ADVERTISEMENT

ಅಂತರ್ಜಲ ವೃದ್ಧಿಗೆ ನೀರಿನ ಸಂರಕ್ಷಣೆ ಅಗತ್ಯ: ಹಿರಣ್ಯಹಳ್ಳಿ ನಾಗರಾಜ್

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2021, 2:56 IST
Last Updated 27 ಆಗಸ್ಟ್ 2021, 2:56 IST
ಚಿಂತಾಮಣಿ ತಾಲ್ಲೂಕಿನ ಕಾಗತಿ ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಟಲ್ ಭೂಜಲ ಯೋಜನೆಯ ಅನುಷ್ಠಾನ ಗ್ರಾಮ ಸಭೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಿರಣ್ಯಹಳ್ಳಿ ನಾಗರಾಜ್ ಉದ್ಘಾಟಿಸಿದರು
ಚಿಂತಾಮಣಿ ತಾಲ್ಲೂಕಿನ ಕಾಗತಿ ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಟಲ್ ಭೂಜಲ ಯೋಜನೆಯ ಅನುಷ್ಠಾನ ಗ್ರಾಮ ಸಭೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಿರಣ್ಯಹಳ್ಳಿ ನಾಗರಾಜ್ ಉದ್ಘಾಟಿಸಿದರು   

ಚಿಂತಾಮಣಿ: ಕೇಂದ್ರ ಸರ್ಕಾರ ಅಂತರ್ಜಲ ವೃದ್ಧಿ ಹಾಗೂ ನೀರಿನ ಸಂರಕ್ಷಣೆಗಾಗಿ ಅಟಲ್ ಭೂಜಲ ಯೋಜನೆಯನ್ನು ಅನುಷ್ಠಾನಗೊಳಿಸಿದೆ ಎಂದು ಕಾಗತಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಿರಣ್ಯಹಳ್ಳಿ ನಾಗರಾಜ್ ತಿಳಿಸಿದರು.

ತಾಲ್ಲೂಕಿನ ಕಾಗತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷಿ ತರಬೇತಿ ಕೇಂದ್ರದಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ, ಎನ್.ಆರ್.ಡಿ.ಎಸ್ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಟಲ್ ಭೂಜಲ ಯೋಜನೆಯ ಅನುಷ್ಠಾನ ಗ್ರಾಮ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರೈತರು ನೀರಿಗಾಗಿ ಬಹಳ ಕಷ್ಟಪಡುತ್ತಿದ್ದಾರೆ. ಕೆಲವೆಡೆ ಕೆ.ಸಿ ವ್ಯಾಲಿ ನೀರು ಹರಿಸುತ್ತಿರುವುದರಿಂದ ಸ್ಪಲ್ಪಮಟ್ಟಿಗೆ ಅಂತರ್ಜಲ ವೃದ್ಧಿಯಾಗಿದೆ. ರೈತರು ಮಳೆ ನೀರನ್ನು ತಡೆದು ಶೇಖರಿಸಿ ಇಂಗಿಸುವ ಕಾರ್ಯ ಮಾಡಬೇಕಾಗಿದೆ ಎಂದು ಹೇಳಿದರು.

ADVERTISEMENT

ಪೂರ್ವಜರು ನಮಗಾಗಿ ಒಂದಿಷ್ಟು ನೀರಿನ ಮೂಲಗಳನ್ನು ಉಳಿಸಿದ್ದಾರೆ. ಅದೇ ರೀತಿ ನಮ್ಮ ಮಕ್ಕಳಿಗಾಗಿ ಮುಂದಿನ ಜೀವಸಂಕುಲಕ್ಕಾಗಿ ನೀರನ್ನು ಶೇಖರಿಸುವ ಯೋಜನೆಗಳನ್ನು ರೂಪಿಸಬೇಕಾಗುತ್ತದೆ. ಕೆರೆ, ಕುಂಟೆ, ಚೆಕ್‌ ಡ್ಯಾಂ ನಿರ್ಮಿಸಿ ನೀರು ಹರಿಯದಂತೆ ತಡೆದು ಅಂತರ್ಜಲ ವೃದ್ಧಿಸಬೇಕು ಎಂದು ಸಲಹೆ ನೀಡಿದರು.

ಕೃಷಿ ಇಲಾಖೆಯ ಅಧಿಕಾರಿ ನೇತ್ರಾವತಿ ಮಾತನಾಡಿ, ರೈತನ ಮಿತ್ರ ಎರೆಹುಳು ತೊಟ್ಟಿಯನ್ನು ಸ್ಮರಿಸಿಕೊಳ್ಳೋಣ. ಸಾವಯವ ಕೃಷಿಯನ್ನು ಉತ್ತೇಜಿಸಬೇಕು. ರೈತರು ಜಮೀನಿನಲ್ಲಿ ನೀರಿನ ಕೊಳವೆ ಬಾವಿ ಕೊರೆಸಿ ಹಣವನ್ನು ಪೋಲು ಮಾಡುತ್ತಿದ್ದಾರೆ. ಕೊರೆಸಿದಂತಹ ಕೊಳವೆಬಾವಿಗಳಿಗೆ ನೀರು ಇಂಗುವ ಗುಂಡಿಗಳನ್ನು ಮಾಡುವುದು ಬೆರಳೆಣಿಕೆ ಯಷ್ಟೇ ಕಂಡು ಬರುತ್ತಿರುವುದು ವಿಷಾದನೀಯ ಎಂದರು.

ಕೇಂದ್ರ, ರಾಜ್ಯ ಸರ್ಕಾರ ಮಳೆ ನೀರನ್ನು ಇಂಗಿಸಿ ಅಂತರ್ಜಲ ವೃದ್ಧಿಗಾಗಿ ಅಟಲ್ ಭೂಜಲ ಯೋಜನೆಯನ್ನು ಅನುಷ್ಠಾನಗೊಳಿಸಿವೆ ಎಂದರು.

ಕೃಷಿ, ತೋಟಗಾರಿಕೆ, ಅರಣ್ಯ, ರೇಷ್ಮೆ ಹಾಗೂ ಕಂದಾಯ, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ರೈತರಿಗೆ ಮಾಹಿತಿ ನೀಡಿದರು.

ಅಟಲ್ ಭೂಜಲ ಯೋಜನೆ ಎನ್.ಆರ್.ಡಿ.ಎಸ್ ಸಂಸ್ಥೆಯ ಮುಖ್ಯಸ್ಥ ವೆಂಕಟರವಣಸ್ವಾಮಿ, ತೋಟಗಾರಿಕೆ ಇಲಾಖೆಯ ಗಂಗುಲಪ್ಪ, ಕೃಷಿ ಇಲಾಖೆಯ ಉಪ ನಿರ್ದೇಶಕಿ ಅನುರೂಪಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಿ.ಎನ್. ಲೋಕೇಶ್ ಸೇರಿದಂತೆ ಗ್ರಾಮದ ರೈತ ಮುಖಂಡರು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.