
ಚಿಂತಾಮಣಿ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅನುಮೋದಿತ 2025–26ನೇ ಸಾಲಿನ ಯುವ ನೀತಿ ಕಾರ್ಯಕ್ರಮದ ಅಡಿಯಲ್ಲಿ ನಮ್ಮೂರ ಶಾಲೆಗೆ ನಮ್ಮ ಯುವಜನರು ಯೋಜನೆಗೆ ಚಿಂತಾಮಣಿ ತಾಲ್ಲೂಕಿನ ಭೂಮಿಶೆಟ್ಟಿಹಳ್ಳಿ ಸರ್ಕಾರಿ ಆದರ್ಶ ಶಾಲೆ ಆಯ್ಕೆಯಾಗಿದೆ.
ಪ್ರತಿ ಜಿಲ್ಲೆಗೆ ಒಂದು ಸರ್ಕಾರಿ ಶಾಲೆಯನ್ನು ಆಯ್ಕೆ ಮಾಡಲಾಗುತ್ತದೆ. ಜಿಲ್ಲೆಯಿಂದ ಆಯ್ಕೆಯಾದ ಏಕೈಕ ಶಾಲೆಯಾಗಿದೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಮತ್ತು ನೋಂದಾಯಿತ ಕ್ರೀಡಾ ಸಂಸ್ಥೆ ಆಯೋಜನೆ ಮಾಡುವ ಕ್ರೀಡಾ ಸ್ಪರ್ಧೆಗಳಲ್ಲಿ ತಾಲ್ಲೂಕು, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿರುವ ಕ್ರೀಡಾಪಟುಗಳಿರುವ ಸರ್ಕಾರಿ ಶಾಲೆಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಶಾಲೆಗೆ ಒಂದು ಲಕ್ಷ ಪ್ರೋತ್ಸಾಹ ಧನ ಒದಗಿಸಲಾಗುತ್ತದೆ.
ಹಿಂದೆ ಸಂಘ-ಸಂಸ್ಥೆಗಳಿಗೆ ಪ್ರೋತ್ಸಾಹಧನ ನೀಡಲಾಗುತ್ತಿತ್ತು. ಇದೀಗ ಅದನ್ನು ನಿಲ್ಲಿಸಿ 2017-18ನೇ ಸಾಲಿನಿಂದ ಉತ್ತಮ ಕ್ರೀಡಾಪಟು ಹೊಂದಿರುವ ಸರ್ಕಾರಿ ಶಾಲೆಗೆ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ. ಪ್ರಸಕ್ತ ಸಾಲಿನಿಂದ ಈ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತರಲು ಯುವ ಸಬಲೀಕರಣ ಮತ್ತು ಕ್ರೀಡಾ ನಿರ್ದೇಶನಾಲಯ ಕಟ್ಟುನಿಟ್ಟಿನ ಸುತ್ತೋಲೆ ಹೊರಡಿಸಿದೆ.
ಪ್ರೋತ್ಸಾಹಧನ ಪಡೆಯ ಬಯಸುವ ಸರ್ಕಾರಿ ಶಾಲೆಗಳು ತಾಲ್ಲೂಕಿನ ಹಿಂದಿನ ಸಾಲಿನಲ್ಲಿ ಕ್ರೀಡೆಯಲ್ಲಿ ಉತ್ತಮ ಸಾಧನೆ ತೋರಿಸುವ ಹೆಚ್ಚಿನ ಕ್ರೀಡಾಪಟುಗಳ ಪಟ್ಟಿ ಹಾಗೂ ದಾಖಲೆ, ದೈಹಿಕ ಶಿಕ್ಷಣ ಶಿಕ್ಷಕರ ಹೆಸರು, ಮೊಬೈಲ್ ಸಂಖ್ಯೆ ಸಿದ್ಧಪಡಿಸಿ ಜಿಲ್ಲೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಿಗೆ ಸಲ್ಲಿಸಬೇಕು. ದಾಖಲೆ ಪರಿಶೀಲಿಸಿ ಶಾಲೆಗಳನ್ನು ಆಯ್ಕೆ ಮಾಡಲಾಗುತ್ತದೆ.
ಯೋಜನೆ ಉದ್ದೇಶ: ಗ್ರಾಮೀಣ ಶಾಲಾ ಮಕ್ಕಳಿಗೆ ಕ್ರೀಡಾ ಕ್ಷೇತ್ರದಲ್ಲಿ ಪ್ರೋತ್ಸಾಹ ನೀಡುವುದು ಮತ್ತು ದೇಸಿ ಕಲೆ ಹಾಗೂ ಜಾನಪದ ಕ್ರೀಡೆಗಳಿಗೆ ಉತ್ತೇಜನ ನೀಡುವುದು. ಕ್ರೀಡಾ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ ಸರ್ಕಾರಿ ಶಾಲೆ ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಲು ಈ ಯೋಜನೆ ರೂಪಿಸಲಾಗಿದೆ.
ಆದರ್ಶ ಶಾಲೆಯ ಕ್ರೀಡಾ ಸಾಧನೆ: 17 ಮತ್ತು 14 ವರ್ಷ ವಯೋಮಿತಿ ಒಳಪಟ್ಟ ಎರಡು ತಂಡಗಳ ಬಾಲಕಿಯರು ಕಬಡ್ಡಿಯಲ್ಲಿ, 17 ವರ್ಷ ವಯೋಮಿತಿಯ ಬಾಲಕರ ಕೊಕ್ಕೊ, 17 ಮತ್ತು 14 ವರ್ಷ ವಯೋಮಿತಿಗೆ ಒಳಪಟ್ಟ ಬಾಲಕರ ಬಾಲ್ ಬ್ಯಾಡ್ಮಿಂಟನ್ ತಂಡ ತಾಲ್ಲೂಕು ಮತ್ತು ಜಿಲ್ಲಾ ಹಂತದಲ್ಲಿ ವಿಜೇತರಾಗಿ ವಿಭಾಗಮಟ್ಟಕ್ಕೆ ಆಯ್ಕೆಯಾಗಿವೆ. 14 ವರ್ಷ ವಯೋಮಿತಿಗೆ ಒಳಪಟ್ಟ ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ತಂಡವು ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದೆ. ಮೌನಿಕ ಹ್ಯಾಮರ್ ಥ್ರೋ ಮೇಲಾಟದಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನಮ್ಮೂರ ಶಾಲೆಗೆ ನಮ್ಮ ಯುವಜನರು ಕಾರ್ಯಕ್ರಮಕ್ಕೆ ನಮ್ಮ ಶಾಲೆ ಆಯ್ಕೆ ಆಗಿರುವುದು ಸಂತಸವಾಗಿದೆಬಿ.ಎಚ್. ಮಂಜುನಾಥ್ ಮುಖ್ಯ ಶಿಕ್ಷಕ
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪ್ರೋತ್ಸಾಹ ಧನಕ್ಕೆ ಆಯ್ಕೆ ಆಗಿರುವುದು ಸಾಧನೆ ಮತ್ತು ಶ್ರಮದ ಪ್ರತಿಫಲ. ಆಧುನಿಕ ಕ್ರೀಡಾ ಸಾಮಗ್ರಿ ಖರೀದಿಸಿ ಉನ್ನತ ಸಾಧನೆ ಮಾಡಲು ಕ್ರೀಡಾಪಟುಗಳಿಗೆ ತರಬೇತಿ ನೀಡಲಾಗುವುದುಎನ್.ಪರಮೇಶ್ವರ್ ದೈಹಿಕ ಶಿಕ್ಷಣ ಶಿಕ್ಷಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.