ADVERTISEMENT

ನಂದಿ ಬೆಟ್ಟದಲ್ಲಿ ಇನ್ನೂ ತೆರವಾಗದ ವಾರಾಂತ್ಯದ ಕರ್ಫ್ಯೂ: ಪ್ರವಾಸಿಗರು ವಾಪಸ್

ನಂದಿಗಿರಿಧಾಮದ ಪ್ರವೇಶ ದ್ವಾರದಿಂದಲೇ ಪ್ರವಾಸಿಗರು ವಾಪಸ್

ಡಿ.ಎಂ.ಕುರ್ಕೆ ಪ್ರಶಾಂತ
Published 15 ಮಾರ್ಚ್ 2022, 12:23 IST
Last Updated 15 ಮಾರ್ಚ್ 2022, 12:23 IST
ವಾರಾಂತ್ಯದ ದಿನಗಳಲ್ಲಿ ನಂದಿಗಿರಿಧಾಮದ ಪ್ರವೇಶದಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿರುವುದು
ವಾರಾಂತ್ಯದ ದಿನಗಳಲ್ಲಿ ನಂದಿಗಿರಿಧಾಮದ ಪ್ರವೇಶದಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿರುವುದು   

ಚಿಕ್ಕಬಳ್ಳಾಪುರ: ತಾಲ್ಲೂಕಿನ ನಂದಿಗಿರಿಧಾಮ ರಾಜ್ಯದಲ್ಲಿಯೇ ಪ್ರಸಿದ್ಧವಾದುದು. ಅದರಲ್ಲಿಯೂ ಬೇಸಿಗೆ ಆರಂಭದಲ್ಲಿ ಗಿರಿಧಾಮಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತದೆ. ಈ ವೇಳೆ ಗಿರಿಧಾಮದ ವಸತಿ ನಿಲಯಗಳು ಭರ್ತಿ ಆಗಿರುತ್ತವೆ. ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೂ ಒಳ್ಳೆಯ ಆದಾಯ ಬರುತ್ತದೆ.

ಕೋವಿಡ್ ಕಾರಣದಿಂದ ಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶವನ್ನು ವಾರಾಂತ್ಯದ ದಿನಗಳಲ್ಲಿ ನಿಷೇಧಿಸಲಾಗಿತ್ತು. ಸಾಮಾನ್ಯವಾಗಿ ವಾರಾಂತ್ಯದ ಶನಿವಾರ ಮತ್ತು ಭಾನುವಾರ ಸಾವಿರಾರೂ ಪ್ರವಾಸಿಗರು ಗಿರಿಧಾಮಕ್ಕೆ ಬರುತ್ತಿದ್ದರು. ಹೀಗೆ ಜನದಟ್ಟಣೆ ಹೆಚ್ಚಿದರೆ ಕೋವಿಡ್ ಹರಡುತ್ತದೆ ಎನ್ನುವ ಭಯದಿಂದ ಜಿಲ್ಲಾಡಳಿತ ವಾರಾಂತ್ಯದಲ್ಲಿ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಿತ್ತು.

ರಾಜ್ಯದಲ್ಲಿ ಕೋವಿಡ್ ಕಾರಣದಿಂದ ವಿಧಿಸಿದ್ದ ವಾರಾಂತ್ಯದಕರ್ಫ್ಯೂ ತೆರವಾಗಿದೆ. ಜನಜೀವನ ಸಹ ಯಥಾಸ್ಥಿತಿಗೆ ಬರುತ್ತಿದೆ. ಹೀಗಿದ್ದರೂ ನಂದಿಗಿರಿಧಾಮದಲ್ಲಿ ವಾರಾಂತ್ಯದಕರ್ಫ್ಯೂ ಮುಂದುವರಿದಿದೆ. ಬೇಸಿಲ ಝಳ ಹೆಚ್ಚಿದಂತೆ ಬೆಂಗಳೂರಿಗರು ಪ್ರಮುಖವಾಗಿ ನಂದಿಗಿರಿಧಾಮದತ್ತ ಮುಖ ಮಾಡುವರು. ರಾಜಧಾನಿಗೆ ಸಮೀಪವೇ ಇರುವುದರಿಂದ ನಂದಿಯ ತಣ್ಣನೆಯ ವಾತಾವರಣ ಪ್ರವಾಸಿಗರನ್ನು ಬರಸೆಳೆಯುತ್ತದೆ. ತಂಪಾದ ವಾತಾವರಣದ ದೃಷ್ಟಿಯಿಂದ ಗಿರಿಧಾಮಕ್ಕೆ ಬರುವವರ ಸಂಖ್ಯೆ ಹೆಚ್ಚುತ್ತದೆ.

ADVERTISEMENT

ಇತ್ತೀಚೆಗೆ ನಂದಿ ಗ್ರಾಮದಲ್ಲಿ ಶಿವೋತ್ಸವ ಮತ್ತು ಜಾತ್ರೆ ನಡೆಯಿತು. ಇದಕ್ಕೆ ಸಾವಿರಾರೂ ಜನರು ಸಾಕ್ಷಿಯಾಗಿದ್ದರು. ಜಿಲ್ಲೆ ಹಾಗೂ ರಾಜ್ಯದಲ್ಲಿ ಎಲ್ಲೆಡೆ ದೊಡ್ಡ ಮಟ್ಟದಲ್ಲಿಯೇ ಸಮಾವೇಶಗಳು, ಕಾರ್ಯಕ್ರಮಗಳು ನಡೆಯುತ್ತಿವೆ. ಹೀಗಿರುವಾಗ ನಂದಿಗೆ ಇನ್ನೂ ಏಕೆ ಪ್ರವೇಶ ನೀಡಿಲ್ಲ ಎನ್ನುವ ಪ್ರಶ್ನೆ ಪ್ರವಾಸ ಪ್ರಿಯರಲ್ಲಿ ಮೂಡಿದೆ.

ಯಾವಾಗ ವಾರಾಂತ್ಯದಕರ್ಫ್ಯೂ ತೆರವುಗೊಳಿಸುತ್ತೀರಿ ಎಂದುಫೆ.2ರಂದು ಗಿರಿಧಾಮಕ್ಕೆ ಭೇಟಿ ನೀಡಿದ್ದ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರನ್ನು ಮಾಧ್ಯಮದವರು ಕೇಳಿದಾಗ, ‘ಮುಂದಿನ ವಾರವೇಕರ್ಫ್ಯೂ ತೆರವು ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಲಾಗುವುದು’ ಎಂದಿದ್ದರು.

ಈಗ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ನಂದಿಗಿರಿಧಾಮದ ಪ್ರವೇಶಕ್ಕೆ ಆನ್‌ಲೈನ್‌ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸಿದೆ.‌ ಪ್ರವಾಸಿಗರ ಭೇಟಿಗೂ ಮಿತಿ ವಿಧಿಸಲಾಗಿದೆ.

ನಿತ್ಯ ಒಟ್ಟು 2,500 ‍ಪ್ರವಾಸಿಗರ ಭೇಟಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.ಬೆಳಿಗ್ಗೆ 6ರಿಂದ ಮಧ್ಯಾಹ್ನ 12ರವರೆಗೆ ಮತ್ತು ಮಧ್ಯಾಹ್ನ 12ರಿಂದ ಸಂಜೆ 6ರವರೆಗೆ ಎರಡು ಅವಧಿಯಲ್ಲಿ ಭೇಟಿಗೆ ಅವಕಾಶ ಕಲ್ಪಿಸಲಾಗಿದೆ. ಒಂದು ಅವಧಿಗೆ ಶೇ 50ರಷ್ಟು ಆನ್‌ಲೈನ್ ಮೂಲಕ 1,250 ಪ್ರವಾಸಿಗರಿಗೆ ಮತ್ತು ಶೇ 50ರಷ್ಟು ನೇರವಾಗಿ 1,250 ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.

ಹೀಗಿದ್ದಾಗ ‍ಜನದಟ್ಟಣೆ ಉಂಟಾಗುವುದಿಲ್ಲ. ಈ ಹಿಂದೆ ವಾರಾಂತ್ಯದ ದಿನಗಳಲ್ಲಿ ಕನಿಷ್ಠ 10ರಿಂದ 15 ಸಾವಿರ ಮಂದಿ ಗಿರಿಧಾಮಕ್ಕೆ ಭೇಟಿ ನೀಡುತ್ತಿದ್ದರು. ಆದರೆ ಈಗ ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಇದೆ. ಹೀಗಿದ್ದರೂ ವಾರಾಂತ್ಯದಲ್ಲಿ ಗಿರಿಧಾಮಕ್ಕೆ ಪ್ರವೇಶ ದೊರೆಯುತ್ತಿಲ್ಲ!

ಸಣ್ಣ ಪುಟ್ಟ ವ್ಯಾಪಾರಿಗಳ ಬದುಕಿಗೂ ಪೆಟ್ಟು: ಗಿರಿಧಾಮದ ಸುತ್ತಲಿನ ಹಳ್ಳಿಗಳ ಜನರಿಗೆ ವಾರಾಂತ್ಯದಲ್ಲಿ ಒಳ್ಳೆಯ ಆದಾಯವೂ ದೊರೆಯುತ್ತಿತ್ತು. ಎಳೆನೀರು, ಹಣ್ಣುಗಳು, ಜೋಳದ ಮಾರಾಟ...ಹೀಗೆ ಸಣ್ಣ ಪುಟ್ಟ ವ್ಯಾಪಾರ ನಡೆಸುತ್ತಿದ್ದರು. ಹೀಗೆ ವ್ಯಾಪಾರ ನಡೆಸುವವರಿಗೂ ಪೆಟ್ಟು ಬಿದ್ದಿದೆ.

‘ವಾರಾಂತ್ಯದಲ್ಲಿ ಪ್ರವಾಸಿಗರು ಹೆಚ್ಚು ಬರುವುದರಿಂದ ಸಂಚಾರ ದಟ್ಟಣೆ ಎದುರಾಗುತ್ತದೆ. ಇದಕ್ಕಾಗಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ. ಈಗ ಮಕ್ಕಳಿಗೆ ‍ಪರೀಕ್ಷೆಗಳು ಇರುವ ಕಾರಣ ಈ ತಿಂಗಳು ಪ್ರವಾಸಿಗರ ಸಂಖ್ಯೆ ಸ್ವಲ್ಪ ಮಟ್ಟಿಗೆ ಕಡಿಮೆ. ಆದಷ್ಟು ಬೇಗ ವಾರಾಂತ್ಯದಕರ್ಫ್ಯೂ ತೆರವಾದರೆ ವಹಿವಾಟುಗಳು ಸಹ ಉತ್ತಮವಾಗುತ್ತದೆ’ ಎಂದು ನಂದಿಗಿರಿಧಾಮದಲ್ಲಿನ ಅಧಿಕಾರಿಗಳು ತಿಳಿಸುವರು.

‘ವಾರಾಂತ್ಯದಕರ್ಫ್ಯೂ ತೆರವುಗೊಳಿಸಬೇಕು. ಎಲ್ಲ ಕಡೆಯೂ ವಾರಾಂತ್ಯದಕರ್ಫ್ಯೂ ತೆರವಾಗಿದೆ. ಇಲ್ಲೇಕೆ ಮುಂದುವರಿದಿದೆ. ಬಹಳಷ್ಟು ಪ್ರವಾಸಿಗರಿಗೆ ಇದು ತಿಳಿದಿಲ್ಲ. ಬೆಟ್ಟಕ್ಕೆ ಬಂದು ವಾಪಸಾಗುತ್ತಿದ್ದಾರೆ. ನಮಗೂ ಇಲ್ಲಿಗೆ ಬಂದಾಗಲೇ ‍ಪ್ರವೇಶವಿಲ್ಲ ಎನ್ನುವುದು ತಿಳಿದಿದ್ದು’ ಎನ್ನುತ್ತಾರೆ ಬೆಂಗಳೂರಿನ ಕಿರಣ್.

***

‘ಡಿ.ಸಿ ಜತೆ ಮಾತನಾಡುವೆ’

ವಾರಾಂತ್ಯದ ಕರ್ಫ್ಯೂ ತೆರವಿನ ವಿಚಾರವಾಗಿ ಜಿಲ್ಲಾಡಳಿತ ನಿರ್ಧಾರ ತೆಗೆದುಕೊಳ್ಳುತ್ತದೆ. ವಾರಾಂತ್ಯದ ದಿನಗಳಲ್ಲಿ 15ರಿಂದ 20 ಸಾವಿರ ಪ್ರವಾಸಿಗರು ಬರುತ್ತಾರೆ. ನಿರ್ವಹಣೆ ಕಷ್ಟ. ನೋಡಿಕೊಂಡು ಮಾಡುತ್ತೇವೆ ಎಂದು ತಿಳಿಸಿದ್ದಾರೆ ಎಂದು ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಿ.ಜಗದೀಶ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಆನ್‌ಲೈನ್ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಹೇಳಿದರು. ಅದನ್ನು ಮಾಡಿದ್ದೇವೆ. ವಾರಾಂತ್ಯದ ಕರ್ಫ್ಯೂ ತೆರವಿನ ವಿಚಾರದಲ್ಲಿ ‌‌ಇನ್ನೊಮ್ಮೆ ಜಿಲ್ಲಾಧಿಕಾರಿ ಅವರ ಜತೆ ಮಾತನಾಡುವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.