ADVERTISEMENT

ಶಿಡ್ಲಘಟ್ಟ| ಎಸ್ಐಆರ್: ಚುನಾವಣಾ ಸಂಚಾಲಕರ ಸಭೆ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2025, 6:25 IST
Last Updated 10 ನವೆಂಬರ್ 2025, 6:25 IST
ಶಿಡ್ಲಘಟ್ಟದ ಬಿಜೆಪಿ ಸೇವಾಸೌಧದಲ್ಲಿ ನಡೆದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕಾರ್ಯಕ್ರಮದ ಚುನಾವಣಾ ಸಂಚಾಲಕರ ಸಭೆ
ಶಿಡ್ಲಘಟ್ಟದ ಬಿಜೆಪಿ ಸೇವಾಸೌಧದಲ್ಲಿ ನಡೆದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕಾರ್ಯಕ್ರಮದ ಚುನಾವಣಾ ಸಂಚಾಲಕರ ಸಭೆ   

ಶಿಡ್ಲಘಟ್ಟ: ನಗರದ ಬಿಜೆಪಿ ಸೇವಾಸೌಧದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕಾರ್ಯಕ್ರಮದ ಚುನಾವಣಾ ಸಂಚಾಲಕರ ಸಭೆಯನ್ನು ಶನಿವಾರ ಹಮ್ಮಿಕೊಳ್ಳಲಾಯಿತು. 

ಸಭೆ ಉದ್ದೇಶಿಸಿ ಮಾತನಾಡಿದ ಸಂಸದ ಡಾ.ಕೆ. ಸುಧಾಕರ್, ‘ಕಾಂಗ್ರೆಸ್ ಪಕ್ಷವು ದೇಶಕ್ಕೆ ಕಂಟಕ. ರಾಷ್ಟ್ರಗೀತೆ ವಿರೋಧಿಸುವ ಮೂಲಕ ದೇಶ ವಿಭಜನೆಗೆ ಕಾರಣವಾದ ಹಿನ್ನೆಲೆ ಕಾಂಗ್ರೆಸ್ ಪಕ್ಷಕ್ಕೆ ಇದೆ’ ಎಂದು ಟೀಕಿಸಿದರು. 

ಮತದಾರರ ಪಟ್ಟಿಯನ್ನು ಪರಿಶುದ್ಧವಾಗಿಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ವಿಶೇಷ ಸಿದ್ಧತೆ ನಡೆಸಿದೆ. ಪ್ರತಿ ಜಿಲ್ಲೆಗೂ ಕೆಲವು ಸದಸ್ಯರ ತಂಡವನ್ನು ರಚಿಸಲಾಗಿದೆ. ಈ ತಂಡಗಳು ಪಕ್ಷದ ಕಾರ್ಯಕರ್ತರು ಮತ್ತು ಚುನಾವಣಾ ಆಯೋಗದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ. ಈ ತಂಡದ ಸದಸ್ಯರು ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದ ಮೇಲೆ ನಿಗಾ ವಹಿಸುತ್ತಾರೆ ಎಂದು ಹೇಳಿದರು.

ADVERTISEMENT

ಬೂತ್ ಮಟ್ಟದಲ್ಲಿ ಪಕ್ಷದ ಬಲವರ್ಧನೆಗೆ ಒತ್ತು ನೀಡುತ್ತಿರುವ ಬಿಜೆಪಿ, ಮುಂದಿನ ಪಂಚಾಯತ್ ಚುನಾವಣೆ ಮತ್ತು ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಸುತ್ತಿದೆ. ಈ ಕಾರ್ಯದಲ್ಲಿ ಮಹಿಳೆಯರು ಹೆಚ್ಚಾಗಿ ತೊಡಗಿಸಿಕೊಂಡಿರುವುದು ಉತ್ತಮ ಬೆಳವಣಿಗೆ. ಭಾರತೀಯ ಚುನಾವಣಾ ಆಯೋಗವು ದೇಶದಾದ್ಯಂತ ಕೈಗೊಳ್ಳಲಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು. 

ಜನರ ನಂಬಿಕೆ ಮತ್ತು ವಿಶ್ವಾಸವನ್ನು ಕಾಂಗ್ರೆಸ್ ಅಪಮಾನ ಮತ್ತು ಅಪಮೌಲ್ಯ ಮಾಡುತ್ತಿದೆ. ಅಧಿಕಾರದ ದಾಹ ಬಿಟ್ಟರೆ ಕಾಂಗ್ರೆಸ್‌ನವರಿಗೆ ರಾಷ್ಟ್ರೀಯತೆ, ದೇಶದ ಬಗ್ಗೆ ಅಭಿಮಾನ ಅಥವಾ ಕಾಳಜಿ ಇಲ್ಲ. ಅಧಿಕಾರಕ್ಕಾಗಿ ಇವರು ದೇಶವನ್ನು ಎಷ್ಟು ಬಾರಿಯಾದರೂ ವಿಭಜಿಸಲು ಸಿದ್ಧರಿದ್ದಾರೆ. ಕೆಲವು ಧರ್ಮಗಳನ್ನು ಓಲೈಕೆ ಮಾಡುವ ಮೂಲಕ ದೇಶ ಹಾಳುಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಬಿಜೆಪಿ ಜಿಲ್ಲಾಧ್ಯಕ್ಷ ರಾಮಚಂದ್ರಗೌಡ, ರಾಜ್ಯ ಸಂಚಾಲಕ ಜಗದೀಶ್ ಹಿರೇಮನಿ, ನಿಶ್ಚಿತ, ಎಂ. ರಾಜಣ್ಣ, ಮುರುಳಿ, ಮಧು, ಸೀಕಲ್ ಆನಂದ ಗೌಡ, ಸುರೇಂದ್ರ ಗೌಡ, ನರೇಶ್, ರಾಜಣ್ಣ ಸೇರಿದಂತೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.