಿ ನದಿ ತಪ್ಪಲಿನಲ್ಲಿರುವ ತಲಕಾಯಲಬೆಟ್ಟದಲ್ಲಿ ಮಹರ್ಷಿ ವಾಲ್ಮೀಕಿಯವರ ಪೂರ್ವಾಶ್ರಮದ ಬಾಲ್ಯ, ಬದುಕು ಮತ್ತು ಮೋಕ್ಷ ಪಡೆದ ಸ್ಥಳವಾಗಿತ್ತು ಎಂಬುದು ಪ್ರತೀತಿ.
ಮಹರ್ಷಿ ವಾಲ್ಮೀಕಿಗೆ ಮೋಕ್ಷ ಸಿಗುವುದಕ್ಕೂ ಮುನ್ನ ಅವರು ಮುತ್ತುರಾಜ ಆಗಿದ್ದರು. ತಲಕಾಯಲಬೆಟ್ಟದಲ್ಲಿ ಅಡಗಿ ಅಲ್ಲಿ ಹಾದು ಹೋಗುತ್ತಿದ್ದವರನ್ನು ತಡೆದು ಅವರನ್ನು ದೋಚಿ ಅದರಿಂದ ಅವರ ಪತ್ನಿ ಮಕ್ಕಳನ್ನು ಸಾಕುತ್ತಿದ್ದರಂತೆ. ತಲೆ ಕಡಿಯುತ್ತಿದ್ದರಿಂದ ಈ ಊರನ್ನು ತಲಕಾಚಿನಕೊಂಡ, ತಲೆಕಾಯ್ದಬೆಟ್ಟ ಎಂದು ಕರೆಯಲಾಗುತ್ತಿತ್ತು. ಕಾಲಾನಂತರ ತಲಕಾಯಲಬೆಟ್ಟ ಎಂದಾಗಿದೆ ಎನ್ನುತ್ತಾರೆ ಹಿರಿಯರು.
ಒಮ್ಮೆ ಈ ಹಾದಿಯಲ್ಲಿ ಬಂದ ನಾರದ ಮುನಿಗಳನ್ನು ಮುತ್ತುರಾಜ ದೋಚಲು ಮುಂದಾದ. ಆಗ ನಾರದರ ಉಪದೇಶದಿಂದ ರಾಮನ ಜಪ ಮಾಡುತ್ತಾ ತಪಸ್ಸಿಗೆ ಕುಳಿತ ಮುತ್ತುರಾಜನ ಸುತ್ತಲೂ ಹುತ್ತ ಬೆಳೆದಿದೆ. ಮೋಕ್ಷ ಸಿಕ್ಕ ನಂತರ ಹುತ್ತದಿಂದ ಹೊರ ಬಂದವನಾದ್ದರಿಂದ ಮುತ್ತುರಾಜನು ವಾಲ್ಮೀಕಿಯಾಗಿ (ಸಂಸ್ಕೃತದಲ್ಲಿ ವಾಲ್ಮೀಕ ಎಂದರೆ ಹುತ್ತ) ಪರಿವರ್ತನೆ ಆಗಿರುವುದಾಗಿ ಪುರಾಣ ಸಾರುತ್ತದೆ.
ಮುಂದೆ ಮಹರ್ಷಿ ವಾಲ್ಮೀಕಿಯು ರಚಿಸಿದ ರಾಮಾಯಣ ಇಡೀ ಜಗತ್ತಿಗೆ ಮಹಾಕಾವ್ಯ ಆಗಿದೆ. ಆದಿಕವಿ ಮಹರ್ಷಿ ವಾಲ್ಮೀಕಿಯ ಪೂರ್ವಾಶ್ರಮದ ಬದುಕಿಗೆ ಸಾಕ್ಷಿಯಾಗಿರುವ ತಲಕಾಯಲಬೆಟ್ಟದ ಇತಿಹಾಸವನ್ನು ತಿಳಿದಷ್ಟೂ ಕೌತುಕ ಹೆಚ್ಚುತ್ತದೆ.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಇದೇ 7ರ ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಮಿನಿ ವಿಧಾನಸೌಧ ಆವರಣದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ನಡೆಯಲಿದೆ.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ಸಂಸದ ಎಂ.ಮಲ್ಲೇಶ್‌ಬಾಬು ಉಪಸ್ಥಿತಿಯಲ್ಲಿ ಶಾಸಕ ಬಿ.ಎನ್.ರವಿಕುಮಾರ್ ಅಧ್ಯಕ್ಷತೆ ವಹಿಸಲಿದ್ದು, ನಗರಸಭೆ ಅಧ್ಯಕ್ಷ ಎಂ.ವೆಂಕಟಸ್ವಾಮಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಎಲ್ಲ ಅಧಿಕಾರಿಗಳು, ಜನಪ್ರತಿನಿಧಿಗಳು, ಸಂಘ ಸಂಸ್ಥೆ ಪದಾಧಿಕಾರಿಗಳು ಸೇರಿದಂತೆ ಆಚರಣಾ ಸಮಿತಿ ಸದಸ್ಯರು, ಪ್ರಮುಖರು ಭಾಗವಹಿಸಲಿದ್ದಾರೆ. ನಿವೃತ್ತ ಪ್ರಾದ್ಯಾಪಕ ಡಾ.ಚಿನ್ನನರಸಿಂಹಪ್ಪ ಅವರು ಮುಖ್ಯ ಭಾಷಣ ಮಾಡಲಿದ್ದಾರೆ.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಮಯೂರ ವೃತ್ತದಲ್ಲಿನ ವಾಲ್ಮೀಕಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಅಲ್ಲಿಂದ ಮುತ್ತಿನ ಪಲ್ಲಕಿಗಳ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ನಗರದ ಪ್ರಮುಖ ಬೀದಿಗಳಲ್ಲಿ ಉತ್ಸವ ಸಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.