ADVERTISEMENT

ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ: ಗರಿಗೆದರಿದ ಟಿಕೆಟ್ ರಾಜಕೀಯ

ಡಿ.ಎಂ.ಕುರ್ಕೆ ಪ್ರಶಾಂತ
Published 3 ಜುಲೈ 2021, 8:19 IST
Last Updated 3 ಜುಲೈ 2021, 8:19 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಚಿಕ್ಕಬಳ್ಳಾಪುರ: ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ಪ್ರಕಟವಾಗಿದೆ. ಈ ಮೂಲಕ ಮತ್ತೆ ಜಿಲ್ಲೆಯ ರಾಜಕಾರಣದಲ್ಲಿ ಕಾವು ಆರಂಭವಾಗಿದೆ. ಮೀಸಲಾತಿ ಪಟ್ಟಿ ಪ್ರಕಟವಾಗುತ್ತಲೇ ಕೆಲವು ಕ್ಷೇತ್ರಗಳಲ್ಲಿ ಮುಖಂಡರ ಮನಸ್ಸುಗಳು ಕದಡಿದ ನೀರಾಗಿದೆ.

ಮೀಸಲಾತಿ ಪಟ್ಟಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಚುನಾವಣಾ ಆಯೋಗ ಜು.8ರವರೆಗೆ ಕಾಲಾವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಕೆಲವು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಮುಖಂಡರು ಸಿದ್ಧತೆಗಳನ್ನು ಆರಂಭಿಸಿದ್ದಾರೆ ಎನ್ನುತ್ತವೆ ಮೂಲಗಳು. ಒಂದು ಕ್ಷೇತ್ರದ ಮೀಸಲಾತಿ ಬದಲಾವಣೆ ಇತರೆ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮೇಲೂ ಪರಿಣಾಮ ಬೀರುತ್ತದೆ ಎನ್ನುವ ಅಭಿಪ್ರಾಯಗಳು ಸಹ ವ್ಯಕ್ತವಾಗುತ್ತಿವೆ.

ಈ ಹಿಂದೆ ಕ್ಷೇತ್ರ ಯಾವ ವರ್ಗಕ್ಕೆ ಮೀಸಲಾಗಿತ್ತು. ಈಗ ಯಾವುದಕ್ಕೆ ಮೀಸಲಾಗಿದೆ. ಆ ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯಲ್ಲಿ ಯಾವ ಸಮುದಾಯದ ಜನರು ಹೆಚ್ಚಿದ್ದಾರೆ. ಹೀಗೆ ಆಕ್ಷೇಪಣೆ ಸಲ್ಲಿಸಲು ಅಗತ್ಯವಾದ ದಾಖಲೆಗಳನ್ನು ಸಂಗ್ರಹಿಸುವಲ್ಲಿ ಮುಖಂಡರು ಹಾಗೂ ಅವರ ಬೆಂಬಲಿಗರು ನಿರತರಾಗಿದ್ದಾರೆ.

ADVERTISEMENT

ಗೌರಿಬಿದನೂರು ತಾಲ್ಲೂಕಿನಲ್ಲಿ ನಗರಗೆರೆ ಕ್ಷೇತ್ರ ಸಾಮಾನ್ಯ ವರ್ಗಕ್ಕೆ ಬಂದಿದೆ. ಆ ಕ್ಷೇತ್ರದಲ್ಲಿ ಪರಿಶಿಷ್ಟ ಸಮುದಾಯ ಹೆಚ್ಚಿದೆ. ಇಂತಹವುಗಳನ್ನು ಗಮನದಲ್ಲಿ ಇಟ್ಟುಕೊಂಡು ಆಕ್ಷೇಪಣೆಗಳನ್ನು ಸಲ್ಲಿಸಲು ಸಿದ್ಧತೆಗಳು ನಡೆದಿವೆ ಎನ್ನಲಾಗುತ್ತಿದೆ.

ಗರಿಗೆದರಿದ ಟಿಕೆಟ್ ರಾಜಕೀಯ: ಕೋವಿಡ್‌ಗೂ ಮುನ್ನವೇ ಈ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಆಯಾ ಪಕ್ಷಗಳ ಮುಖಂಡರು ಪ್ರತಿಷ್ಠೆಯನ್ನಾಗಿಸಿಕೊಂಡಿದ್ದರು. ಆದರೆ ಮೀಸಲಾತಿಯ ಪಟ್ಟಿ ಪ್ರಕಟವಾಗದ ಕಾರಣ ಈ ಬಗ್ಗೆ ಹೆಚ್ಚು ಮಾತನಾಡಲು ಮುಖಂಡರು ಮುಂದಾಗಿರಲಿಲ್ಲ. ‘ಮೀಸಲಾತಿ ಪ್ರಕಟವಾಗಲಿ’ ಎಂದಷ್ಟೇ ನುಡಿಯುತ್ತಿದ್ದರು. ಈಗ ಮೀಸಲಾತಿ ಪ್ರಕಟವಾಗುವ ಮೂಲಕ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಗರಿಗೆದರಿದೆ.

ಮೀಸಲಾತಿ ಆಧರಿಸಿ ಆಯಾ ಪಕ್ಷಗಳ ಮುಖಂಡರು ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಮತ್ತೊಂದು ಕಡೆ ಮೀಸಲಾತಿಯಿಂದ ಸ್ಪರ್ಧೆಯಿಂದ ವಂಚಿತರಾಗಿರುವ ಜಿ.ಪಂ ಸದಸ್ಯರು ಮತ್ತೊಂದು ಕ್ಷೇತ್ರಗಳತ್ತಲೂ ಕಣ್ಣಿಟ್ಟಿದ್ದಾರೆ. ಬಹಳಷ್ಟು ಸದಸ್ಯರು ಬೇರೆ ಕ್ಷೇತ್ರದಿಂದ ಮತ್ತೆ ಸ್ಪರ್ಧೆ ಮಾಡುವುದಿಲ್ಲ ಎನ್ನುತ್ತಿದ್ದಾರೆ.

ಜಿ.ಪಂ ಅಧ್ಯಕ್ಷ ನರಸಿಂಹಪ್ಪ ಪ್ರತಿನಿಧಿಸಿದ್ದ ಬಾಗೇಪಲ್ಲಿ ತಾಲ್ಲೂಕಿನ ಗೂಳೂರು ಕ್ಷೇತ್ರ ಈ ಬಾರಿ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಕಳೆದ ಬಾರಿ ಇದು ಎಸ್‌ಟಿಗೆ ಮೀಸಲಾಗಿತ್ತು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್‌.ವಿ.ಮಂಜುನಾಥ್ ಪ್ರತಿನಿಧಿಸಿದ್ದ ಹೊಸೂರು ಕ್ಷೇತ್ರ ಈ ಬಾರಿ ಎಸ್‌ಟಿ ಮಹಿಳೆಗೆ ಮೀಸಲಾಗಿದೆ. ಕಳೆದ ಬಾರಿ ಈ ಕ್ಷೇತ್ರ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಜಿಲ್ಲಾ ಜೆಡಿಎಸ್ ಅಧ್ಯಕ್ಷರೂ ಆದ ಕೆ.ಎಂ.ಮುನೇಗೌಡ ಅವರು ಪ್ರತಿನಿಧಿಸಿದ್ದ ನಂದಿ ಕ್ಷೇತ್ರ ಈ ಬಾರಿ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಕಳೆದ ಬಾರಿ ಈ ಕ್ಷೇತ್ರ ಬಿಸಿಎಂ ಅ ವರ್ಗಕ್ಕೆ ಮೀಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.