ADVERTISEMENT

ಹೊಸ ಸಂವತ್ಸರಕ್ಕೆ ಸಡಗರದ ಸ್ವಾಗತ

ನಗರ ಹೊರವಲಯದ ಬಾರ್‌–ರೆಸ್ಟೋರೆಂಟ್‌ಗಳು ಭರ್ತಿ, ಸಂಭ್ರಮದಿಂದ ಹೊಸ ವರ್ಷ ಎದುರುಗೊಂಡ ಜನರು

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2019, 13:25 IST
Last Updated 31 ಡಿಸೆಂಬರ್ 2019, 13:25 IST
ನಗರದ ಬಿ.ಬಿ.ರಸ್ತೆಯಲ್ಲಿರುವ ಗಣೇಶ್ ಬೇಕರಿಯಲ್ಲಿ ಮಾರಾಟಕ್ಕೆ ಇಟ್ಟ ಕೇಕ್‌ಗಳು
ನಗರದ ಬಿ.ಬಿ.ರಸ್ತೆಯಲ್ಲಿರುವ ಗಣೇಶ್ ಬೇಕರಿಯಲ್ಲಿ ಮಾರಾಟಕ್ಕೆ ಇಟ್ಟ ಕೇಕ್‌ಗಳು   

ಚಿಕ್ಕಬಳ್ಳಾಪುರ: ಜಿಲ್ಲೆಯಾದ್ಯಂತ ಮಂಗಳವಾರ ಮಧ್ಯರಾತ್ರಿ ಗಡಿಯಾರದ ಮುಳ್ಳು 12ಕ್ಕೆ ತಲುಪುತ್ತಿದ್ದಂತೆ ಜನರು ಪಟಾಕಿ, ಬಾಣ-ಬಿರುಸುಗಳನ್ನು ಸಿಡಿಸಿ ಹೊಸ ವರ್ಷವನ್ನು ಸಂಭ್ರಮ, ಸಡಗರದಿಂದ ಬರಮಾಡಿಕೊಂಡರು. ಕೇಕ್‌ ಕತ್ತರಿಸಿ ಬಾಯಿ ಸಿಹಿ ಮಾಡಿಕೊಂಡು, ಆಪ್ತರಿಗೆ ಹೊಸ ವರ್ಷದ ಶುಭಾಶಯಗಳ ಸಂದೇಶವನ್ನು ಕಳುಹಿಸಿದರು.

ಹೊಸ ವರ್ಷಾಚರಣೆ ಮುನ್ನಾದಿನವಾದ ಮಂಗಳವಾರ ನಗರದ 10 ಕ್ಕೂ ಹೆಚ್ಚು ಬೇಕರಿಗಳಲ್ಲಿ ಸಾವಿರಾರು ತರಹೇವಾರಿ ಕೇಕ್‌ಗಳ ಮಾರಾಟ ಜೋರಾಗಿ ಕಂಡುಬಂತು. ವೆನಿಲಾ, ಚಾಕೋಲೆಟ್, ಸ್ಟ್ರಾಬೇರಿ, ಮ್ಯಾಂಗೊ ಸೇರಿದಂತೆ ವಿವಿಧ ಸ್ವಾದಗಳಲ್ಲಿದ್ದ ಕೇಕ್‌ಗಳು ನೋಡುಗರ ಬಾಯಲ್ಲಿ ನೀರೂರಿಸುತ್ತಿದ್ದವು. ಚಿಟ್ಟೆ, ಚಂದ್ರ, ನಕ್ಷತ್ರ ಮತ್ತು ಹೃದಯ ಸೇರಿದಂತೆ ನಾನಾ ಆಕಾರದ ಕೇಕ್‌ಗಳು ಜನರನ್ನು ಆಕರ್ಷಿಸುತ್ತಿದ್ದವು.

ಕೆಲ ಬೇಕರಿಗಳಲ್ಲಿ ಜನರು ಹೊ ವರ್ಷಾಚರಣೆಗಾಗಿ ಮುಂಗಡವಾಗಿ ಕೇಕ್‌ಗಳಿಗೆ ಬೇಡಿಕೆ ಸಲ್ಲಿಸಿದ್ದರು. ಇನ್ನು ಕೆಲವೆಡೆ ಜನರ ಅಭಿರುಚಿ ಅರಿತು ಅದರಂತೆ ವಿವಿಧ ಆಕಾರ, ಬಣ್ಣಗಳಲ್ಲಿ ಕೇಕ್‌ಗಳನ್ನು ಸಿದ್ಧಪಡಿಸಿ ಮಾರಾಟಕ್ಕೆ ಇಡಲಾಗಿತ್ತು. ಕೆಲವರು ಗ್ರಾಹಕರನ್ನು ಸೆಳೆಯಲು ವಿಶೇಷ ರಿಯಾಯಿತಿ ಘೋಷಿಸಿದ್ದು ಕಂಡುಬಂತು.

ADVERTISEMENT

ಜನರು ಹೊಸ ಸಂವತ್ಸರವನ್ನು ಸ್ವಾಗತಿಸಲು ಜೋರಾಗಿಯೇ ಸಜ್ಜಾಗಿದ್ದರು. ತಾಲ್ಲೂಕು ಕೇಂದ್ರಗಳಲ್ಲಿ ಮತ್ತು ನಗರದಲ್ಲಿ ಮಂಗಳವಾರ ಸಂಜೆಯಿಂದ ಕೇಕ್‌, ಸಿಹಿ ತಿಂಡಿಗಳ ಖರೀದಿ ಜೋರಾಗಿ ಕಂಡುಬಂತು. ಪಟ್ಟಣ, ನಗರ ಹೊರವಲಯದ ಬಾರ್‌, ರೆಸ್ಟೋರೆಂಟ್‌ಗಳು ಭರ್ತಿಯಾಗಿದ್ದವು.

ಹೊಸ ವರ್ಷಾಚರಣೆ ವೇಳೆ ನಡೆಯುವ ಅವಘಡಗಳನ್ನು ಹಾಗೂ ಅನೈತಿಕ ಚಟುವಟಿಕೆ ನಿಯಂತ್ರಿಸುವ ಉದ್ದೇಶದಿಂದ ಜಿಲ್ಲೆಯ ಪ್ರವಾಸಿ ತಾಣಗಳಾದ ನಂದಿಬೆಟ್ಟ, ಸಂದ್ಕಗಿರಿ ಮತ್ತು ಗುಡಿಬಂಡೆಯ ಆವಲಬೆಟ್ಟಕ್ಕೆ ಮಂಗಳವಾರ ಸಂಜೆಯಿಂದ ಬುಧವಾರ ಬೆಳಿಗ್ಗೆ 8ರ ವರೆಗೆ ಪ್ರವಾಸಿಗರ ಪ್ರವೇಶಕ್ಕೆ ಪೊಲೀಸ್ ಇಲಾಖೆ ನಿರ್ಬಂಧ ವಿಧಿಸಿತ್ತು. ಪ್ರವಾಸಿ ತಾಣಗಳಲ್ಲಿ ಸಾರ್ವಜನಿಕರ ಓಡಾಟ ನಿಷೇಧಿಸಲು ಚೆಕ್‌ ಪೋಸ್ಟ್‌ಗಳನ್ನು ತೆರೆಯಲಾಗಿತ್ತು.

ಪ್ರವಾಸಿ ತಾಣಗಳಲ್ಲಿದ್ದ ಪ್ರವಾಸಿಗರನ್ನು ಮಂಗಳವಾರ ಸಂಜೆ ಹೊತ್ತಿಗೆ ಪೊಲೀಸರು ಖಾಲಿ ಮಾಡಿಸಿದರು. ಬಾರ್‌, ರೆಸ್ಟೋರೆಂಟ್‌ಗಳ ಬಳಿ ಅಹಿತಕರ ಘಟನೆಗಳು ನಡೆಯುವುದು ತಡೆಯುವ ನಿಟ್ಟಿನಲ್ಲಿ ಪೊಲೀಸ್ ಕಣ್ಗಾವಲು ಹಾಕಲಾಗಿತ್ತು. ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮಧ್ಯರಾತ್ರಿ ನಗರದ ವಿವಿಧ ವೃತ್ತಗಳಲ್ಲಿ ಸೇರಿ ಹೊಸ ವರ್ಷ ಪ್ರವೇಶಿಸುತ್ತಿದ್ದಂತೆ ಪಟಾಕಿ ಸಿಡಿಸಿ, ಕೇಕ್‌ ಕತ್ತರಿಸಿ ಪರಸ್ಪರ ತಿನ್ನಿಸುವ ಮೂಲಕ ಸಂಭ್ರಮದಿಂದ ಹೊಸ ವರ್ಷ ಬರಮಾಡಿಕೊಂಡರು.

ಜನರು ನವ ಸಂವತ್ಸರದ ಶುಭಾಶಯಗಳನ್ನು ರಾತ್ರಿ ತಮ್ಮ ಸ್ನೇಹಿತರು, ಆಪ್ತರಿಗೆ ವಾಟ್ಸ್‌ಆ್ಯಪ್‌ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ವಿನಿಮಯ ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.