ADVERTISEMENT

ನೀರು, ವಸತಿ ಮೊದಲ ಆದ್ಯತೆ

ಆವಲಗುರ್ಕಿ ಗ್ರಾಮದಲ್ಲಿ ಸ್ತ್ರೀ ಶಕ್ತಿ ಸಂಘಗಳಿಗೆ ಸಾಲ ಹಾಗೂ ರೈತರಿಗೆ ಬೆಳೆ ಸಾಲ ವಿತರಣೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2020, 14:16 IST
Last Updated 11 ಜುಲೈ 2020, 14:16 IST
ಕಾರ್ಯಕ್ರಮದಲ್ಲಿ ಸಾಲದ ಚೆಕ್‌ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಾಲದ ಚೆಕ್‌ಗಳನ್ನು ವಿತರಿಸಲಾಯಿತು.   

ಚಿಕ್ಕಬಳ್ಳಾಪುರ: ‘ರೈತರ ಭೂಮಿಗಳಿಗೆ ನೀರು ಕೊಡುವುದು ಮತ್ತು ಬಡ ಜನರಿಗೆ ವಸತಿ ಕಲ್ಪಿಸುವುದು ನನ್ನ ಮೊದಲ ಆದ್ಯತೆ. ಮುಂಬರುವ ದಿನಗಳಲ್ಲಿ ಮಾದರಿ ಜಿಲ್ಲೆ ರೂಪಿಸುವ ಕನಸಿದೆ’ ಎಂದು ಜಿಲ್ಲಾ ಉಸ್ತುವಾರಿ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ತಾಲ್ಲೂಕಿನ ಆವಲಗುರ್ಕಿ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಡಿಸಿಸಿ ಬ್ಯಾಂಕ್ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರ ಬ್ಯಾಂಕ್ ವತಿಯಿಂದ ಶೂನ್ಯ ಬಡ್ಡಿ ದರದಲ್ಲಿ ಸ್ತ್ರೀ ಶಕ್ತಿ ಸಂಘಗಳಿಗೆ ಸಾಲ ವಿತರಣೆ ಹಾಗೂ ರೈತರಿಗೆ ಬೆಳೆ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಈವರೆಗೆ ಈ ಭಾಗದಲ್ಲಿ 1.30 ಕೋಟಿ ಸಾಲ ಮನ್ನಾ ಆಗಿದೆ. ಈಗ ನೀಡುತ್ತಿರುವ ಸಾಲಕ್ಕೆ ಬಡ್ಡಿ ಇರುವುದಿಲ್ಲ. ಮಹಿಳೆಯರು ಆರ್ಥಿಕವಾಗಿ ಮುಂದೆ ಬರಲಿ ಎಂಬ ಉದ್ದೇಶದಿಂದ ಬಡ್ಡಿಯನ್ನು ಸರ್ಕಾರವೇ ಭರಿಸಲಿದೆ. ಮಹಿಳೆಯೊಬ್ಬಳು ಕಲಿತರೆ ಶಾಲೆ ತೆರೆದಂತೆ. ಅಂತೆಯೇ ಮಹಿಳೆಯೊಬ್ಬಳು ಸಂಪಾದನೆ ಮಾಡಲು ಕಲಿತರೆ ಬ್ಯಾಂಕ್‌ ತೆರೆದಂತೆ’ ಎಂದು ತಿಳಿಸಿದರು.

ADVERTISEMENT

‘ಮಹಿಳೆಯರಿಗೆ ಚೈತನ್ಯ ತುಂಬುವ ನಿಟ್ಟಿನಲ್ಲಿ ಸರ್ಕಾರ ಮಹಿಳೆಯರಿಗೆ ಸಾಲ ಸವಲತ್ತು ನೀಡುತ್ತಿದೆ. ಸಾಲದ ಹಣವನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಉದ್ಯೋಗಕ್ಕೆ ಪೂರಕವಾಗಿ ಕೌಶಲ ತರಬೇತಿ ಪಡೆದುಕೊಳ್ಳಬೇಕು. ಆರ್ಥಿಕವಾಗಿ ಬೇರೆಯವರಿಗೆ ಸ್ಫೂರ್ತಿದಾಯಕರಾಗಬೇಕು’ ಎಂದರು.

‘ಈ ಭಾಗದಲ್ಲಿ ಬಡವರು ಹೆಚ್ಚಿದ್ದಾರೆ. ರೈತರು ಸಶಕ್ತರಾಗಬೇಕಾದರೆಭೂಮಿ ಮತ್ತು ನೀರು ಬೇಕು. ಅದಕ್ಕಾಗಿ ಎತ್ತಿನಹೊಳೆ, ಎಚ್‌.ಎನ್.ವ್ಯಾಲಿ ಯೋಜನೆ ಜಾರಿಗೆ ತರಲಾಗುತ್ತಿದೆ. ಈಗಾಗಲೇ ಎಚ್‌.ಎನ್.ವ್ಯಾಲಿ ನೀರು ಹರಿಸಲಾಗುತ್ತಿದೆ. ಕೆಲವೇ ತಿಂಗಳಲ್ಲಿ 26 ಕೆರೆಗಳಿಗೆ ನೀರು ತುಂಬಲಿವೆ. ಅದರಿಂದ ಕೊಳವೆಬಾವಿಗಳು ಮರು ಪೂರಣಗೊಂಡು ರೈತರು ಕೃಷಿ ಮಾಡಲು ಸಹಕಾರಿಯಾಗಲಿದೆ’ ಎಂದು ಅಭಿಪ್ರಾಯಪಟ್ಟರು.

‘ಜಿಲ್ಲೆಯಲ್ಲಿ ಇಂದಿಗೂ ಮಳೆಗಾಲದಲ್ಲೂ ಬರದ ವಾತಾವರಣವಿದೆ. ಹೀಗಾಗಿ, ಮಳೆಗಾಲದಲ್ಲೂ ಕುಡಿಯುವ ನೀರಿಗೆ ವ್ಯವಸ್ಥೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿರುವೆ. ಮುಂದಿನ ದಿನಗಳಲ್ಲಿ ರಂಗಧಾಮ ನೀರಾವರಿ ಯೋಜನೆಗೆ ಉದ್ದೇಶಿಸಿದ್ದೇವೆ’ ಎಂದು ಹೇಳಿದರು.

‘ನೂತನ ತಾಲ್ಲೂಕು ಮಂಚೇನಹಳ್ಳಿ ಅನೇಕ ಗ್ರಾಮಗಳಿಗೆ ದಂಡಿಗಾನಹಳ್ಳಿ ಕೆರೆಯಿಂದ ನೀರು ಪೂರೈಸುವ ₹45 ಕೋಟಿ ಯೋಜನೆ ಮಂಜೂರಾಗಿದೆ. ಟೆಂಡರ್‌ ಆಗಿ ಕಾಮಗಾರಿ ಆರಂಭವಾಗಬೇಕಿದೆ. ಮಂಡಿಕಲ್ಲು ಹೋಬಳಿಯಲ್ಲಿ ಬೂದಗುಂಡ್ಲು ಜಲಾಶಯ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಆವಲಗುರ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 25 ಸ್ತ್ರೀ ಶಕ್ತಿ ಸಂಘಗಳಿಗೆ ₹90.68 ಲಕ್ಷ ಹಾಗೂ 60 ರೈತರಿಗೆ ₹70 ಲಕ್ಷ ಬೆಳೆ ಸಾಲ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಸುಮಾರು 200 ಜನ ಫಲಾನುಭವಿಗಳಿಗೆ ಸಾಮಾಜಿಕ ಭದ್ರತಾ ಯೋಜನೆ ಅಡಿ ವಿವಿಧ ಪಿಂಚಣಿ ಆದೇಶ ಪ್ರತಿಗಳನ್ನು ನೀಡಲಾಯಿತು.

ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಫೌಜಿ಼ಯಾ ತರನ್ನಮ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ದ್ಯಾವಣ್ಣ, ವೇದಾ ಸುದರ್ಶನರೆಡ್ಡಿ, ವಿಎಸ್ಎಸ್ಎನ್ ಅಧ್ಯಕ್ಷ ಜಯರಾಮರೆಡ್ಡಿ, ಎಪಿಎಂಸಿ ಅಧ್ಯಕ್ಷ ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಮಲಿಂಗಪ್ಪ, ಮುಖಂಡರಾದ ಕೆ.ವಿ.ನಾಗರಾಜ್, ಮರಳಕುಂಟೆ ಕೃಷ್ಣಮೂರ್ತಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.