
ಚಿಕ್ಕಬಳ್ಳಾಪುರ: ವೆನೆಜುವೆಲಾ ಅಧ್ಯಕ್ಷರ ಅಪಹರಣ ಖಂಡಿಸಿ ನಗರದಲ್ಲಿ ಸಿಪಿಎಂ ಮತ್ತು ಕನ್ನಡ ಸಂಘಟನೆಗಳ ಕಾರ್ಯಕರ್ತರು ಗುರುವಾರ ಪ್ರತಿಭಟಿಸಿದರು.
ವೆನೆಜುವೆಲಾ ದೇಶದ ಮೇಲೆ ಅಮೆರಿಕವು ಏಕಪಕ್ಷಿಯ ಮಿಲಿಟರಿ ಅಕ್ರಮಣ ನಡೆಸಿದೆ. ಅಧ್ಯಕ್ಷ ನಿಕೊಲಸ್ ಮಡೂರೊ, ಅವರ ಪತ್ನಿ ಸಿಲಿಯಾ ಅವರನ್ನು ಅಪಹರಣ ಮಾಡಿರುವುದು ಖಂಡನೀಯ ಎಂದು ಶಿಡ್ಲಘಟ್ಟ ವೃತ್ತದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಸಿಪಿಎಂ ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಎಂ.ಪಿ. ಮುನಿವೆಂಕಟಪ್ಪ ಮಾತನಾಡಿ, ವೆನೆಜುವೆಲಾದ ತೈಲ ಸಂಪತ್ತನ್ನು ಕೊಳ್ಳೆ ಹೊಡೆಯುವ ದುರುದ್ದೇಶಕ್ಕೆ ಅಡ್ಡಿ ಆಗಿದ್ದ ಕಾರಣಕ್ಕಾಗಿ ಮಡೂರೊ ಅವರನ್ನು ಪದಚ್ಯುತಗೊಳಿಸಲು ಮಿಲಿಟರಿ ಕಾರ್ಯಾಚರಣೆ ನಡೆಸಿದೆ ಎಂದರು.
ಒಂದು ಸಾರ್ವಭೌಮ ಸ್ವತಂತ್ರ ಹಾಗೂ ಚುನಾಯಿತ ಪ್ರಜಾಪ್ರಭುತ್ವ ರಾಷ್ಟ್ರದ ಅಧ್ಯಕ್ಷರನ್ನು ಮತ್ತೊಂದು ದೇಶ ಮಿಲಿಟರಿ ಅಕ್ರಮಣದ ಮೂಲಕ ಅಪಹರಿಸಿರುವುದು ಹಿಂದೆಂದೂ ಕಂಡರಿಯದ ದೌರ್ಜನ್ಯ. ವೆನೆಜುವೆಲಾ ದೇಶದ ಮೇಲೆ ನಡೆದಿರುವ ದಾಳಿ ಭಾರತ ಸೇರಿದಂತೆ ಇಡೀ ಪ್ರಪಂಚದ ಎಲ್ಲಾ ಸಾರ್ವಭೌಮ ದೇಶಗಳ ಮೇಲೆ ನಡೆದಿರುವ ಅಕ್ರಮಣವಾಗಿದೆ. ಕೂಡಲೇ ವೆನೆಜುವೆಲಾ ದೇಶದ ಅಧ್ಯಕ್ಷರನ್ನು ಬಿಡುಗಡೆ ಮಾಡುವಂತೆ ಭಾರತ ಸರ್ಕಾರ ಅಮೆರಿಕವನ್ನು ಒತ್ತಾಯಿಸಬೇಕು. ವಿಶ್ವ ಸಂಸ್ಥೆ ಭದ್ರತಾ ಮಂಡಳಿ ಕೂಡಲೇ ಅಮೆರಿಕದ ಪುಂಡಾಟಿಕೆ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಹಿಂದೆ ಇರಾಕ್, ಲಿಬಿಯಾ ಮುಂತಾದ ದೇಶಗಳ ಮೇಲೆ ಅಕ್ರಮಣ ನಡೆಸಿ ಅದರ ಅಧ್ಯಕ್ಷರನ್ನು ಅಮೆರಿಕ ಕಗ್ಗೊಲೆ ಮಾಡಿದೆ. ಇರಾಕ್ ಅಧ್ಯಕ್ಷ ಸದ್ದಾಮ್ ಹುಸೇನ್ ಅವರ ಮೇಲೆ ಸಮೂಹ ವಿನಾಶಕ ಅಸ್ತ್ರ ಹೊಂದಿರುವ ಆರೋಪ ಹೊರಿಸಲಾಗಿತ್ತು. ಇದೆಲ್ಲವೂ ತನ್ನ ಹಿಡಿತದ ಮಾಧ್ಯಮಗಳನ್ನು ಬಳಸಿ ಅಮೆರಿಕ ನಡೆಸಿರುವ ಅಪಪ್ರಚಾರಗಳೇ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಕ್ಷದ ಜಿಲ್ಲಾ ಕಾರ್ಯದರ್ಶಿ ಜಿ.ಸಿದ್ದಗಂಗಪ್ಪ ಮಾತನಾಡಿದರು. ಜಿಲ್ಲಾ ಸಮಿತಿ ಸದಸ್ಯರಾದ ಬಿ.ಎನ್. ಮುನಿಕೃಷ್ಣಪ್ಪ, ಎಂ.ಎನ್. ರಘುರಾಮರೆಡ್ಡಿ, ರೈತ ಸಂಘದ ಮುಖಂಡರಾದ ಡಿ.ಟಿ ಮುನಿಸ್ವಾಮಿ, ಕಾರ್ಮಿಕ ಮುಖಂಡರಾದ ಜಿ ಮುಸ್ತಾಪ, ಕನ್ನಡ ಸಂಘಟನೆಗಳ ಮುಖಂಡರಾದ ರವಿಕುಮಾರ್, ವಿಜಯ್ ಕುಮಾರ್, ಯರಪ್ಪ, ಹಳ್ಳಿ ಮಕ್ಕಳ ಸಂಘದ ರಾಜ್ಯ ಉಪಾಧ್ಯಕ್ಷ ವೆಂಕಟರವಣಪ್ಪ, ಕರ್ನಾಟಕ ಪ್ರಾಂತ ರೈತ ಸಂಘದ ಶಿವಪ್ಪ, ಬಾಬು, ರಾಮಕೃಷ್ಣಪ್ಪ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.