ADVERTISEMENT

ಅಣ್ಣಾ ಶಿರೋನಾಮೆ-ಹೋರಾಟ ಭಿನ್ನಶೈಲಿ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2011, 9:35 IST
Last Updated 24 ಆಗಸ್ಟ್ 2011, 9:35 IST
ಅಣ್ಣಾ ಶಿರೋನಾಮೆ-ಹೋರಾಟ ಭಿನ್ನಶೈಲಿ
ಅಣ್ಣಾ ಶಿರೋನಾಮೆ-ಹೋರಾಟ ಭಿನ್ನಶೈಲಿ   

ತರೀಕೆರೆ: ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ನಡೆಸುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿ ಹಾಗೂ ಜನ ಲೋಕಪಾಲ ಮಸೂದೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯರು  ಮಂಗಳವಾರ ವಿನೂತನವಾಗಿ ಪ್ರತಿಭಟಿಸಿ ಪಟ್ಟಣದ ಜನತೆಯ ಗಮನ ಸೆಳೆದರು.

ವೇದಿಕೆಯ ಸದಸ್ಯರಾದ ದಯಾನಂದ ನಾಯಕ್, ಶಿವಕುಮಾರ್ ನಾಯಕ್, ಮಲ್ಲಿಕಾ ಮತ್ತು ಎಚ್.ವಾಸು ತಮ್ಮ ತಲೆಯನ್ನು ಬೋಳಿಸಿ, `ಅಣ್ಣಾ~ ಎಂದು ಕೆತ್ತಿಸಿಕೊಂಡು ಅಣ್ಣರ ಭಾವಚಿತ್ರದ ಬಳಿ ಗಂಟೆಗಳ ಕಾಲ ಕುಳಿತು ಪ್ರತಿಭಟಿಸಿದರು.

ಎಸ್‌ಜೆಎಂ ಕಾಲೇಜಿನ ಆವರಣದಲ್ಲಿ ಶ್ರೀಗಂಧದ ಸಸಿಯನ್ನು ನೆಟ್ಟು ಪ್ರತಿಭಟನೆಗೆ ಚಾಲನೆ ನೀಡಿದ ಶ್ರೀಗಂಧ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಎನ್.ವಿಶುಕುಮಾರ್ ಅಣ್ಣರನ್ನು ಹೋಲುವ ಉಡುಗೆ ತೊಟ್ಟು, ಗಾಂಧಿ ಟೋಪಿ ಧರಿಸಿ ಪ್ರತಿಭಟನೆಗೆ ಮೆರಗು ನೀಡಿದರು.

`ಭ್ರಷ್ಟಾಚಾರ~ ಸಾಕು, ಜನಲೋಕಪಾಲಬೇಕು~, `ಅಣ್ಣ ಹಜಾರೆ ಜಯವಾಗಲಿ, ತೊಲಗಲಿ ಭ್ರಷ್ಟಾಚಾರ, ಉಳಿಯಲಿ ಶಿಷ್ಟಾಚಾರ~ ಎಂದು ಘೋಷಣೆ ಕೂಗುತ್ತಾ ಸಾಗಿದ ಸದಸ್ಯರು ಪುರಸಭೆಯ ಕಚೇರಿಯ ಮುಂಭಾಗದಲ್ಲಿ ಕಟ್ಟಿದ್ದ ಜೇಡರ ಬಲೆಗಳನ್ನು ತೆಗೆದುಹಾಕಿ ಆವರಣವನ್ನು ಪೊರಕೆಯಿಂದ ಗೂಡಿಸಿ ಜನರ ಗಮನ ಸೆಳೆದರು.

ಮಹಾತ್ಮಾಗಾಂಧಿ ವೃತ್ತದ ಬಳಿ ಪ್ರತಿಭಟನಾ ಸಭೆ ನಡೆಸಿದ ಪ್ರತಿಭಟನಾಕಾರರು ಮಿನಿ ವಿಧಾನಸೌಧಕ್ಕೆ ತೆರಳಿ ಮನವಿ ಸಲ್ಲಿಸಿದರು.ಶ್ರೀಗಂಧ ರಕ್ಷಣಾವೇದಿಕೆಯ ಉಪಾಧ್ಯಕ್ಷ ಆನಂದ್, ನಿರ್ದೇಶಕರಾದ ಕಲ್ಲೇಶ್, ಮುದುಗುಂಡಿ ಲೋಹಿತ್, ಭಾವಿಕೆರೆ ವೆಂಕಟೇಶ್, ಚಂದ್ರಶೇಖರ್, ವಿಶ್ವನಾಥ್, ಕಿರಣ್, ಅರುಣ್, ಸುರೇಶ್ ಮತ್ತು ಆನಂದ್ ಮತ್ತು ರಘು ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.