ಶಿಡ್ಲಘಟ್ಟ: ಅಂತರರಾಷ್ಟ್ರೀಯ ಭೂಮಿ ದಿನದ ಅಂಗವಾಗಿ ಶಿಡ್ಲಘಟ್ಟ ನ್ಯಾಯಾಲಯದ ಆವರಣದಲ್ಲಿ ಮಂಗಳವಾರ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪರಿಸರ ಹಾನಿಯಾಗುತ್ತಿರುವ ಇಂದಿನ ದಿನಮಾನಗಳಲ್ಲಿ ಭೂಮಿ ದಿನವನ್ನು ಕೇವಲ ಸಾಂಕೇತಿಕ ಆಚರಣೆಯಾಗಿ ನಿಲ್ಲಿಸಬಾರದು. ಪ್ರಕೃತಿಯ ಉಳಿವಿಗೆ ಪ್ರತಿ ವ್ಯಕ್ತಿಯೂ ತಮ್ಮ ನಿತ್ಯ ಜೀವನದಲ್ಲಿ ಕಾಣಿಕೆ ನೀಡಬೇಕು. ಪರಿಸರ ಸಂರಕ್ಷಣೆಗೆ ನಾವೆಲ್ಲರೂ ಬದಲಾಗಬೇಕು ಎಂದರು.
ಪ್ಲಾಸ್ಟಿಕ್ ಬಳಕೆಯು ಪರಿಸರ ಹಾಗೂ ಮಾನವ ಆರೋಗ್ಯಕ್ಕೆ ಅಪಾಯಕಾರಿ. ಆಹಾರದ ಮೂಲಕ ದೇಹಕ್ಕೆ ಪ್ರವೇಶಿಸುತ್ತಿದೆ. ಜನರು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ, ಪರಿಸರ ಸ್ನೇಹಿ ಪರ್ಯಾಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ರಂಜಿತಾ.ಎಸ್.ಮಾತನಾಡಿ, ಇಂದಿನ ಬಹುತೇಕ ಭೂಮಿ ಸಂಬಂಧಿತ ಸಮಸ್ಯೆಗಳಿಗೆ ಮಾನವನೇ ಕಾರಣ. ಪುರಾತನ ಕಾಲದಲ್ಲಿ ಸಾವಯವ ಗೊಬ್ಬರದ ಬಳಕೆಯಿಂದ ಭೂಮಿ ಫಲವತ್ತಾಗುತ್ತಿತ್ತು. ಆದರೆ ಈಗ ರಾಸಾಯನಿಕ ಗೊಬ್ಬರಗಳಿಂದ ಭೂಮಿಯ ಗುಣಮಟ್ಟ ಹದಗೆಡುತ್ತಿದೆ. ಸಾವಯವ ಕೃಷಿ ಮತ್ತು ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಎಲ್ಲರೂ ಮುಂದಾಗಬೇಕೆಂದು ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ಎ. ನಾರಾಯಣಸ್ವಾಮಿ, ಮರಗಳ ಬೆಳವಣಿಗೆ ಹಾಗೂ ಪರಿಸರ ಸಂರಕ್ಷಣೆಯಲ್ಲಿ ಸಾಲು ಮರದ ತಿಮ್ಮಕ್ಕ ಅವರ ಪಾತ್ರ ಪ್ರೇರಣಾದಾಯಕ ಎಂದು ಹೇಳಿದರು.
ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಜಿ.ಭಾಸ್ಕರ್ ಸೇರಿದಂತೆ ಇತರ ವಕೀಲರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.