ಶಿಡ್ಲಘಟ್ಟ: ತಾಲ್ಲೂಕಿನ ಮಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುತ್ತೂರು ಗ್ರಾಮಸ್ಥರು ವಾಸಕ್ಕೆ ಮನೆ ಇಲ್ಲವೆಂದು ಕೆರೆಯಂಗಳದಲ್ಲಿರುವ ಸರ್ಕಾರಿ ಜಾಗದಲ್ಲಿ ನೀವೇಶನ ಹಂಚಿಕೆ ಮಾಡುವಂತೆ ಒತ್ತಾಯಿಸಿ, ಅದೇ ಜಾಗವನ್ನು ಸ್ವಚ್ಛತೆಗೆ ಮುಂದಾಗಿದ್ದ ಗ್ರಾಮಸ್ಥರನ್ನು ಕಂದಾಯ ಅಧಿಕಾರಿಗಳು ತಡೆದಿದ್ದಾರೆ.
ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕ ಶಶಿಧರ್, ತಹಶೀಲ್ದಾರರ ಬಳಿ ಚರ್ಚಿಸಿದ ನಂತರ, ಅಂತಿಮಗೊಳಿಸುವ ತನಕ ಯಾವುದೇ ಕೆಲಸವನ್ನು ಮಾಡದಂತೆ ಸೂಚಿಸಿದ್ದಾರೆ.
ಮುತ್ತೂರು ಗ್ರಾಮದ ಮುಖಂಡ ವೇಣುಗೋಪಾಲ್, ‘ನಮ್ಮೂರಿನಲ್ಲಿ ನಾವು ಹಂದಿಗೂಡುಗಳಂತಿರುವ ಮನೆಗಳಲ್ಲಿ ವಾಸ ಮಾಡುತ್ತಿದ್ದೇವೆ. ಒಂದು ದ್ವಿಚಕ್ರ ವಾಹನವೂ ಹೋಗುವುದಕ್ಕೆ ಸಾಧ್ಯವಾಗದಂತಹ ರಸ್ತೆಗಳಲ್ಲಿ ಓಡಾಡುತ್ತಿದ್ದೇವೆ. ಒಂದೊಂದು ಮನೆಗಳಲ್ಲಿ ಸುಮಾರು 3-4 ಕುಟುಂಬಗಳವರು ವಾಸವಾಗಿದ್ದೇವೆ. ಸುಮಾರು 30 ವರ್ಷಗಳಿಂದ ನಮಗೆ ನಿವೇಶನಗಳನ್ನು ಹಂಚಿಕೆ ಮಾಡುವಂತೆ ಪ್ರತಿಯೊಂದು ಗ್ರಾಮಸಭೆಗಳಲ್ಲಿ, ಸರ್ಕಾರಿ ಕಾರ್ಯಕ್ರಮಗಳಲ್ಲಿ ಮನವಿಗಳು ಕೊಡುತ್ತಲೇ ಇದ್ದೇವೆ. ಆದರೆ, ಇದುವರೆಗೂ ಪ್ರಯೋಜನವಾಗಿಲ್ಲ’ ಎಂದು ಬೇಸರಿಸಿದರು.
‘ನಮ್ಮೂರಲ್ಲಿ ವಾಸ ಮಾಡಲು ಕಷ್ಟವಾಗಿದ್ದರಿಂದ ಕೆಲವರು ಬಂದು ಕೆರೆ ಅಂಗಳದಲ್ಲೆ ಸುಮಾರು 20 ವರ್ಷಗಳ ಹಿಂದೆ ಮನೆ ನಿರ್ಮಾಣ ಮಾಡಿಕೊಂಡಿದ್ದರು. ಹಣಕಾಸಿನ ತೊಂದರೆಯಿಂದಾಗಿ ಪೂರ್ಣಗೊಳಿಸಲು ಸಾಧ್ಯವಾಗದ ಕಾರಣ, ಮನೆಗಳು ನೆಲಸಮವಾಗಿವೆ’ ಎಂದರು.
ಗ್ರಾಮಸ್ಥ ಮಂಜುನಾಥ್, ‘ನಾವು ವಾಸವಾಗಿರುವ ಮನೆಗಳ ಪೈಕಿ ಹಲವರ ಮನೆಗಳ ಮೇಲ್ಛಾವಣಿಗಳು ಇಂದಿಗೂ ಜಂತಿಗೆಯಿಂದ ಕೂಡಿವೆ. ಆರ್ಥಿಕವಾಗಿ ಸಧೃಡರಾಗದ ಕಾರಣದಿಂದಾಗಿ ಮನೆಗಳನ್ನು ದುರಸ್ಥಿಮಾಡಿಕೊಳ್ಳುವುದಕ್ಕೂ ಸಾಧ್ಯವಾಗುತ್ತಿಲ್ಲ. ಕಾಲೊನಿಯಲ್ಲಿ ಶೌಚಾಲಯಗಳು ಕಟ್ಟಿಕೊಳ್ಳುವುದಕ್ಕೂ ಜಾಗವಿಲ್ಲ. ಊರಿನ ಸುತ್ತಮುತ್ತಲಿನಲ್ಲಿ ಎಲ್ಲಿಯೂ ಸರ್ಕಾರಿ ಜಾಗವಿಲ್ಲ. ಆದ್ದರಿಂದ ನಮ್ಮೂರಿಗೆ ಸೇರಿರುವ ಗಂಗನಹಳ್ಳಿಯ ಬಳಿಯಿರುವ ಸರ್ಕಾರಿ ಜಾಗದಲ್ಲಿ ನಮಗೆ ನಿವೇಶನಗಳನ್ನು ಮಂಜೂರು ಮಾಡಿಕೊಡಬೇಕು’ ಎಂದು ಒತ್ತಾಯಿಸಿದರು.
ತಹಶೀಲ್ದಾರ್ ತಿರ್ಮಾನಕ್ಕೆ ಬಿಟ್ಟಿದ್ದು
ಮುತ್ತೂರು ಸ.ನಂ.1 ರಲ್ಲಿ 153 ಎಕರೆ ಕೆರೆಯಿದೆ. ಗ್ರಾಮಸ್ಥರು ನಿವೇಶನಗಳು ಮಾಡಿಕೊಳ್ಳುವುದಕ್ಕೆ ಹೊರಟಿರುವ ಜಮೀನು ಕೆರೆ. ಈ ಹಿಂದೆಯೂ ಸಹಾ ಕೆರೆ ಎನ್ನುವ ಕಾರಣಕ್ಕೆ ಮನೆಗಳು ನಿರ್ಮಾಣ ಮಾಡಿಕೊಳ್ಳುವುದಕ್ಕೆ ಅವಕಾಶ ನೀಡಿಲ್ಲ. ತಹಶೀಲ್ದಾರ್ ಅವರ ಗಮನಕ್ಕೆ ತಂದಿದ್ದೇವೆ. ಅವರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಕಾದು ನೋಡಬೇಕಿದೆ.
-ಶಶಿಧರ್ ರಾಜಸ್ವ ನಿರೀಕ್ಷಕ ಜಂಗಮಕೋಟೆ ಹೋಬಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.