
ಚೇಳೂರು: ಬಡ ಹಾಗೂ ಅನಾಥ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಸರ್ಕಾರ ಕೋಟ್ಯಂತರ ರೂಪಾಯಿ ವ್ಯಯಿಸುತ್ತಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಶಾಲೆಗಳಲ್ಲಿ ನಾನಾ ಅಧ್ವಾನಗಳು ಇವೆ.
ಇದಕ್ಕೆ ನಿದರ್ಶನ ತಾಲ್ಲೂಕಿನ ನಲ್ಲಗುಟ್ಲಪಲ್ಲಿಯ ಮಹರ್ಷಿ ವಾಲ್ಮೀಕಿ ಆಶ್ರಮ ಶಾಲೆ. ಇಲ್ಲಿನ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. 50ಕ್ಕೂ ಹೆಚ್ಚು ಅನಾಥ ಹಾಗೂ ಏಕಪೋಷಕ ಮಕ್ಕಳು ಇಲ್ಲಿ ಇದ್ದಾರೆ.
ಸೌಲಭ್ಯಗಳಿದ್ದರೂ ಬಳಕೆಗೆ ಭಾಗ್ಯವಿಲ್ಲ: ವಸತಿ ಶಾಲೆಯಲ್ಲಿ ಮಕ್ಕಳಿಗೆ ಬಿಸಿನೀರು ನೀಡಲು ಗೀಸರ್‌ಗಳನ್ನು ತರಲಾಗಿದೆ. ಆದರೆ ಅವುಗಳನ್ನು ತಂದು ಹಲವು ದಿನಗಳೇ ಕಳೆದರೂ ಅಳವಡಿಸಿಲ್ಲ. ಸೋಲಾರ್ ವ್ಯವಸ್ಥೆಯು ಕೇವಲ ಮಧ್ಯಾಹ್ನದ ಮೇಲೆ ಬಿಸಿನೀರು ನೀಡುವುದರಿಂದ, ಕೊರೆಯುವ ಚಳಿಯಲ್ಲಿ ಬೆಳಿಗ್ಗೆ ಈ ಪುಟ್ಟ ಮಕ್ಕಳು ತಣ್ಣೀರಿನಲ್ಲೇ ಸ್ನಾನ ಮಾಡುವರು. ವರ್ಷದಿಂದ ಯುಪಿಎಸ್ ಬ್ಯಾಟರಿ ಕೆಟ್ಟಿದೆ. ರಾತ್ರಿ ವಿದ್ಯುತ್ ಹೋದಾಗ ಮಕ್ಕಳು ಕತ್ತಲೆಯಲ್ಲಿ ಕಾಲ ಕಳೆಯುತ್ತಿದ್ದಾರೆ ಎನ್ನಲಾಗಿದೆ. ಆಶ್ರಮ ಶಾಲೆಯಲ್ಲಿ ವಾಷಿಂಗ್ ಮೆಷಿನ್ ವ್ಯವಸ್ಥೆ ಇದ್ದರೂ ಮಕ್ಕಳ ಬಳಕೆಗೆ ಸದ್ಬಳಕೆ ಆಗುತ್ತಿಲ್ಲ.
ವಾರ್ಡನ್ ಶಾಲೆಗೆ ಬರುವುದು ಅಪರೂಪ ಎನ್ನುವ ಮಾತಿದೆ. ಶಾಲೆಯಲ್ಲಿರುವ ಎಲ್ಲರೂ ಅತಿಥಿ ಶಿಕ್ಷಕರೇ ಆಗಿದ್ದಾರೆ. ವಸತಿ ಶಾಲೆಯ ನಿಯಮದಂತೆ ಎಲ್ಲಾ ಶಿಕ್ಷಕರು ರಾತ್ರಿ ಇಲ್ಲೇ ಇರಬೇಕು. ಆದರೆ ದಿನಕ್ಕೊಬ್ಬರಂತೆ ‘ಪಾಳಿ’ಯಲ್ಲಿ ಇರುತ್ತಾರೆ.
ಈ ಬಗ್ಗೆ ಮಾಹಿತಿ ಪಡೆಯಲು ಬಾಗೇಪಲ್ಲಿ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗೆ ಹಲವು ಬಾರಿ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಲಿಲ್ಲ.
ಜಿಲ್ಲಾಧಿಕಾರಿ ಮತ್ತು ಸಿಇಒ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಕೇವಲ ನಾಮಕಾವಸ್ಥೆಗೆ ಎಚ್ಚರಿಕೆ ನೀಡಿ ಕೈತೊಳೆದುಕೊಳ್ಳುವ ಬದಲಿಗೆ ಕಠಿಣ ಕ್ರಮವಹಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸುವರು.
‘ವಾರ್ಡನ್‌ಗಳಿಲ್ಲ’
ಜಿಲ್ಲೆಯಲ್ಲಿ ವಾರ್ಡನ್ ಹುದ್ದೆಗಳು ಖಾಲಿ ಇವೆ. ನಮಗೆ 10 ವಾರ್ಡನ್‌ಗಳು ಬೇಕು. ಆದರೆ ಇರುವುದು ಕೇವಲ ಮೂವರು ಮಾತ್ರ. ಹೀಗಾಗಿ ಒಬ್ಬರೇ ಮೂರ್ನಾಲ್ಕು ಹಾಸ್ಟೆಲ್ ಜವಾಬ್ದಾರಿ ನೋಡಿಕೊಳ್ಳಬೇಕಿದೆ. ಬಟ್ಟೆ ಒಗೆಯುವ ಯಂತ್ರ ಕೆಟ್ಟಿರುವುದು ಗಮನಕ್ಕೆ ಬಂದಿದೆ. ಈಗಾಗಲೇ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದೇನೆ.ಕಾಯಂ ಶಿಕ್ಷಕರ ನೇಮಕ ಸರ್ಕಾರದಿಂದ ಆಗಬೇಕಿದೆ ಎನ್ನುತ್ತಾರೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪ್ರವೀಣ್ ಪಾಟೀಲ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.