ADVERTISEMENT

ಚಿಕ್ಕಬಳ್ಳಾಪುರದ 237 ಗ್ರಾಮಗಳಲ್ಲಿ ನೀರಿಗೆ ಹಾಹಾಕಾರ

ಪರಿಸ್ಥಿತಿ ನಿಯಂತ್ರಣಕ್ಕೆ ಟ್ಯಾಂಕರ್, ಖಾಸಗಿ ಕೊಳವೆಬಾವಿಗಳ ಮೊರೆ ಹೋದ ಜಿಲ್ಲಾಡಳಿತ

ಈರಪ್ಪ ಹಳಕಟ್ಟಿ
Published 29 ಏಪ್ರಿಲ್ 2020, 19:30 IST
Last Updated 29 ಏಪ್ರಿಲ್ 2020, 19:30 IST
ಚಿಕ್ಕಬಳ್ಳಾಪುರ ತಾಲ್ಲೂಕಿನ ಬಿಡಗಾನಹಳ್ಳಿಯಲ್ಲಿ ಟ್ಯಾಂಕರ್‌ ನೀರು ಹಿಡಿದುಕೊಳ್ಳುತ್ತಿರುವ ಮಹಿಳೆಯರು
ಚಿಕ್ಕಬಳ್ಳಾಪುರ ತಾಲ್ಲೂಕಿನ ಬಿಡಗಾನಹಳ್ಳಿಯಲ್ಲಿ ಟ್ಯಾಂಕರ್‌ ನೀರು ಹಿಡಿದುಕೊಳ್ಳುತ್ತಿರುವ ಮಹಿಳೆಯರು   

ಚಿಕ್ಕಬಳ್ಳಾಪುರ: ಈ ಬಾರಿ ಜಿಲ್ಲೆಯಾದ್ಯಂತ ನಡು ಬೇಸಿಗೆ ಹೊತ್ತಿಗೆ 237 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಮುಂಗಾರು ಆಗಮನದ ವರೆಗೆ ಈ ಜಲಬಾಧೆ ಯಾವ ಸ್ವರೂಪ ಪಡೆಯುತ್ತದೆ ಎನ್ನುವ ಅಂದಾಜು ಅಧಿಕಾರಿಗಳ ಊಹೆಗೂ ನಿಲುಕುತ್ತಿಲ್ಲ.

ಪ್ರಸ್ತುತ ಜಿಲ್ಲೆಯ ಆರು ತಾಲ್ಲೂಕುಗಳ ಪೈಕಿ ಚಿಂತಾಮಣಿಯಲ್ಲಿ ಉಳಿದವುಗಳಿಗಿಂತ ಹೆಚ್ಚು (90 ಗ್ರಾಮಗಳು) ಸಮಸ್ಯೆ ಕಾಣಿಸಿಕೊಂಡಿದೆ. ಜಿಲ್ಲೆಯಲ್ಲಿ ನೀರಿನ ಪೂರೈಕೆಯಲ್ಲಿ ಸಮಸ್ಯೆ ಉಂಟಾಗಿರುವ 237 ಗ್ರಾಮಗಳ ಪೈಕಿ 68 ಗ್ರಾಮಗಳಿಗೆ ನಿತ್ಯ 185 ಟ್ರಿಪ್‌ ಟ್ಯಾಂಕರ್ ಮೂಲಕ ಮತ್ತು 169 ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ.

ಚಿಂತಾಮಣಿಯ ನಂತರದ ಬಾಗೇಪಲ್ಲಿ ತಾಲ್ಲೂಕಿನಲ್ಲಿ ಅಧಿಕ ನೀರಿನ ಸಮಸ್ಯೆ (54 ಗ್ರಾಮಗಳು) ಕಾಣಿಸಿಕೊಂಡಿದೆ. ಅವುಗಳಲ್ಲಿ ಈಗಾಗಲೇ 11 ಗ್ರಾಮಗಳಿಗೆ 27 ಟ್ಯಾಂಕರ್ ನೀರು ಪೂರೈಸಲಾಗುತ್ತಿದ್ದು, 43 ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆ ಪಡೆದು ಸಮಸ್ಯೆ ತಹಬದಿಗೆ ತರುವ ಕೆಲಸ ಮಾಡಲಾಗುತ್ತಿದೆ.

ADVERTISEMENT

ಒಣಗಿದ ಜಲಮೂಲಗಳು, ಅತಿಯಾದ ಕೊಳವೆಬಾವಿಗಳ ಉಪಯೋಗದಿಂದಾಗಿ ಜಿಲ್ಲೆಯ ಅನೇಕ ಕಡೆಗಳಲ್ಲಿ ಅಂತರ್ಜಲ ಪಾತಾಳ ಮುಟ್ಟಿದೆ. ಪರಿಣಾಮ, ಅಸ್ತಿತ್ವದಲ್ಲಿರುವ ಕೊಳವೆ ಬಾವಿಗಳು ಒಣಗಿ ನೀರು ಪೂರೈಕೆ ಸ್ಥಗಿತಗೊಳಿಸುತ್ತಿದ್ದರೆ, ಇನ್ನೊಂದೆಡೆ ಸರ್ಕಾರದ ವತಿಯಿಂದ ಕುಡಿಯುವ ನೀರಿನ ಅಗತ್ಯ ನೀಗಿಸಲು ಕೊರೆಯಿಸುತ್ತಿರುವ ಕೊಳವೆಬಾವಿಗಳ ಪೈಕಿ ಬಹುತೇಕ ಒಣ ಹುಡಿ ಹಾರಿಸುತ್ತಿವೆ.

ಅಂತರ್ಜಲ ಕುಸಿತದ ದುಷ್ಪರಿಣಾಮ ಪ್ರಸ್ತುತ ಚಿಂತಾಮಣಿ, ಶಿಡ್ಲಘಟ್ಟ, ಬಾಗೇಪಲ್ಲಿ ತಾಲ್ಲೂಕಿನಲ್ಲಿ ಢಾಳವಾಗಿ ಗೋಚರಿಸುತ್ತಿದೆ. ಚಿಂತಾಮಣಿ ತಾಲ್ಲೂಕಿನಲ್ಲಿ ಇತ್ತೀಚೆಗೆ ನೀರಿನ ಕೊರತೆ ನೀಗಲು ಕೊರೆಯಿಸಿದ 75 ಕೊಳವೆ ಬಾವಿಗಳಲ್ಲಿ ಬರೀ ಮೂರರಲ್ಲಿ ನೀರು ಕಾಣಿಸಿಕೊಂಡಿದೆ. ಬಾಗೇಪಲ್ಲಿಯಲ್ಲಿ ಕೊರೆಯಿಸಿದ ಏಳು ಕೊಳವೆಬಾವಿಗಳೂ ವಿಫಲಗೊಂಡಿವೆ.

ಗಡಿಭಾಗದ ಕುಗ್ರಾಮಗಳಲ್ಲಂತೂ ನೀರಿನ ಸಮಸ್ಯೆ ಜನರನ್ನು ಸಂಕಷ್ಟಕ್ಕೆ ನೂಕಿದೆ. ದಿನಬಳಕೆ, ಕುಡಿಯಲು ಮತ್ತು ಜಾನುವಾರಗಳಿಗೆ ಬೇಕಾದ ನೀರಿಗಾಗಿ ಜನರು ಹರಸಾಹಸ ಪಡಬೇಕಾದ ಸ್ಥಿತಿ ತಲೆದೋರುತ್ತಿದೆ. ಅನೇಕ ಕಡೆಗಳಲ್ಲಿ ಜನರು ಜಿಲ್ಲಾಡಳಿತ ಪೂರೈಸುವ ಟ್ಯಾಂಕರ್ ನೀರು ಕುಡಿಯಲು ಸಂಗ್ರಹಿಸಿಟ್ಟು, ದಿನಬಳಕೆಗಾಗಿ ಕೆರೆ, ಕುಂಟೆ, ಖಾಸಗಿ ಕೊಳವೆ ಬಾವಿಗಳಿಂದ ನೀರು ತಂದು ಅಗತ್ಯ ಪೂರೈಸಿಕೊಳ್ಳುತ್ತಿದ್ದಾರೆ.

ಅನೇಕ ಗ್ರಾಮಗಳಲ್ಲಿ ಜನರು ನೀರಿನ ಕೊರತೆಯಿಂದಾಗಿ ಸ್ನಾನಕ್ಕೆ, ಶೌಚಾಲಯಕ್ಕೆ, ಬಟ್ಟೆ ತೊಳೆಯಲು ನೀರನ್ನು ಲೆಕ್ಕ ಹಾಕಿ ಬಳಸುವಂತಾಗಿದೆ. ಕೆಲವೆಡೆ ನೀರಿನ ಕೊರತೆಯಿಂದ ಜಾನುವಾರುಗಳ ನೀರಿಗೂ ಬರ ಕಾಣಿಸಿಕೊಳ್ಳುತ್ತಿದ್ದು, ಇದು ಪರೋಕ್ಷವಾಗಿ ಹೈನುಗಾರಿಕೆ ಮೇಲೆ ಕೂಡ ಪರಿಣಾಮ ಬೀರುತ್ತಿದೆ.

ಜಿಲ್ಲೆಯ ಸಮಸ್ಯಾತ್ಮಕ ಗ್ರಾಮಗಳ ವಿವರ

ತಾಲ್ಲೂಕು ಗ್ರಾಮಗಳು ಟ್ಯಾಂಕರ್

ಖಾಸಗಿ ಕೊಳವೆಬಾವಿ

ಚಿಂತಾಮಣಿ 90 30 60
ಗುಡಿಬಂಡೆ 12 3 9
ಬಾಗೇಪಲ್ಲಿ 54 11 13
ಶಿಡ್ಲಘಟ್ಟ 25 5 2250
ಚಿಕ್ಕಬಳ್ಳಾಪುರ 41 16 25
ಗೌರಿಬಿದನೂರು 15 3 12

237ನೀರಿನ ಸಮಸ್ಯಾತ್ಮಕ ಗ್ರಾಮಗಳು

68ಟ್ಯಾಂಕರ್ ನೀರು ಪೂರೈಕೆಯಾಗುತ್ತಿರುವ ಗ್ರಾಮಗಳು

169ಖಾಸಗಿ ಕೊಳವೆ ಬಾವಿ ನೀರು ಪೂರೈಕೆ ಗ್ರಾಮಗಳು

185ನಿತ್ಯ ಪೂರೈಕೆಯಾಗುತ್ತಿರುವ ಟ್ಯಾಂಕರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.