ಚಿಂತಾಮಣಿ: ಭಾ.ಕೃ.ಅ.ಪ-ಕೃಷಿ ವಿಜ್ಞಾನ ಕೇಂದ್ರ, ಕುರುಬೂರು ಫಾರ್ಮ್, ಚಿಂತಾಮಣಿಯಲ್ಲಿ ವಿಶ್ವ ಆಹಾರ ದಿನಾಚರಣೆ ಅಂಗವಾಗಿ ಬುಧವಾರ ವಿದ್ಯಾರ್ಥಿಗಳು, ರೈತರು, ರೈತ ಮಹಿಳೆಯರಿಗೆ ವಿವಿಧ ಚಟುವಟಿಕೆ ಆಯೋಜಿಸಲಾಗಿತ್ತು.
ವಿದ್ಯಾರ್ಥಿಗಳಿಗೆ ಆಹಾರದ ಉತ್ಪಾದನೆ, ಪ್ರಾಮುಖ್ಯತೆ, ಪ್ರತಿನಿತ್ಯ ಹಣ್ಣು ತರಕಾರಿ, ಸಿರಿಧಾನ್ಯ ಬಳಕೆ, ಪೋಷಕಾಂಶಯುಕ್ತ ಆಹಾರದ ಮತ್ತು ವಿಶ್ವ ಆಹಾರ ದಿನದ ವಿಶೇಷತೆ ಬಗ್ಗೆ ವಿಜ್ಞಾನಿಗಳಾದ ಸೌಮ್ಯ, ಹಿರೇಗೌಡ ಮತ್ತು ಜಿ.ಆರ್.ಅರುಣಾ ಅರಿವು ಮೂಡಿಸಿದರು.
ಕಾರ್ಯಕ್ರಮದ ಅಂಗವಾಗಿ ಆಶುಭಾಷಣ ಸ್ಪರ್ಧೆ, ನುಗ್ಗೆ ಸೊಪ್ಪಿನ ಪೋಷಕಾಂಶದ ಅರಿವು ಮೂಡಿಸಲು ರೈತ ಮಹಿಳೆಯರಿಗೆ ನುಗ್ಗೆ ಸೊಪ್ಪಿನ ಖಾದ್ಯಗಳ ಪಾಕ ಸ್ಪರ್ಧೆ ಆಯೋಜಿಸಲಾಗಿತ್ತು. ನುಗ್ಗೆ ಸೊಪ್ಪಿನ ಪಕೋಡಿ, ರೊಟ್ಟಿ, ಪಲ್ಯ, ವಡೆ, ಚಟ್ನಿ ಪುಡಿ, ಚಕ್ಕುಲಿ, ರಿಂಗ್ಸ್, ಬಿಸ್ಕತ್ತು ನಾನಾ ಬಗೆ ಖಾದ್ಯ ಪ್ರದರ್ಶಿಸಿದ ಮಹಿಳೆಯರು ಉತ್ಸಾಹದಿಂದ ಪಾಲ್ಗೊಂಡರು.
ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವರಿಗೆ ಪ್ರಮಾಣಪತ್ರ ಮತ್ತು ಬಹುಮಾನ ವಿತರಿಸಲಾಯಿತು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಹಾಗೂ ಹಿರಿಯ ವಿಜ್ಞಾನಿ ಎಂ.ಪಾಪಿರೆಡ್ಡಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು. ಪ್ರತಿವರ್ಷ ಅಕ್ಟೋಬರ್ 16ರಂದು ವಿಶ್ವದಾದ್ಯಂತ ವಿಶ್ವ ಆಹಾರ ದಿನವನ್ನು ಆಚರಿಸಲಾಗುತ್ತದೆ. ಆಹಾರ ಮತ್ತು ಕೃಷಿ ಕುರಿತ ಜಾಗತಿಕ ಜಾಗೃತಿ ಹೆಚ್ಚಿಸಲು 1945ರಲ್ಲಿ ಸ್ಥಾಪಿತವಾದ ಸಂಯುಕ್ತ ರಾಷ್ಟ್ರಗಳ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್.ಎ.ಒ) ಸ್ಮರಣಾರ್ಥವಾಗಿ ವಿಶ್ವ ಆಹಾರ ದಿನ ಆಚರಿಸುವ ಪದ್ಧತಿ ಆರಂಭವಾಯಿತು ಎಂದರು.
‘ಉತ್ತಮ ಆಹಾರ ಮತ್ತು ಉತ್ತಮ ಭವಿಷ್ಯಕ್ಕಾಗಿ ಕೈ ಕೈ ಜೋಡಿಸುವುದು’ ಎಂಬುದು 2025 ವಿಶ್ವ ಆಹಾರ ದಿನಾಚರಣೆ ಉದ್ದೇಶವಾಗಿದೆ. ಆಹಾರದ ಗುಣಮಟ್ಟ ಹೆಚ್ಚಿಸಲು ಪೌಷ್ಟಿಕತೆ ಎಲ್ಲರಿಗೂ ತಲುಪಿಸಲು ಹಾಗೂ ಸುಸ್ಥಿರ ಕೃಷಿ ಮೂಲಕ ಭವಿಷ್ಯ ಸುರಕ್ಷಿತಗೊಳಿಸಲು ಎಲ್ಲ ವಲಯಗಳ ಸಹಕಾರ ಅಗತ್ಯ ಎಂಬ ಶಕ್ತಿಯುತ ಸಂದೇಶ ನೀಡುತ್ತದೆ ಎಂದರು.
ಒಂದೆಡೆ ಹಸಿವು, ಅಪೌಷ್ಟಿಕತೆ ಮತ್ತು ಆಹಾರ ಕೊರತೆ ಇರುವಾಗ ಮತ್ತೊಂದೆಡೆ ಆಹಾರ ವ್ಯರ್ಥ ಮತ್ತು ಜೀವನಶೈಲಿ ಬದಲಾವಣೆಯಿಂದ ರೋಗ ಹೆಚ್ಚುತ್ತಿರುವುದು ಇಂದಿನ ಜಗತ್ತಿನ ದೊಡ್ಡ ವೈಪರೀತ್ಯ. ಈ ಸ್ಥಿತಿ ಬದಲಾಯಿಸಲು ಸರ್ಕಾರ ರೈತರು, ವಿಜ್ಞಾನಿಗಳು, ಉದ್ಯಮಗಳು, ನಾಗರಿಕ ಸಮಾಜ ಮತ್ತು ಗ್ರಾಹಕರು ಕೈಕಟ್ಟಿ ನಿಲ್ಲದೆ, ಕೈ ಕೈ ಹಿಡಿದು ಕೆಲಸ ಮಾಡಬೇಕಾಗಿದೆ ಎಂದರು.
ಸಂದ್ಯಾ, ಪ್ರವೀಣ್ ಮತ್ತು ಅಮೋಘ ಹಾಗೂ ವಿದ್ಯಾರ್ಥಿಗಳು, ರೈತರು, ರೈತ ಮಹಿಳೆಯರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.