ಗೌರಿಬಿದನೂರು: ‘ವಾಟದಹೊಸಹಳ್ಳಿ ಕೆರೆ ನೀರು ನಗರಕ್ಕೆ ಹರಿಯುವುದು ಸಾಧ್ಯವೇ ಇಲ್ಲ. ಇದು ನಗರವಾಸಿಗಳ ಮೂಗಿಗೆ ತುಪ್ಪ ಒರೆಸುವ ಕೆಲಸ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ವಿ ಮಂಜುನಾಥ್ ಹೇಳಿದರು.
ತಾಲ್ಲೂಕು ಆಡಳಿತ ಕಚೇರಿಯ ಮುಂದೆ ವಾಟದಹೊಸಹಳ್ಳಿ ಭಾಗದ ರೈತರು ಕಳೆದ ಐವತ್ತು ದಿನಗಳಿಂದ ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು.
‘ಶಾಸಕರು ಏನೇ ಆದರೂ ಎತ್ತಿನಹೊಳೆ ನೀರನ್ನು ವಾಟದಹೊಸಹಳ್ಳಿ ಕೆರೆಗೆ ಹರಿಸಿ ಅಲ್ಲಿನ ಕೆರೆ ನೀರನ್ನು ನಗರಕ್ಕೆ ತಂದೇ ತರುವೆ ಎಂದು ಹಠಕ್ಕೆ ಬಿದ್ದಿದ್ದಾರೆ. ರೈತರ ಬಳಿ ನಾನು ಮಾತನಾಡುವುದಿಲ್ಲ ಎಂದು ಬಾಲಿಷ, ಅಪ್ರಬುದ್ಧ ಹೇಳಿಕೆ ನೀಡುತ್ತಿದ್ದಾರೆ. ಎತ್ತಿನಹೊಳೆ ಭಾಗದಲ್ಲಿ ಕಳೆದ ವರ್ಷ ಎಂಟು ಟಿಎಂಸಿ ಮಳೆ ಬಿದ್ದಿದೆ. ಎತ್ತಿನಹೊಳೆ ಯೋಜನೆಗೆ ಬೇಕಾಗಿರುವುದು 24 ಟಿಎಂಸಿ ನೀರು. ಆ ಭಾಗದಲ್ಲಿ ಸರಿಯಾಗಿ ಮಳೆ ಬೀಳುತ್ತಿಲ್ಲ. ಇನ್ನು ಇಲ್ಲಿಗೆ ನೀರು ಹರಿಯುವುದು ಯಾವಾಗ. ಇದು ಕಾರ್ಯ ಸಾಧುವಾದ ಯೋಜನೆಯಲ್ಲ ಎಂದರು.
‘ಪ್ರಜಾವಾಣಿ ಪತ್ರಿಕೆಯಲ್ಲಿ, ಎಂಟು ಟಿಎಂಸಿಗೆ ಇಳಿದ ಎತ್ತಿನಹೊಳೆ ಇಳುವರಿ ಎಂದು ಈ ಯೋಜನೆ ಬಗ್ಗೆ ಸ್ಪಷ್ಟವಾಗಿ ಬರೆದಿದ್ದಾರೆ. ₹70 ಕೋಟಿ ವೆಚ್ಚದಲ್ಲಿ ರೂಪಿಸಿರುವ ವಾಟದಹೊಸಹಳ್ಳಿ ಯೋಜನೆಯಿಂದ ಯಾವುದೇ ಕಾರಣಕ್ಕೂ ನಗರಕ್ಕೆ ನೀರು ಬರುವುದಿಲ್ಲ. ಇದರಿಂದ ಗುತ್ತಿಗೆದಾರರಿಗೆ ಮಾತ್ರ ಅನುಕೂಲ. ಶಾಸಕರು ವಾಟದಹೊಸಹಳ್ಳಿ ಕೆರೆ ಬದಲು, ನಗರಕ್ಕೆ ಹೊಂದಿಕೊಂಡಿರುವ ದ್ಯಾವಪ್ಪನ ಕೆರೆ ಕಲ್ಲೂಡಿ ಕೆರೆ, ಗೊಟಕನಾಪುರ ಕೆರೆ ಅಭಿವೃದ್ಧಿ ಮಾಡಬಹುದಿತ್ತು. ಇದರಿಂದ ನಗರದಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗುತ್ತಿತ್ತು’ ಎಂದರು.
‘ನಗರಕ್ಕೆ ತುರ್ತಾಗಿ ಶಾಶ್ವತ ಹಾಗೂ ವೈಜ್ಞಾನಿಕವಾದ ಯೋಜನೆ ಮೂಲಕ ಕುಡಿಯುವ ನೀರಿನ ಯೋಜನೆ ರೂಪಿಸಬೇಕಾಗಿದೆ. ಈ ಬಗ್ಗೆ ಮಾಜಿ ಶಾಸಕರ ಅಧ್ಯಕ್ಷತೆಯಲ್ಲಿ ಸರ್ವ ಪಕ್ಷಗಳ ಹಾಗೂ ತಾಲ್ಲೂಕಿನ ಎಲ್ಲಾ ಮುಖಂಡರ ಜೊತೆ ದುಂಡು ಮೇಜಿನ ಸಭೆ ನಡೆಸಿ ನಗರಕ್ಕೆ ನೀರು ಹರಿಸುವುದು ಹಾಗೂ ವಾಟದಹೊಸಹಳ್ಳಿ ರೈತರ ನೀರಿನ ಹಕ್ಕನ್ನು ಉಳಿಸುವ ಬಗ್ಗೆ ಆದಷ್ಟು ಬೇಗ ಚರ್ಚೆ ನಡೆಸಲಾಗುವುದು’ ಎಂದು ತಿಳಿಸಿದರು.
ಕೆರೆ ಅಚ್ಚುಕಟ್ಟುದಾರರ ಸಂಘದ ಅಧ್ಯಕ್ಷ ಮಾಳಪ್ಪ, ಮಧುಸೂರ್ಯ ನಾರಾಯಣ ರೆಡ್ಡಿ, ಹರ್ಷವರ್ಧನ್ ರೆಡ್ಡಿ, ಕೋಡಿರ್ಲಪ್ಪ, ಲಕ್ಷ್ಮಿನಾರಾಯಣ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.