ADVERTISEMENT

ಚೇಳೂರು ಬಂದ್ ಯಶಸ್ವಿ

ಪಟ್ಟಣದಲ್ಲಿಯೇ ಪ್ರಜಾಸೌಧ ನಿರ್ಮಾಣಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2025, 4:37 IST
Last Updated 11 ಆಗಸ್ಟ್ 2025, 4:37 IST
ಚೇಳೂರು ಬಂದ್‌ನಲ್ಲಿ ಪಾಲ್ಗೊಂಡಿದ್ದ ಮುಖಂಡರು 
ಚೇಳೂರು ಬಂದ್‌ನಲ್ಲಿ ಪಾಲ್ಗೊಂಡಿದ್ದ ಮುಖಂಡರು    

ಚೇಳೂರು: ಚೇಳೂರಿನಲ್ಲಿಯೇ ತಾಲ್ಲೂಕು ಕಚೇರಿ ಕಟ್ಟಡ ನಿರ್ಮಿಸಬೇಕು ಎಂದು  ರಾಜಕೀಯ ಪಕ್ಷಗಳು, ಸಂಘಟನೆಗಳು ಭಾನುವಾರ ಹಮ್ಮಿಕೊಂಡಿದ್ದ ಚೇಳೂರು ಬಂದ್ ಯಶಸ್ವಿ ಆಯಿತು.

ಪಟ್ಟಣದ ಹೊರವಲಯದ ಪುಲ್ಲಗಲ್ಲು ಕ್ರಾಸ್ ಬಳಿ ತಾಲ್ಲೂಕು ಕಚೇರಿಯ ಕಟ್ಟಡ  ನಿರ್ಮಿಸಲು ಸರ್ಕಾರ ಮುಂದಾಗಿದೆ. ಇದನ್ನು ವಿರೋಧಿಸಿ ಮತ್ತು ಪಟ್ಟಣದಲ್ಲಿಯೇ ತಾಲ್ಲೂಕು ಕಚೇರಿ ನಿರ್ಮಿಸಲು ಆಗ್ರಹಿಸಿ ಬಂದ್‌ಗೆ ಕರೆ ನೀಡಲಾಗಿತ್ತು.

‍ಪಟ್ಟಣದಲ್ಲಿ ಅಂಗಡಿಗಳು ಸ್ವಯಂ ಪ್ರೇರಿತವಾಗಿ ಮುಚ್ಚಿದ್ದವು. ಯಾವುದೇ ವಾಹನಗಳ ಸಂಚಾರ ಸಹ ಇರಲಿಲ್ಲ. ಬಿಜೆಪಿ, ಜೆಡಿಎಸ್ ಮುಖಂಡರು, ರೈತ ಸಂಘಗಳು ಹಾಗೂ ಸಂಘ ಸಂಸ್ಥೆಗಳ ಮುಖಂಡರು ಬಂದ್‌ನಲ್ಲಿ ಭಾಗಿಯಾಗಿದ್ದರು. 

ADVERTISEMENT

ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಪ್ರಜಾಸೌಧವನ್ನು ಚೇಳೂರಿನಲ್ಲೇ ನಿರ್ಮಿಸಬೇಕು ಎಂದು ಘೋಷಣೆಗಳನ್ನು ಕೂಗಿದರು. ಎಂ.ಜಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಬಸ್‍ಗಳು ಇಲ್ಲದ ಕಾರಣ ಪ್ರಯಾಣಿಕರು ನಡೆದುಕೊಂಡು ಹೋಗುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಆಂಧ್ರ ಬಸ್‌ಗಳ ಸಂಚಾರ ಸಹ ಸಂಪೂರ್ಣವಾಗಿ ಸ್ಥಗಿತವಾಗಿತ್ತು. ‌ಬೆಳಿಗ್ಗೆ 6ಕ್ಕೆ ಆರಂಭವಾದ ಬಂದ್ ಸಂಜೆ 5ಕ್ಕೆ ಮುಕ್ತಾಯವಾಯಿತು.

ರಿಯಲ್ ಎಸ್ಟೇಟ್ ದಂಧೆಕೋರರು ಸ್ವಾರ್ಥಕ್ಕಾಗಿ ಆಂಧ್ರಗಡಿಯಲ್ಲಿ ತಾಲ್ಲೂಕು ಪ್ರಜಾಸೌಧ ಕಟ್ಟಲು ಹುನ್ನಾರ ಮಾಡುತ್ತಿದ್ದಾರೆ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡ  ಹರಿನಾಥರೆಡ್ಡಿ ಮಾತನಾಡಿ, ತಾಲ್ಲೂಕು ಪ್ರಜಾಸೌಧ ಚೇಳೂರಿನಲ್ಲಿಯೇ ನಿರ್ಮಿಸಬೇಕು. ತಾಲ್ಲೂಕಿನ 12 ಗ್ರಾಮ ಪಂಚಾಯಿತಿಗಳ ಜನರು ಚೇಳೂರಿಗೆ ಬಂದು ಬಸ್‌ ಇಳಿದು ಮತ್ತೋಂದು ಕಡೆಗೆ ಆಟೊ, ಮತ್ತಿತರ ವಾಹನ ಆಶ್ರಯಿಸಿ ಪುಲಗಲ್ಲು ಕ್ರಾಸ್‍ ತಲುಪಬೇಕು. ಅಲ್ಲಿ ಇಳಿದು 1 ಕಿಮೀ ದೂರ ಮತ್ತೆ ಪ್ರಯಾಣಿಸಬೇಕು ಎಂದರು.

ಇದರಿಂದ ಸಮಯ ಹಣ, ನಷ್ಟ. ದಂಧೆಕೋರರ ಮಾತಿಗೆ ಅಧಿಕಾರಿಗಳು ಮರುಳಾಗಿ  ಆಂಧ್ರಪ್ರದೇಶದ ಗಡಿಯಲ್ಲಿ ಕಚೇರಿಗಳ ಸ್ಥಾಪಿಸಲು ಮುಂದಾಗಿದ್ದಾರೆ. ಇದರ ವಿರುದ್ಧ ಜು.13ರಂದು ಪ್ರತಿಭಟನಾ ರ‍್ಯಾಲಿ ಸಹ ನಡೆಸುತ್ತೇವೆ ಎಂದು ಹೇಳಿದರು.

ಚುನಾಯಿತ ಪ್ರತಿನಿಧಿಗೆ ಜನಪರ ಕೆಲಸ ಮಾಡಬೇಕು ಎನ್ನುವ ಮನಸ್ಸಿದ್ದರೆ ಚೇಳೂರಿನಲ್ಲಿ ಪ್ರಜಾಸೌಧ ನಿರ್ಮಿಸುವರು. ಜನವಿರೋಧಿ ಕೆಲಸ ಮಾಡಬಾರದು. ಚೇಳೂರಿನಲ್ಲಿ ಕಚೇರಿಗಳು ಮಾಡಿದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.

ತಾ.ಪಂ. ಮಾಜಿ ಸದಸ್ಯ ಸೀತಿರೆಡ್ಡಿಪಲ್ಲಿ ಎಸ್.ವೈ. ವೆಂಕಟರವಣಪ್ಪ, ವಿ.ಎಸ್.ಎಸ್.ಎನ್.ಅಧ್ಯಕ್ಷ ಜೆ.ಪಿ.ಚಂದ್ರಶೇಖರರೆಡ್ಡಿ. ಜೆ.ಡಿ.ಎಸ್ ತಾಲ್ಲೂಕು ಅಧ್ಯಕ್ಷ ಎಸ್.ಆರ್. ಲಕ್ಷ್ಮಿನಾರಾಯಣ, ಸಿ.ಎನ್.ರೆಡ್ಡಪ್ಪ. ತಾಲ್ಲೂಕು ರೈತ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ತಾ.ಪಂ. ಮಾಜಿ ಸದಸ್ಯ ಎಸ್.ವೈ.ವೆಂಕಟರಮಣಾರೆಡ್ಡಿ,  ಕೆ.ಎನ್.ರಾಮಕೃಷ್ಣಾ ರೆಡ್ಡಿ, ಗ್ರಾ.ಪಂ. ಸದಸ್ಯರಾದ ಕೊಂಡಿಕೊಂಡ ಸುಬ್ಬಾರೆಡ್ಡಿ ಮತ್ತಿತರರು ಬಂದ್‌ನಲ್ಲಿ ಭಾಗವಹಿಸಿದ್ದರು. 

ಬಂದ್ ಹಿನ್ನೆಲೆಯಲ್ಲಿ ಮುಚ್ಚಿದ್ದ ಅಂಗಡಿಗಳು

ಅಂಗಡಿಗಳು ಬಂದ್, ಬಸ್ ಸಂಚಾರ ಸ್ಥಗಿತ ಬೆಳಿಗ್ಗೆಯಿಂದ ಸಂಜೆಯವರೆಗೂ ಬಿಕೋ ಎಂದ ಪಟ್ಟಣ ಆ.13ರಂದು ಚೇಳೂರಿನಲ್ಲಿ ಬೃಹತ್ ರ‍್ಯಾಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.