ADVERTISEMENT

ಬಕೆಟ್ ಹಿಡಿದು ಎತ್ತಿನಹೊಳೆಗೆ ಕಾಯುತ್ತಿದ್ದೇವೆ: ಶಾಸಕ ಎಸ್‌.ಆರ್.ವಿಶ್ವನಾಥ್

ರಾಜ್ಯ ಸರ್ಕಾರದ ವಿರುದ್ಧ ಯಲಹಂಕ ಶಾಸಕ ಎಸ್‌.ಆರ್.ವಿಶ್ವನಾಥ್ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 7:31 IST
Last Updated 6 ಫೆಬ್ರುವರಿ 2026, 7:31 IST
ಚಿಕ್ಕಬಳ್ಳಾಪುರದಲ್ಲಿ ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್‌ನಿಂದ ಹಮ್ಮಿಕೊಂಡಿದ್ದ ಹೊದಿಕೆ ವಿತರಣೆ ಕಾರ್ಯಕ್ರಮವನ್ನು ಶಾಸಕ ಎಸ್‌.ಆರ್.ವಿಶ್ವನಾಥ್ ಹಾಗೂ ಗಣ್ಯರು ಉದ್ಘಾಟಿಸಿದರು
ಚಿಕ್ಕಬಳ್ಳಾಪುರದಲ್ಲಿ ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್‌ನಿಂದ ಹಮ್ಮಿಕೊಂಡಿದ್ದ ಹೊದಿಕೆ ವಿತರಣೆ ಕಾರ್ಯಕ್ರಮವನ್ನು ಶಾಸಕ ಎಸ್‌.ಆರ್.ವಿಶ್ವನಾಥ್ ಹಾಗೂ ಗಣ್ಯರು ಉದ್ಘಾಟಿಸಿದರು   

ಚಿಕ್ಕಬಳ್ಳಾಪುರ: ‘ಈ ಭಾಗಕ್ಕೆ 2027ಕ್ಕೆ ಎತ್ತಿನಹೊಳೆ ನೀರು ಬರುತ್ತದೆ ಎಂದು ಸರ್ಕಾರ ಹೇಳುತ್ತಿದೆ. ನಾವೂ ಬಕೆಟ್ ಹಿಡಿದು ನೀರಿಗಾಗಿ ಕಾಯುತ್ತಿದ್ದೇವೆ’ ಎಂದು ಯಲಹಂಕ ಶಾಸಕ ಎಸ್‌.ಆರ್.ವಿಶ್ವನಾಥ್ ವ್ಯಂಗ್ಯವಾಡಿದರು. 

ನಗರದಲ್ಲಿ ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾದ ಬಿಜೆಪಿ ಮುಖಂಡ ಸಂದೀಪ್ ರೆಡ್ಡಿ ಅವರು ಹಮ್ಮಿಕೊಂಡಿದ್ದ ಹೊದಿಕೆ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ವೀರಪ್ಪ ಮೊಯಿಲಿ ಅವರು ಈಗ ಎತ್ತಿನಹೊಳೆ ಬರುತ್ತದೆ ಎನ್ನುತ್ತಲೇ ಇದ್ದರು. ಆದರೆ ಇಂದಿಗೂ ನೀರು ಬರಲಿಲ್ಲ ಎಂದರು.

ADVERTISEMENT

ಸಂಸದ ಡಾ.ಕೆ.ಸುಧಾಕರ್ ಅವರ ಅವಶ್ಯಕತೆ ದೇಶಕ್ಕೆ ಇದೆ. ಅವರು ಕೇಂದ್ರ ಸಚಿವರಾಗಲಿ. ಚಿಕ್ಕಬಳ್ಳಾಪುರದಲ್ಲಿ ಯುವಕರನ್ನು ಬೆಳೆಸಬೇಕು. ಚಿಕ್ಕಬಳ್ಳಾಪುರ ತಾಲ್ಲೂಕಿನ ಸೊಪ್ಪಳ್ಳಿ ನನ್ನ ತಾಯಿಯ ತವರು. ಈ ಭಾಗದಲ್ಲಿ ನಮ್ಮ ಸಂಬಂಧಿಕರು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಸುಧಾಕರ್ ಅವರು ವಿಧಾನಸಭೆ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಿದಾಗ ಅವರ ಪರವಾಗಿ ಸಕ್ರಿಯವಾಗಿ ಕೆಲಸ ಮಾಡಿದೆವು ಎಂದರು.

ಲೋಕಸಭೆಯಲ್ಲಿ ಯಲಹಂಕ ಕ್ಷೇತ್ರದಲ್ಲಿ 80 ಸಾವಿರ ಮುನ್ನಡೆ ಕೊಡಿಸಿದೆವು. ಅವರು ಸಂಸದರಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದರೂ ಅವರ ಪರವಾಗಿ ಕೆಲಸ ಮಾಡುತ್ತೇವೆ. ನಮ್ಮ ಮಾತುಗಳು ಕೆಲವು ವೇಳೆ ನಿಷ್ಠುರ ಎನಿಸಬಹುದು. ಆದರೆ ಒಳಗೆ ವಿಷ ಇಟ್ಟುಕೊಳ್ಳುವುದಿಲ್ಲ. ನೇರವಾಗಿ ಮಾತನಾಡುತ್ತೇವೆ ಎಂದು ಹೇಳಿದರು. 

ಮುಖಂಡ ಸಂದೀಪ್ ರೆಡ್ಡಿ ಮಾತನಾಡಿ, ಕಳೆದ 15 ವರ್ಷದಿಂದ ನನ್ನಷ್ಟಕ್ಕೆ ನಾನು ಚಿಕ್ಕಬಳ್ಳಾಪುರದಲ್ಲಿ ಕೆಲಸ ಮಾಡುತ್ತಿದ್ದೇನೆ. ಹಲವು ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಗೊಳಿಸಿದ್ದೇನೆ. ರಾಜಕೀಯ ಉದ್ದೇಶ ಇಟ್ಟುಕೊಂಡು ಕೆಲಸ ಮಾಡುತ್ತಿಲ್ಲ. ಯಾರಿಗಾದರೂ ಕಷ್ಟ ಎಂದರೆ ಮಾನವೀಯವಾಗಿ ಸ್ಪಂದಿಸುತ್ತೇನೆ ಅಷ್ಟೇ ಎಂದರು.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾನೂ ಸ್ಪರ್ಧಿಸುವುದು ಖಚಿತ. ನನಗೆ ಅಧಿಕಾರಿ ಸಿಕ್ಕರೆ ಯಲಹಂಕಕ್ಕಿಂತ ಚಿಕ್ಕಬಳ್ಳಾಪುರವನ್ನು ಮತ್ತಷ್ಟು ಅಭಿವೃದ್ಧಿ ಮಾಡುವೆ ಎಂದು ಹೇಳಿದರು.

ಮಂಚೇನಹಳ್ಳಿ ತಾಲ್ಲೂಕು ಆಸ್ಪತ್ರೆಯಲ್ಲಿ ಮಹಿಳಾ ವೈದ್ಯಾಧಿಕಾರಿ ಇಲ್ಲ. ತಕ್ಷಣ ಮಹಿಳಾ ವೈದ್ಯರನ್ನು ನೇಮಿಸಬೇಕು ಎಂದು ಜಿಲ್ಲಾಡಳಿತಕ್ಕೆ ಮತ್ತು ಶಾಸಕರಿಗೆ ಮನವಿ ಮಾಡುವೆ. ಇಲ್ಲದಿದ್ದರೆ ಹೋರಾಟದ ಮಾರ್ಗ ಹಿಡಿಯಲಾಗುವುದ ಎಂದರು. 

ಅಲೋಕ್ ವಿಶ್ವನಾಥ್, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಮುನಿಯಪ್ಪ, ಡಾ.ಮಧುಕರ್,  ಮುರುಳಿ, ಜಾತವಾರ ಹೊಸಹಳ್ಳಿ ಜಗದೀಶ್, ಮಲ್ಲಿಕಾ, ವರದರಾಜ್ ಮತ್ತಿತರರು ವೇದಿಕೆಯಲ್ಲಿ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.