ADVERTISEMENT

ಚಿಕ್ಕಬಳ್ಳಾಪುರ| 44 ಗ್ರಾಮಗಳಲ್ಲಿ ನೀರಿಗೆ ಹಾಹಾಕಾರ

ಪಿ.ಎಸ್.ರಾಜೇಶ್
Published 26 ಏಪ್ರಿಲ್ 2020, 19:30 IST
Last Updated 26 ಏಪ್ರಿಲ್ 2020, 19:30 IST
ಬಾಗೇಪಲ್ಲಿ ತಾಲ್ಲೂಕಿನ ಗೌನಪಲ್ಲಿ ಗ್ರಾಮದಲ್ಲಿ ಸಾರ್ವಜನಿಕ ನಲ್ಲಿ ಬಳಿ ಕುಡಿಯುವ ನೀರಿಗಾಗಿ ಕಾಯುತ್ತಿರುವ ಮಹಿಳೆಯರು
ಬಾಗೇಪಲ್ಲಿ ತಾಲ್ಲೂಕಿನ ಗೌನಪಲ್ಲಿ ಗ್ರಾಮದಲ್ಲಿ ಸಾರ್ವಜನಿಕ ನಲ್ಲಿ ಬಳಿ ಕುಡಿಯುವ ನೀರಿಗಾಗಿ ಕಾಯುತ್ತಿರುವ ಮಹಿಳೆಯರು   

ಬಾಗೇಪಲ್ಲಿ: ತಾಲ್ಲೂಕಿನಲ್ಲಿ ಮಳೆಯ ಅಭಾವ, ಅಂತರ್ಜಲದ ಕುಸಿತ, ಬತ್ತುತ್ತಿರುವ ಕೊಳವೆಬಾವಿಗಳ ಕಾರಣಕ್ಕೆ ಪ್ರಸ್ತುತ 44 ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ ತಲೆದೋರಿದೆ.

ಸದ್ಯ 34 ಗ್ರಾಮಗಳಲ್ಲಿ ಖಾಸಗಿ ಕೊಳವೆಬಾವಿಗಳಿಂದ ಹಾಗೂ 10 ಹಳ್ಳಿಗಳಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಆದರೂ ದಿನೇ ದಿನೇ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಲ್ಭಣಗೊಳ್ಳುತ್ತಿದೆ.

ತಾಲ್ಲೂಕಿನಲ್ಲಿ ನದಿ, ನಾಲೆಗಳಿಲ್ಲದ ಬಯಲುಸೀಮೆ ಪ್ರದೇಶವಾಗಿದೆ. ಈ ಭಾಗದ ಜನತೆ ಎಲ್ಲದಕ್ಕೂ ಮಳೆರಾಯನನ್ನೇ ನಂಬಿ ಜೀವನ ಸಾಗಿಸಬೇಕಾಗಿದೆ. ಬೇಸಿಗೆ ಆರಂಭಕ್ಕೂ ಮುನ್ನವೇ ತಾಲ್ಲೂಕಿನ ಎಲ್ಲಾ ಕೆರೆ ಕುಂಟೆಗಳು ಒಣಗಿ ಆಟದ ಮೈದಾನಗಳಾಗಿವೆ.‌

ADVERTISEMENT

ಇನ್ನೊಂದೆಡೆ ಅಂತರ್ಜಲ ಪಾತಾಳಕ್ಕೆ ಇಳಿದಿದೆ. ಒಂದೂವರೆ ಸಾವಿರ ಅಡಿಗಳು ಕೊಳವೆಬಾವಿ ಕೊರೆದರೂ, ನೀರು ಸಿಗದಂತೆ ಆಗಿದೆ. ಅಸ್ತಿತ್ವದಲ್ಲಿರುವ ಕೊಳವೆಬಾವಿಗಳು ಬತ್ತುತ್ತಿರುವುದರಿಂದ ಇದೀಗ ಕುಡಿಯುವ ನೀರಿಗೂ ಬರ ಆರಿಸಿಕೊಳ್ಳುತ್ತಿದೆ.

ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಕೊಳವೆಬಾವಿಗಳು ಇದ್ದರೂ ಅಂತರ್ಜಲ ಕುಸಿತದಿಂದಾಗಿ ಸಮರ್ಪಕವಾಗಿ ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಅನೇಕ ಹಳ್ಳಿಗಳಲ್ಲಿ ಕುಡಿಯುವ ನೀರಿಗಾಗಿ ಮಹಿಳೆಯರು, ಮಕ್ಕಳು ಗಂಟೆಗಟ್ಟಲೇ ಸಾರ್ವಜನಿಕ ನಲ್ಲಿಗಳ ಮುಂದೆ ಬಿಂದಿಗೆ, ಬಕೆಟ್ ಹಿಡಿದು ಸರತಿ ಸಾಲಿನಲ್ಲಿ ಚಾತಕಪಕ್ಷಿಗಳಂತೆ ಕಾಯುವ ಚಿತ್ರಣ ಕಂಡುಬರುತ್ತವೆ.

ಕೊರೊನಾ ವೈರಸ್‌ ಸೋಂಕು ಹರಡುವುದು ತಡೆಗಟ್ಟಲು ಜನರಿಗೆ ಅಂತರ ಕಾಯ್ದುಕೊಳ್ಳುವಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಎಚ್ಚರಿಕೆಯ ಮನವಿ ಮಾಡಿಕೊಳ್ಳುತ್ತಲೇ ಇದ್ದಾರೆ. ಆದರೆ, ಇಂದಿಗೂ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ದಾಂಗುಡಿ ಇರುವ ಜನರು ಅಂತರ ಕಾಯ್ದುಕೊಳ್ಳದೆ ಮುಗಿಬಿದ್ದು ನೀರು ಹಿಡಿಯಲು ಪೈಪೋಟಿ ನಡೆಸುವ ದೃಶ್ಯಗಳು ಗೋಚರಿಸುತ್ತವೆ.

ತಾಲ್ಲೂಕಿನ ಕೆಲ ಗ್ರಾಮ ಪಂಚಾಯಿತಿಯವರು ಕೊಳವೆಬಾವಿಗಳನ್ನು ದುರಸ್ತಿ ಮಾಡಿಸಿಲ್ಲ. ಸಮರ್ಪಕವಾದ ನಿರ್ವಹಣೆ ಮಾಡಿಲ್ಲ. ಸಾಕಷ್ಟು ಅನುದಾನ ಇದ್ದರೂ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಬೇಜಾವ್ದಾರಿಯಿಂದ ಕುಡಿಯುವ ನೀರಿನ ಅನುದಾನ ಸಮರ್ಪಕವಾಗಿ ಬಳಕೆಯಾಗದೆ ನೀರಿಗಾಗಿ ಪರದಾಡುವ ಸ್ಥಿತಿ ಬಂದೋದಗಿದೆ ಎನ್ನುವುದು ಸಾರ್ವಜನಿಕರ ಆರೋಪ.

ಇತ್ತೀಚೆಗೆ ಶಾಸಕ ಎಸ್‌.ಎನ್.ಸುಬ್ಬಾರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕುಡಿಯುವ ನೀರಿನ ಕಾರ್ಯಪಡೆ ಸಭೆಯಲ್ಲಿ ಶಾಸಕರು, ’ತಾಲ್ಲೂಕಿನ ಎಲ್ಲಾ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೊಂದರೆ ಆಗಬಾರದು. ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳದಲ್ಲಿ ಇರಬೇಕು. ಎಲ್ಲಾ ಗ್ರಾಮಗಳಿಗೆ ಕುಡಿಯುವ ನೀರು ಸಮರ್ಪಕವಾಗಿ ಸರಬರಾಜು ಮಾಡಬೇಕು. ದುರಸ್ತಿ ಕಾರ್ಯಗಳನ್ನು ಆದ್ಯತೆ ಮೆರೆಗೆ ಕೈಗೆತ್ತಿಕೊಳ್ಳಬೇಕು‘ ಎಂದು ಅಧಿಕಾರಿಗಳಿಗೆ ಸೂಚಿಸಿದ್ದರು.

ಶಾಸಕರು ಮಾತು ಈವರೆಗೆ ಅನುಷ್ಟಾನಕ್ಕೆ ಬಂದಿಲ್ಲ. ಪರಿಣಾಮ ಇಂದಿಗೂ ಅನೇಕ ಹಳ್ಳಿಗಳಲ್ಲಿ ಜನರು ಹಗಲಿರುಳು ಕುಡಿಯುವ ನೀರಿಗಾಗಿ ಪರಿತಪಿಸುವ ಶೋಚನೀಯ ಸ್ಥಿತಿ ಬದಲಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.