ADVERTISEMENT

ಮಕ್ಕಳ ಹಕ್ಕುಗಳಿಗೆ ನಾವೆಲ್ಲ ಜವಾಬ್ದಾರರು: ಎನ್.ಮುನಿನಾರಾಯಣಸ್ವಾಮಿ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2020, 12:27 IST
Last Updated 29 ಸೆಪ್ಟೆಂಬರ್ 2020, 12:27 IST
ಕಾರ್ಯಕ್ರಮದಲ್ಲಿ ಮಕ್ಕಳ ಹಕ್ಕುಗಳ ಹೋರಾಟಗಾರ ಎನ್.ಮುನಿನಾರಾಯಣಸ್ವಾಮಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಕ್ಕಳ ಹಕ್ಕುಗಳ ಹೋರಾಟಗಾರ ಎನ್.ಮುನಿನಾರಾಯಣಸ್ವಾಮಿ ಮಾತನಾಡಿದರು.   

ಚಿಕ್ಕಬಳ್ಳಾಪುರ: ‘ಮಕ್ಕಳು ನಮ್ಮ ನಡುವೆ ಓಡಾಡುವ ಚೇತನಗಳು. ಮಕ್ಕಳು ಬಹುತೇಕ ಎಲ್ಲಾ ಸಮುದಾಯಗಳ ಆಸ್ತಿ, ಮಕ್ಕಳು ಸುಖ, ಸಂತೋಷ, ನೆಮ್ಮದಿಯಿಂದ ಬಾಲ್ಯವನ್ನು ಅನುಭವಿಸಬೇಕು. ಎಂತಹದೇ ಪ್ರಸಂಗದಲ್ಲಿಯೂ ಮಕ್ಕಳು ಯಾವುದೇ ಒತ್ತಡಕ್ಕೆ ಬೀಳದೆ ಬದುಕಲು, ಜೀವನ ನಡೆಸಲು, ಎಳೆವಯಸ್ಸಿನಲ್ಲಿ ದುಡಿಯದಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರತಿ ಸಮುದಾಯದ ಮೇಲಿದೆ’ ಎಂದುಶಾಂತಾ ಟ್ರಸ್ಟ್ ಕಾರ್ಯದರ್ಶಿ, ಮಕ್ಕಳ ಹಕ್ಕುಗಳ ಹೋರಾಟಗಾರ ಎನ್.ಮುನಿನಾರಾಯಣಸ್ವಾಮಿ ಹೇಳಿದರು.

ತಾಲ್ಲೂಕಿನ ಮುತ್ತುಕದಹಳ್ಳಿಯಲ್ಲಿ ಶಾಂತಾ ಟ್ರಸ್ಟ್ ವತಿಯಿಂದ ಮಹಿಳಾ ಕೂಲಿಕಾರ್ಮಿಕರಿಗೆ ಆಯೋಜಿಸಿದ್ದ ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಮಹಿಳೆಯರ ಪಾತ್ರ ಎಂಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಕ್ಕಳ ಹಕ್ಕುಗಳಾದ ಜೀವಿಸುವ ಹಕ್ಕು, ವಿಕಾಸ ಹೊಂದುವ ಹಕ್ಕು, ರಕ್ಷಣೆ ಹೊಂದುವ ಹಕ್ಕು, ಭಾಗವಹಿಸುವ ಹಕ್ಕುಗಳನ್ನು ಗೌರವಿಸಬೇಕು. ಎಂತಹದೇ ಪರಿಸ್ಥಿತಿ ಇದ್ದರೂ ಬಾಲಕಿಯರಿಗೆ 18 ವರ್ಷ, ಬಾಲಕರಿಗೆ 21 ವರ್ಷ ದಾಟುವವರೆಗೂ ಬಾಲ್ಯ ವಿವಾಹ ಮಾಡಬಾರದು’ ಎಂದು ತಿಳಿಸಿದರು.

ADVERTISEMENT

‘ಅಪ್ರಾಪ್ತರಿಗೆ ಮದುವೆ ಮಾಡುವುದರಿಂದ ಮಕ್ಕಳ ಮೇಲೆ, ದೇಶದ ಸಾಮಾಜಿಕ, ಆರೋಗ್ಯ ಹಾಗೂ ಆರ್ಥಿಕ ಅಭಿವೃದ್ಧಿಯ ಮೇಲೆ ಕೆಟ್ಟ ಪರಿಣಾಮ ಉಂಟು ಮಾಡುತ್ತದೆ. ಆದ್ದರಿಂದ ಬಾಲ್ಯವಿವಾಹಕ್ಕೆ ಯಾರೇ ಕುಮ್ಮಕ್ಕು ಮಾಡಿದರೂ ಅವರಿಗೆ ಬಾಲ್ಯ ವಿವಾಹ ನಿಷೇಧ ಕಾಯ್ದೆ ಅಡಿ ಎರಡು ವರ್ಷಗಳ ತನಕ ಜೈಲು ₹2 ಲಕ್ಷದ ವರೆಗೆ ದಂಡ ವಿಧಿಸಬಹುದಾಗಿದೆ’ ಎಂದರು.

‘ಆದ್ದರಿಂದ ಪ್ರತಿಯೊಬ್ಬರಲ್ಲಿಯೂ ಮಕ್ಕಳ ಹಕ್ಕುಗಳ ದೃಷ್ಟಿ ಕೋನ ಬೆಳೆಯಬೇಕು. ಮಕ್ಕಳ ಎಲ್ಲಾ ಹಕ್ಕುಗಳನ್ನು ರಕ್ಷಿಸುವ ಪ್ರಕ್ರಿಯೆಯಲ್ಲಿ ಸಮುದಾಯ, ಮಹಿಳೆಯರ ಪಾತ್ರ ಅಮೂಲ್ಯವಾಗಿರುತ್ತದೆ. ಶಾಲೆ ತೊರೆಯುವ ಮಕ್ಕಳ ಬಗ್ಗೆ, ವಲಸೆ ಬಾಲ ಕಾರ್ಮಿಕರ ಬಗ್ಗೆ, ಬಾಲ ಕಾರ್ಮಿಕರನ್ನು ರಕ್ಷಿಸುವುದು, ನೆಲೆ ಕಳೆದುಕೊಂಡ ಮಕ್ಕಳಿಗೆ ಆಶ್ರಯ ಕೊಡುವುದು ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯ’ ಎಂದು ಹೇಳಿದರು.

ಶಾಂತಾ ಟ್ರಸ್ಟ್ ಅಧ್ಯಕ್ಷ ರವಿಕುಮಾರ್, ಆಶಾ ಕಾರ್ಯಕರ್ತೆಯಾದ ಸೌಮ್ಯ, ಶ್ರೀರಾಮ, ಮಂಜುನಾಥ್, ಕವಿತಾ ಗಾಯತ್ರಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.