ADVERTISEMENT

ವಿಘ್ನೇಶ್ವರ ‌ಬಡಾವಣೆಯಲ್ಲಿ ನೀರಿಗೆ ವಿಘ್ನ

ಜಿಲ್ಲಾ ಉಸ್ತುವಾರಿ ಸಚಿವರ ತವರಲ್ಲೇ ನೀರಿನ ಹಾಹಾಕಾರ

ಎ.ಎಸ್.ಜಗನ್ನಾಥ್
Published 23 ಜೂನ್ 2019, 16:41 IST
Last Updated 23 ಜೂನ್ 2019, 16:41 IST
ನೀರಿಗಾಗಿ ಆಗ್ರಹಿಸಿ ಪ್ರತಿಭಟಿಸುತ್ತಿರುವ ವಿಘ್ನೇಶ್ವರ ಬಡಾವಣೆಯ ನಾಗರಿಕರು
ನೀರಿಗಾಗಿ ಆಗ್ರಹಿಸಿ ಪ್ರತಿಭಟಿಸುತ್ತಿರುವ ವಿಘ್ನೇಶ್ವರ ಬಡಾವಣೆಯ ನಾಗರಿಕರು   

ಗೌರಿಬಿದನೂರು: ಕುಡಿಯಲು‌ ನೀರಿಲ್ಲ, ಚರಂಡಿಗಳು ಸ್ಪಚ್ಛಗೊಂಡಿಲ್ಲ, ಬೀದಿ ದೀಪಗಳು ಬೆಳಗುವುದಿಲ್ಲ, ಸೊಳ್ಳೆಗಳ ಕಾಟ ತಪ್ಪಿಲ್ಲ...ಇದು ಇಲ್ಲಿನ ವಿಘ್ನೇಶ್ವರ ‌ಬಡಾವಣೆಯ ನಿವಾಸಿಗಳ ಗೋಳು.

ಜಿಲ್ಲಾ ಉಸ್ತುವಾರಿ ಸಚಿವ ಶಿವಶಂಕರರೆಡ್ಡಿ ಅವರ ಸ್ವಕ್ಷೇತ್ರದಲ್ಲಿ ಸಮಸ್ಯೆಗಳು ಯಾವ ರೀತಿ ಇದೆ ಎನ್ನುವುದನ್ನು ಈ ಬಡಾವಣೆ ಒಂದು ನಿದರ್ಶನ. ನಗರಸಭೆಯಿಂದ ಕೂಗಳತೆಯ ದೂರದಲ್ಲಿರುವ ವಿಘ್ನೇಶ್ವರ ‌ಬಡಾವಣೆಯು ಈ ಹಿಂದೆ ಹಿರೇಬಿದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿತ್ತು. ಆಗ ಸಮರ್ಪಕವಾದ ಕುಡಿಯುವ ನೀರು, ಚರಂಡಿಗಳ ಸ್ವಚ್ಛತೆ, ಬೀದಿ ದೀಪಗಳ ನಿರ್ವಹಣೆ ಸೇರಿದಂತೆ ಎಲ್ಲವೂ ವ್ಯವಸ್ಥಿತವಾಗಿತ್ತು. ಆದರೆ ವರ್ಷದ ಹಿಂದಷ್ಟೇ ಈ ಬಡಾವಣೆಯನ್ನು ನಗರಸಭೆ ವ್ಯಾಪ್ತಿಗೆ ಸೇರಿಸಲಾಗಿದೆ. ಅಂದಿನಿಂದ ಬಡಾವಣೆಯಲ್ಲಿ ಸಮಸ್ಯೆಗಳ‌ ಸರಮಾಲೆ ಎದುರಾಗಿದೆ ಎನ್ನುತ್ತಾರೆ‌ ಸ್ಥಳೀಯರು.

ಸದ್ಯ ಬಡಾವಣೆ ವ್ಯಾಪ್ತಿಯಲ್ಲಿ ಮೂರು ಕೊಳವೆ ಬಾವಿಗಳಿವೆ. ಎಲ್ಲವೂ ಕಾರ್ಯನಿರ್ವಹಿಸುತ್ತಿವೆ. ಉತ್ತಮ ನೀರು ಇದೆ. ಆದರೆ ನಗರಸಭೆ ಅಧಿಕಾರಿಗಳು ಪಕ್ಕದ ‌ಬಡಾವಣೆಗಳಿಗೂ ಈ ಕೊಳವೆ ಬಾವಿಯಿಂದ ನೀರು ಸರಬರಾಜು‌ ಮಾಡುತ್ತಿದ್ದಾರೆ. ಈ ಬಗ್ಗೆ ‌ಅನೇಕ ಬಾರಿ ಅಧಿಕಾರಿಗಳಿಗೆ ದೂರು ನೀಡಿ‌ ಮನವಿ ಮಾಡಿದರೂ‌ ಯಾವುದೇ ಕ್ರಮ ಕೈಗೊಂಡಿಲ್ಲ. ದೀಪದಡಿಯಲ್ಲಿ ಸದಾ ಕತ್ತಲು ಎಂಬಂತೆ ಈ‌ ಬಡಾವಣೆಯಲ್ಲಿ ಉತ್ತಮ ನೀರು ಲಭ್ಯವಾದರೂ ಅದನ್ನು ಸ್ಥಳೀಯರಿಗೆ ಪೂರೈಸುವಲ್ಲಿ ನಗರಸಭೆ ವಿಫಲವಾಗಿದೆ ಎನ್ನುತ್ತಾರೆ ವಿಘ್ನೇಶ್ವರ ‌ಬಡಾವಣೆಯ ನಿವಾಸಿ ಮಲ್ಲಪ್ಪ. ಇದರಿಂದ ಬಡಾವಣೆಗೆ ನೀರಿನ ಸಮಸ್ಯೆ ಹೆಚ್ಚಿದೆ.

ADVERTISEMENT

ನಮ್ಮ ಬಡಾವಣೆಯ ಜನರು ಬಸಕಾಲದಲ್ಲಿ ಕಂದಾಯಗಳನ್ನು ಕಟ್ಟುತ್ತಿದ್ದಾರೆ. ಆದರೂ ಮೂಲಸೌಕರ್ಯ ಒದಗಿಸುವಲ್ಲಿ ಅಧಿಕಾರಿಗಳು ವಿಫಲವಾಗಿರುವುದು ನಾಚಿಕೆಗೇಡು. ಕಳೆದ 6 ತಿಂಗಳಿನಿಂದ ಬಡಾವಣೆಗೆ ನೀರು‌ ಬಂದಿಲ್ಲ. ಇದರಿಂದ ಪ್ರತಿ ವಾರಕ್ಕೊಂದರಂತೆ ತಿಂಗಳಿಗೆ ನಾಲ್ಕು ಟ್ಯಾಂಕರ್ ನೀರನ್ನು ಹಣ ನೀಡಿ ಖರೀದಿಸುತ್ತಿದ್ದೇವೆ. ಇಲ್ಲಿನ ವಸ್ತುಸ್ಥಿತಿಯ ‌ಬಗ್ಗೆ ಅಧಿಕಾರಿಗಳಿಗೆ ತಿಳಿದಿದ್ದರೂ ಸಮಸ್ಯೆ ಪರಿಹಾರಕ್ಕೆ ಮುಂದಾಗಿಲ್ಲ ಎನ್ನುವರು ಪದ್ಮಿನಿ.

ಈ ಬಗ್ಗೆ ಮಾಹಿತಿ ಪಡೆಯಲು ಪ್ರಯತ್ನಿಸಿದಾಗ ನಗರಸಭೆ ಆಯುಕ್ತ ಉಮಾಶಂಕರ್ ಹಾಗೂ ಎಂಜಿನಿಯರ್ ಮುರಳೀಧರ್ ಅವರು ಸಂಪರ್ಕಕ್ಕೆ ಸಿಗಲಿಲ್ಲ.

ಪ್ರತಿಭಟನೆಯ ಎಚ್ಚರಿಕೆ
ಸಮರ್ಪಕ ನೀರು ಪೂರೈಸಿ ಎಂದು ನಾಲ್ಕೈದು ಬಾರಿ ಲಿಖಿತ ಮನವಿಯನ್ನು ನಗರಸಭೆ ಅಧಿಕಾರಿಗಳಿಗೆ ನೀಡಿದ್ದೇವೆ. ಎರಡು ಬಾರಿ ಪ್ರತಿಭಟನೆ ಮಾಡಿದರೂ ಈ ಭಾಗಕ್ಕೆ ನೀರು ಕೊಡಲು ಮತ್ತು ಸ್ವಚ್ಛತೆಯ ಬಗ್ಗೆ ಗಮನಿಸಲು ಅಧಿಕಾರಿಗಳು ಮುಂದಾಗುತ್ತಿಲ್ಲ. ಇದೀಗ ಮಹಿಳೆಯರು, ಮಕ್ಕಳು, ವೃದ್ದರು ಸೇರಿದಂತೆ ನೀರಿಗಾಗಿ ಬೀದಿಗಿಳಿಯುವ ಪರಿಸ್ಥಿತಿ‌ ಇದೆ. ಜಿಲ್ಲಾ ಉಸ್ತುವಾರಿ ಸಚಿವರ ತವರಲ್ಲೇ ಇಂತಹ ಪರಿಸ್ಥಿತಿ ಬಂದರೂ ಯಾರೂ‌ ಗಮನಿಸುತ್ತಿಲ್ಲ. ಇದು ನಮ್ಮ ದುರ್ದೈವ ಎಂದು ಅಸಮಾಧಾನ ವ್ಯಕ್ತಪಡಿಸುವರು ನಿವಾಸಿ ಚಂದ್ರಶೇಖರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.