ADVERTISEMENT

ಮಾಜಿ ಅಧ್ಯಕ್ಷರಿಂದ ತಪ್ಪು ಸಂದೇಶ

ಪತ್ರಿಕಾಗೋಷ್ಠಿಯಲ್ಲಿ ಬಿ.ಎಸ್.ರಫೀವುಲ್ಲಾ ವಿರುದ್ಧ ಜಿಲ್ಲಾ ವಕ್ಫ್ ಸಮಿತಿ ಅಧ್ಯಕ್ಷ ಇಂತಿಯಾಜ್ ಪಾಷಾ ಆರೋಪ

​ಪ್ರಜಾವಾಣಿ ವಾರ್ತೆ
Published 13 ಜೂನ್ 2020, 15:55 IST
Last Updated 13 ಜೂನ್ 2020, 15:55 IST

ಚಿಕ್ಕಬಳ್ಳಾಪುರ: ‘ಜಿಲ್ಲಾ ವಕ್ಫ್ ಸಮಿತಿಯ ಮಾಜಿ ಅಧ್ಯಕ್ಷ ಬಿ.ಎಸ್.ರಫೀವುಲ್ಲಾ ಅವರು ಸಾಮಾಜಿಕ ಜಾಲತಾಣಗಳ ಮೂಲಕ ಇಂದಿಗೂ ಸಮಿತಿಗೇ ನಾನೇ ಅಧ್ಯಕ್ಷ ಎಂದು ತಪ್ಪು ಸಂದೇಶಗಳನ್ನು ಹರಿಬಿಡುವ ಮೂಲಕ ಸಮುದಾಯದ ದಾರಿ ತಪ್ಪಿಸುತ್ತಿದ್ದಾರೆ’ ಎಂದು ಜಿಲ್ಲಾ ವಕ್ಫ್ ಸಮಿತಿ ಅಧ್ಯಕ್ಷ ಇಂತಿಯಾಜ್ ಪಾಷಾ ಆರೋಪಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನು ಮೇ.9 ರಂದು ಜಿಲ್ಲಾ ವಕ್ಫ್ ಸಮಿತಿ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿರುವೆ. ಈ ಹಿಂದೆ ಅಧ್ಯಕ್ಷರಾಗಿದ್ದ ರಫೀವುಲ್ಲಾ ಅವರು ನನ್ನ ನೇಮಕಾತಿ ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದಾರೆ’ ಎಂದು ತಿಳಿಸಿದರು.

‘ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ರಾಜ್ಯ ವಕ್ಫ್ ಸಮಿತಿಯ ಹಿರಿಯ ಅಧಿಕಾರಿಗಳ ಆದೇಶದ ಮೇರೆಗೆ ನಾನು ಅಧ್ಯಕ್ಷನಾಗಿ ಕೆಲಸ ಮಾಡುತ್ತಿರುವೆ. ಇತ್ತೀಚೆಗೆ ಸರ್ಕಾರ, ವಕ್ಫ್ ಸಮಿತಿ ನಿರ್ದೇಶನದಂತೆ ದರ್ಗಾ ಹಾಗೂ ಮಸೀದಿಗಳಲ್ಲಿ ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಮುಂಜಾಗ್ರತಾ ಕೈಗೊಳ್ಳಲಾಗಿತ್ತು. ಆ ಕೆಲಸವನ್ನು ತಾನು ಮಾಡಿಸಿದ್ದು ಎಂದು ರಫೀವುಲ್ಲಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಸಂದೇಶ ಹರಡುತ್ತಿದ್ದಾರೆ’ ಎಂದರು.

ADVERTISEMENT

‘ಲಾಕ್‍ಡೌನ್ ಸಂಕಷ್ಟದ ಕಾರಣಕ್ಕೆ ಜಮಾತ್ ಅಹ್ಲೆ ಇಸ್ಲಾಂಗೆ ಸೇರಿದ 55 ಅಂಗಡಿಗಳ ವ್ಯಾಪಾರಿಗಳಿಗೆ ಎರಡು ತಿಂಗಳ ಬಾಡಿಗೆ (ಸುಮಾರು ₹5 ಲಕ್ಷ) ವಿನಾಯಿತಿ ನೀಡಲಾಗಿದೆ. ಉಳಿದ ತಾಲ್ಲೂಕುಗಳಲ್ಲೂ ಈ ವಿನಾಯಿತಿ ವಿಚಾರವಾಗಿ ಸಮಿತಿಗಳೊಂದಿಗೆ ಚರ್ಚಿಸಲಾಗುವುದು’ ಎಂದು ಹೇಳಿದರು.

‘ಮಾಜಿ ಅಧ್ಯಕ್ಷರ ಕಾಲದಲ್ಲಿ ಬಾಕಿ ಉಳಿದಿದ್ದ ಮಳಿಗೆಗಳ ₹23 ಲಕ್ಷ ಬಾಡಿಗೆಯಲ್ಲಿ ₹3.70 ಲಕ್ಷ ವಸೂಲಿ ಮಾಡಲಾಗಿದೆ. ರಫೀವುಲ್ಲಾ ಅವರು ತಪ್ಪು ತಿದ್ದುಕೊಳ್ಳಲಿ. ಇಲ್ಲದಿದ್ದರೆ ಕಾನೂನಿನ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ತಿಳಿಸಿದರು. ಮುಖಂಡರಾದ ಜಿಯಾವುಲ್ಲಾ, ಮುಜಾಮಿಲ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.