ADVERTISEMENT

ಶಿಡ್ಲಘಟ್ಟ: ಭೈರವ ಮೂರ್ತಿಯ ಆರಾಧನೆ

ಡಿ.ಜಿ.ಮಲ್ಲಿಕಾರ್ಜುನ
Published 29 ಮೇ 2022, 4:27 IST
Last Updated 29 ಮೇ 2022, 4:27 IST
ಕರಿಯಪ್ಪನಹಳ್ಳಿಯ ಕಣಿವೆ ಭೈರವೇಶ್ವರ
ಕರಿಯಪ್ಪನಹಳ್ಳಿಯ ಕಣಿವೆ ಭೈರವೇಶ್ವರ   

ಶಿಡ್ಲಘಟ್ಟ: ಆದಿಚುಂಚನಗಿರಿ ಮತ್ತು ಸೀತಿ ಬೆಟ್ಟದಲ್ಲಿ ಅಲ್ಲದೆ ಇನ್ನೂ ಹಲವಾರು ಊರುಗಳಲ್ಲಿ ಶ್ರೀಕಾಲಭೈರವೇಶ್ವರನ ದೇಗುಲಗಳಿವೆ. ವಿವಿಧ ಜಾತಿಯ ಕುಟುಂಬಗಳು ಮನೆ ದೇವರಾಗಿ ಕಾಲಭೈರವನನ್ನು ಆರಾಧಿಸುವುದಲ್ಲದೆ ತಮ್ಮ ಮಕ್ಕಳ ಎಲ್ಲಾ ಮಂಗಳ ಕಾರ್ಯಗಳನ್ನು ಈ ಭೈರವನ ಸನ್ನಿಧಿಯಲ್ಲಿಯೇ ಆಚರಿಸುತ್ತಾರೆ.

ಭೈರವನು ಈಶ್ವರನ ಒಂದು ಉಗ್ರರೂಪ. ಬ್ರಹ್ಮನು ತನ್ನನ್ನು ನಿಂದಿಸಿದ್ದರಿಂದ ಶಿವನು ಸಿಟ್ಟಿಗೆದ್ದು ಭೈರವನ ರೂಪದಲ್ಲಿ ಬ್ರಹ್ಮನ ಐದನೆಯ ಶಿರವನ್ನು ಚಿವುಟಿ ಹಾಕಿದ. ಈ ಬ್ರಹ್ಮಹತ್ಯೆಯ ಪಾಪದಿಂದ ಶಿವನು ಕಾಶಿ ಕ್ಷೇತ್ರದಲ್ಲಿ ಮುಕ್ತಿ ಪಡೆದ. ಅಲ್ಲಿನ ವಿಶ್ವನಾಥನ ಕ್ಷೇತ್ರಪಾಲಕನಾಗಿ ನೆಲೆನಿಂತ. ಗ್ರಾಮದೇವತೆಯಾಗಿ ಗ್ರಾಮರಕ್ಷಕನಾಗಿ ಭೈರವನಿಗೆ ಎಲ್ಲೆಡೆ ಪೂಜೆ ಸಲ್ಲುತ್ತದೆ ಎನ್ನುತ್ತಾರೆ ಸಾಹಿತಿ ಗೋಪಾಲಗೌಡ ಕಲ್ವಮಂಜರಿ.

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಮೂರು ಕಡೆ ಭೈರವನನ್ನು ಪೂಜಿಸಲಾಗುತ್ತಿದೆ. ನಲ್ಲರಾಳ್ಳಹಳ್ಳಿ ಬಳಿಯಿರುವ ರಾಮಲಿಂಗೇಶ್ವರ ಬೆಟ್ಟದ ಮೇಲಿನ ದೇವಾಲಯ, ನಿಲುವರಾತಹಳ್ಳಿಯಲ್ಲಿ ಕೆಂಪು ಭೈರವೇಶ್ವರ ಮತ್ತು ಕರಿಯಪ್ಪನಹಳ್ಳಿಯ ಕಣಿವೆ ಭೈರವೇಶ್ವರ.

ADVERTISEMENT

ಕರಿಯಪ್ಪನಹಳ್ಳಿಯ ಕಣಿವೆ ಭೈರವೇಶ್ವರ: ಈ ಭೈರವನು ‘ಕನಮ ಭೈರವೇಶ್ವರ’ ಎಂದೇ ಹೆಸರಾಗಿದ್ದಾನೆ. ಇಲ್ಲಿ ಪ್ರಾಚೀನ ಹುತ್ತದ ಮೇಲೆ ಒಟ್ಟು ಹನ್ನೆರಡು ನಿರಾಕಾರ ಶಿಲೆಗಳಿದ್ದು, ಎಲ್ಲವನ್ನೂ ಭೈರವನ ಪ್ರತೀಕವಾಗಿ ಪ್ರತಿಷ್ಠೆ ಮಾಡಲಾಗಿದೆ.

ಈ ಕಣಿವೆ ಭೈರವೇಶ್ವರನ ಒಕ್ಕಲು ಕುಟುಂಬಗಳಲ್ಲಿ ಶೇ 90ರಷ್ಟು ಒಕ್ಕಲಿಗರು. ಇವರೆಲ್ಲ ಆಮೆಗೋತ್ರಕ್ಕೆ ಸೇರಿದವರು. ವಿಶೇಷವೆಂದರೆ ಭೈರವ ನೆಲೆಸಿರುವ ಹುತ್ತದ ಈಶಾನ್ಯ ಮೂಲೆಯಲ್ಲಿದ್ದ ಹುಟ್ಟುಬಂಡೆ ‘ಗೋವುಕಲ್ಲ’ನ್ನು ಯಥಾರೀತಿ ಸಭಾ ಮಂದಿರದಲ್ಲಿ ಉಳಿಸಿಕೊಂಡಿದ್ದು, ದೇವರ ಜೊತೆ ಅದಕ್ಕೂ ಪೂಜೆ ಸಲ್ಲಿಸಲಾಗುತ್ತಿದೆ.

ನಿಲುವರಾತಹಳ್ಳಿಯ ಕೆಂಪು ಭೈರವೇಶ್ವರ: ‘ಕೆಂಪು ನೀರು ಗೋತ್ರ’ ಮೊರಸು ಒಕ್ಕಲಿಗರು ಬಹುಪಾಲು ಈ ಭೈರವನ ಒಕ್ಕಲಾದುದರಿಂದ, ಅವರು ಈ ದೇವರನ್ನು ‘ಕೆಂಪು ಭೈರವೇಶ್ವರ’ ಎಂದು ಆರಾಧಿಸುವರು.

ಗರ್ಭಗುಡಿಯಲ್ಲಿ ಜಟಾಧಾರಿ ದಿಗಂಬರಮೂರ್ತಿ ಭೈರವ ಚತುರ್ಭುಜ ಹೊಂದಿದ್ದು, ಮೇಲ್ಭಾದ ಬಲಗೈಲಿ ತ್ರಿಶೂಲ, ಎಡಗೈಲಿ ಡಮರುಗ, ಕೆಳಭಾಗದ ಬಲಗೈಲಿ ಖಡ್ಗ ಹಾಗೂ ಎಡಗೈಲಿ ಕಪಾಲವನ್ನು ಧರಿಸಿದ್ದಾನೆ. ದೇವರ ಪಾದಗಳ ಬಳಿ ಅಕ್ಕಪಕ್ಕದಲ್ಲಿ ಒಂದೊಂದು ಶ್ವಾನ ನಿಂತಿರುವುದೊಂದು ವಿಶೇಷ. ಗರ್ಭಗುಡಿಯ ಮೂಲೆಯಲ್ಲಿ ಕೃಷ್ಣಶಿಲೆಯ 6 ನಿರಾಕಾರ ಗುಂಡುಕಲ್ಲುಗಳಿವೆ. ಇವು ಮೊದಲಲ್ಲಿ ಭೈರವನ ರೂಪದಲ್ಲಿ ಪ್ರತಿಷ್ಠೆಗೊಂಡಿದ್ದ ನಿರಾಕಾರ ಶಿಲೆಗಳು.

ರಾಮಲಿಂಗೇಶ್ವರ ಬೆಟ್ಟದ ಭೈರವ: ಬಶೆಟ್ಟಹಳ್ಳಿ ಹೋಬಳಿಯ ನಲ್ಲರಾಳ್ಳಹಳ್ಳಿ ಬಳಿಯಿರುವ ರಾಮಲಿಂಗೇಶ್ವರ ಬೆಟ್ಟದ ಮೇಲಿನ ದೇವಾಲಯದ ಕ್ಷೇತ್ರಪಾಲಕನಾಗಿ ಭೈರವನನ್ನು ಪೂಜಿಸಲಾಗುತ್ತಿದೆ. ದೇವಾಲಯದ ಮಂಟಪದ ಜಗುಲಿಯ ದೇವಕೋಷ್ಟಕದಲ್ಲಿ ಕಾಲಭೈರವನನ್ನು ಪ್ರತಿಷ್ಠಾಪಿಸಲಾಗಿದೆ. ಈ ಉಬ್ಬುಶಿಲ್ಪಕ್ಕೆ ನಿತ್ಯಪೂಜೆ ನಡೆಯುತ್ತದೆ. ಅಮಾವಾಸ್ಯೆ ದಿನ ಬೂದುಗುಂಬಳ ದೀಪ
ಬೆಳಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.