ADVERTISEMENT

ಚಿಕ್ಕಬಳ್ಳಾಪುರ: ವಂಚನೆಗೆ ಒಳಗಾದ ಸಂತ್ರಸ್ತೆಯರಿಂದ 22 ಸಾವಿರ ದೂರು

ಡಿ.ಎಂ.ಕುರ್ಕೆ ಪ್ರಶಾಂತ
Published 26 ಜನವರಿ 2025, 5:13 IST
Last Updated 26 ಜನವರಿ 2025, 5:13 IST
ಪಿ.ಎನ್.ರವೀಂದ್ರ
ಪಿ.ಎನ್.ರವೀಂದ್ರ   

ಚಿಕ್ಕಬಳ್ಳಾಪುರ: ಖಾಸಗಿ ಹಣಕಾಸು ಸಂಸ್ಥೆಗಳನ್ನು ನಂಬಿ ಹಣ ಹೂಡಿಕೆ ಮಾಡಿದ ಲಕ್ಷಾಂತರ ಮಹಿಳೆಯರು ರಾಜ್ಯದಲ್ಲಿ ವಂಚನೆಗೆ ಒಳಗಾಗಿದ್ದಾರೆ. ರಾಜ್ಯದ ಖಾಸಗಿ ಹಣಕಾಸು ಸಂಸ್ಥೆ ಮತ್ತು ಕಂಪನಿಗಳಿಗೆ ‘ಅನಿಯಂತ್ರಿತ ಠೇವಣಿ’ (ಅನ್‌ರೆಗ್ಯುಲೇಟೆಡ್‌ ಡೆಪಾಸಿಟ್‌) ಯೋಜನೆಗಳ ಅಡಿ ಹಣ ಹೂಡಿಕೆ ಮಾಡಿ ವಂಚನೆಗೆ ಒಳಗಾದವರು ಜಿಲ್ಲಾಧಿಕಾರಿ ಕಚೇರಿಗಳಿಗೆ ದೂರು ಸಹ ಸಲ್ಲಿಸಿದ್ದಾರೆ. 

ಹೀಗೆ ಖಾಸಗಿ ಹಣಕಾಸು ಸಂಸ್ಥೆಗಳಿಂದ ವಂಚನೆಗೆ ಒಳಗಾಗಿದ್ದೇವೆ ಎಂದು ಜಿಲ್ಲೆಯಲ್ಲಿ 22,054 ಸಂತ್ರಸ್ತೆಯರು ಜಿಲ್ಲಾಧಿಕಾರಿ ಕಚೇರಿಗೆ ದೂರು ಸಲ್ಲಿಸಿದ್ದಾರೆ. ರಾಜ್ಯದಲ್ಲಿ 7.80 ಲಕ್ಷಕ್ಕೂ ಹೆಚ್ಚು ದೂರು ಅರ್ಜಿಗಳು ಸಲ್ಲಿಕೆಯಾಗಿವೆ. 

ಅತಿ ಹೆಚ್ಚು ದೂರುಗಳು ಸಲ್ಲಿಕೆಯಾದ ಮೊದಲ ಹತ್ತು ಜಿಲ್ಲೆಗಳ ಪಟ್ಟಿಯಲ್ಲಿ ಚಿಕ್ಕಬಳ್ಳಾಪುರವೂ ಒಂದಾಗಿದೆ. ಕಳೆದ ವರ್ಷ ರಾಜ್ಯದ ವಿವಿಧ ಜಿಲ್ಲಾಧಿಕಾರಿ ಕಚೇರಿಗಳಲ್ಲಿ ತೆರೆದಿದ್ದ ‘ದೂರು ಸ್ವೀಕಾರ ಕೇಂದ್ರ’ಗಳಿಗೆ ಮಹಿಳೆಯರಿಂದ ಅರ್ಜಿಗಳ ಮಹಾ ಪೂರವೇ ಹರಿದು ಬಂದಿದೆ.

ADVERTISEMENT

ಈ ಪ್ರಕಾರ ಜಿಲ್ಲೆಯಲ್ಲಿ 22,054 ಅರ್ಜಿಗಳು ಸಲ್ಲಿಕೆ ಆಗಿವೆ. ಚಿಕ್ಕಬಳ್ಳಾಪುರ ತಾಲ್ಲೂಕಿನ ಮಹಿಳೆಯರೇ ಅಧಿಕ ಸಂಖ್ಯೆಯಲ್ಲಿ ದೂರು ಸಲ್ಲಿಸಿದ್ದಾರೆ ಎನ್ನುತ್ತವೆ ಜಿಲ್ಲಾಡಳಿತದ ಮೂಲಗಳು.

ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ಕಾಯ್ದೆ 2004 (ಕೆ.ಪಿ.ಐ.ಡಿ ಅಧಿನಿಯಮ) ಮತ್ತು 2019ರ ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯ್ದೆ (ಬಡ್ಸ್‌ ಆ್ಯಕ್ಟ್‌) 2019ರ ಅಡಿಯಲ್ಲಿ 127 ಕಂಪನಿಗಳನ್ನು ವಿಚಾರಣೆ ನಡೆಸಲು ಪ್ರತ್ಯೇಕ ‘ಸಕ್ಷಮ ಪ್ರಾಧಿಕಾರ’ವನ್ನು ಸರ್ಕಾರ ನೇಮಿಸಿದೆ. 

ಹಣ ವಾಪಸ್ ಕೊಡಿಸಿ: ‘ಲೋಕಸಭೆ ಚುನಾವಣೆಗೂ ಮುನ್ನ ಜಿಲ್ಲಾಧಿಕಾರಿ ಕಚೇರಿಯಲ್ಲಿನ ದೂರು ಸ್ವೀಕಾರ ಕೇಂದ್ರಕ್ಕೆ 12 ಸಾವಿರ ಅರ್ಜಿಗಳು ಸಲ್ಲಿಕೆ ಆಗಿದ್ದವು. ಲೋಕಸಭೆ ಚುನಾವಣೆಯ ಕಾರಣಕ್ಕೆ ಅರ್ಜಿಗಳನ್ನು ತಾಲ್ಲೂಕು ಹಂತದಲ್ಲಿ ಸ್ವೀಕರಿಸುವಂತೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದ್ದರು. ಆ ನಂತರ ತಾಲ್ಲೂಕು ಮಟ್ಟದಲ್ಲಿ ದೂರುಗಳನ್ನು ಸ್ವೀಕರಿಸಲಾಯಿತು. ನಂತರ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಅರ್ಜಿಗಳನ್ನು ಕ್ರೋಡೀಕರಿಸಿ ಜಿಲ್ಲಾಧಿಕಾರಿ ಅವರು ಸರ್ಕಾರಕ್ಕೆ ವರದಿ ಸಲ್ಲಿಸಿದರು’ ಎಂದು ಜಿಲ್ಲಾಧಿಕಾರಿ ಕಚೇರಿಯ ದೂರು ಸ್ವೀಕಾರ ಕೇಂದ್ರದ ಸಿಬ್ಬಂದಿ ತಿಳಿಸಿದರು.

ರಾಜ್ಯದಲ್ಲಿ ವಂಚನೆಗೆ ಒಳಗಾದವರು ತಮ್ಮದೇ ಆದ ಸಂಘ ಕಟ್ಟಿಕೊಂಡಿದ್ದಾರೆ. ಆ ಪ್ರಕಾರ ಜಿಲ್ಲೆಯಲ್ಲಿಯೂ ಆ ಸಂಘದ ಪ್ರತಿನಿಧಿಗಳು ಇದ್ದಾರೆ. ಅವರು ದೂರುಗಳನ್ನು ಕೊಡಿಸಿದ್ದರು. ಆ ಸಂಘದವರೇ ಅರ್ಜಿಯ ಮಾದರಿಯನ್ನು ರೂಪಿಸಿದ್ದಾರೆ. ಆ ಅರ್ಜಿಗಳ ಮೂಲಕ ದೂರು ಸಲ್ಲಿಕೆ ಆಗಿವೆ ಎಂದರು.

ಜಿಲ್ಲೆಯಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಹೆಚ್ಚು ಅರ್ಜಿಗಳು ಸಲ್ಲಿಕೆ ಆಗಿವೆ. ಈಗ ಸರ್ಕಾರ ಈ ಅರ್ಜಿಗಳನ್ನು ಪಡೆಯುವುದನ್ನು ನಿಲ್ಲಿಸಿದೆ. ಒಂದು ವರ್ಷದಲ್ಲಿ 22 ಸಾವಿರ ಅರ್ಜಿಗಳು ಸಲ್ಲಿಕೆ ಆಗಿವೆ ಎಂದು ವಿವರಿಸಿದರು.

‘ಹೆಚ್ಚು ಲಾಭ ನೀಡುವುದಾಗಿ ನಮ್ಮಿಂದ ಹೂಡಿಕೆ ಮಾಡಿಸಿಕೊಂಡು ವಂಚಿಸಿದ್ದಾರೆ. ಹೂಡಿಕೆ ಮಾಡಿರುವ ಹಣವನ್ನು ನಮಗೆ ವಾಪಸ್ ಕೊಡಿಸಿ’ ಎಂದು ಮಹಿಳೆಯರು ದೂರಿನಲ್ಲಿ ಕೋರಿದ್ದಾರೆ. 

ಮೀಟರ್ ಬಡ್ಡಿ ದಂಧೆ: ಜಿಲ್ಲೆಯಲ್ಲಿ ಖಾಸಗಿ ಹಣಕಾಸು ಸಂಸ್ಥೆಗಳು ಮತ್ತು ಮೈಕ್ರೊ ಫೈನಾನ್ಸ್‌ಗಳು ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದಾರೆ ಎನ್ನುವ ಆರೋಪಗಳು ಸಹ ವ್ಯಾಪಕವಾಗಿದೆ.

ಕಳೆದ ನವೆಂಬರ್‌ನಲ್ಲಿ ಚೇಳೂರು ತಾಲೂಕಿನ ಚೀಲಕಲನೇರ್ಪು ಗ್ರಾಮದಲ್ಲಿ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆಗ ಮೈಕ್ರೊ ಫೈನಾನ್ಸ್‌ ಕಿರುಕುಳದ ಕಾರಣಕ್ಕೆ ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಮಾತುಗಳು ಸಹ ಕೇಳಿ ಬಂದಿದ್ದವು. 

ನಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ಈ ಬಗ್ಗೆ ಪೊಲೀಸ್ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ಸಹ ನಡೆಸಿದ್ದರು. ಮೀಟರ್ ಬಡ್ಡಿ ದಂಧೆ ವಿರುದ್ಧ ಕ್ರಮಕೈಗೊಳ್ಳುವಂತೆ ಸೂಚಿಸಿದ್ದರು.

ಬಾಗೇಪಲ್ಲಿ, ಗುಡಿಬಂಡೆ ಸೇರಿದಂತೆ ಜಿಲ್ಲೆಯ ಗಡಿಭಾಗಗಳಲ್ಲಿ ಜಿಲ್ಲೆಯವರಷ್ಟೇ ಅಲ್ಲ ಆಂಧ್ರಪ್ರದೇಶದ ಮೀಟರ್ ದಂಧೆಕೋರರು ಸಹ ಲಗ್ಗೆ ಇಟ್ಟಿದ್ದಾರೆ. ಸಾಲ ನೀಡಿ ಹೆಚ್ಚು ಬಡ್ಡಿ ವಸೂಲಿ ಮಾಡುತ್ತಿದ್ದಾರೆ. ಸಾಲ ಮತ್ತು ಬಡ್ಡಿ ಪಾವತಿ ವಿಳಂಬವಾದರೆ ಮನೆ ಬಾಗಿಲಿಗೆ ಎಡತಾಕುತ್ತಿದ್ದಾರೆ. ಸಣ್ಣ ಪುಟ್ಟ ವ್ಯಾಪಾರಿಗಳು, ಕೂಲಿ ಕಾರ್ಮಿಕರು, ಬಡತನ ರೇಖೆಗಿಂತ ಕೆಳಗಿರುವವರೇ ಹೆಚ್ಚು ಈ ಮೀಟರ್ ಬಡ್ಡಿ ದಂಧೆಕೋರರಿಗೆ ಕಪಿಮುಷ್ಠಿಗೆ ಸಿಲುಕುತ್ತಿದ್ದಾರೆ. 

‘ಸರ್ಕಾರಕ್ಕೆ ವರದಿ ಸಲ್ಲಿಸಿದ್ದೇವೆ’

ಮೈಕ್ರೊ ಹಣಕಾಸು ಸಂಸ್ಥೆಗಳನ್ನು ನಂಬಿ ಹೂಡಿಕೆ ಮಾಡಿ ಹಣ ಕಳೆದುಕೊಂಡಿದ್ದೇವೆ. ಪರಿಹಾರ ಕೊಡಿಸಿ ಹಣ ವಾಪಸ್ ಕೊಡಿಸಿ ಎಂದು ಮಹಿಳೆಯರು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಆ ಅರ್ಜಿಗಳನ್ನು ಆಧರಿಸಿ ನಾವು ಸರ್ಕಾರಕ್ಕೆ ವರದಿ ಸಲ್ಲಿಸಿದ್ದೇವೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು. ಹೂಡಿಕೆ ಮಾಡಿದ್ದಾರೊ ಇಲ್ಲವೊ ಯಾವ ಪ್ರಮಾಣದಲ್ಲಿ ಹೂಡಿಕೆ ಮಾಡಿದ್ದಾರೆ ಎನ್ನುವ ಬಗ್ಗೆ ಅರ್ಜಿಗಳನ್ನು ಪರಿಶೀಲಿಸಬೇಕಾಗಿದೆ. ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಅರ್ಜಿಗಳ ವಿಲೇವಾರಿಗೆ ಸಮಿತಿ ರಚಿಸಲಾಗಿದೆ ಎಂದು ಹೇಳಿದರು.  ನಮ್ಮ ಹಣಕಾಸು ಸಂಸ್ಥೆಗಳಲ್ಲಿ ಹೂಡಿಕೆ ಮಾಡಿದರೆ ನಿಮಗೆ ದುಪ್ಪಟ್ಟು ಹಣ ನೀಡುತ್ತೇವೆ ಎನ್ನುವ ಹಣಕಾಸು ಸಂಸ್ಥೆಗಳ ಮೇಲೆ ಅವಲಂಬನೆ ಒಳ್ಳೆಯದಲ್ಲ. ಅವುಗಳನ್ನು ನಂಬ ಬಾರದು. ಸರ್ಕಾರದ ಸಹಕಾರ ಸಂಸ್ಥೆಗಳು ಬ್ಯಾಂಕುಗಳು ಅಂಚೆ ಕಚೇರಿಗಳು ಇವೆ. ಇಲ್ಲಿ ಹೂಡಿಕೆ ಮಾಡಿದರೆ ಒಳ್ಳೆಯದಾಗುತ್ತದೆ ಎಂದು ಕಿವಿಮಾತು ಹೇಳಿದರು.

ಬಡ್ಡಿ ದಂಧೆ; ಜಿಲ್ಲಾಧಿಕಾರಿ ಎಚ್ಚರಿಕೆ

ಖಾಸಗಿ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯುವ ವೇಳೆ ನಾವು ಪಡೆದ ಸಾಲಕ್ಕೆ ಎಷ್ಟು ಬಡ್ಡಿ ಪಾವತಿಸುತ್ತೇವೆ ಅಸಲು ಎಷ್ಟು ಇದರಿಂದ ನಮಗೆ ಯಾವ ರೀತಿಯ ಅನುಕೂಲ ಅನನುಕೂಲ ಎನ್ನುವ ಬಗ್ಗೆ ಜನರು ಸಹ ಅರಿವು ಹೊಂದುವುದು ಮುಖ್ಯ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು. ಕಿರು ಹಣಕಾಸು ಸಂಸ್ಥೆಗಳು ಹಣ ವಸೂಲಿಕೆ ಕಿರುಕುಳ ನೀಡುತ್ತಿದ್ದಾರೆ ಮೀಟರ್ ಬಡ್ಡಿಯ ಬಗ್ಗೆ ದೂರುಗಳು ಬಂದರೆ ಸಹಿಸುವ ಪ್ರಶ್ನೆ ಇಲ್ಲ. ಮೈಕ್ರೊ ಫೈನಾನ್ಸ್‌ಗಳು ಹಣ ವಸೂಲಿಗಾಗಿ ಕಿರುಕುಳ ನೀಡಿದರೆ ಕಠಿಣಕ್ರಮವಹಿಸಬೇಕು ಎಂದು ಪೊಲೀಸರಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.