ADVERTISEMENT

ಅಧಿಕಾರಿಗಳಿಗೆ ಗ್ರಾಮಸ್ಥರ ತರಾಟೆ

ಅಜ್ಜಂಪುರದ ಸೊಕ್ಕೆ ಗ್ರಾಮಸಭೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2013, 9:48 IST
Last Updated 4 ಜುಲೈ 2013, 9:48 IST

ಸೊಕ್ಕೆ (ಅಜ್ಜಂಪುರ): ಮೆಸ್ಕಾಂ ಹಾಗೂ ಅಮೃತಮಹಲ್ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಸೊಕ್ಕೆ ಗ್ರಾಮದಲ್ಲಿ ಬುಧವಾರ ನಡೆದ ಗ್ರಾಮಸಭೆಯಲ್ಲಿ ಗ್ರಾಮಸ್ಥರು ತೀವ್ರ ಅಸಮಾಧಾನ ಹೊರಹಾಕಿದರು.

ಸುಮಾರು ಎರಡು ವರ್ಷಗಳಿಂದ ಶಿಥಿಲಗೊಂಡಿರುವ ವಿದ್ಯುತ್ ಕಂಬ ಬದಲಿಸದ, ಕೆರೆ ಏರಿ ಮೇಲಿನ ವಿದ್ಯುತ್ ಕಂಬಗಳಲ್ಲಿ ನೇತಾಡುವ ಸ್ಥಿತಿಯಲ್ಲಿರುವ ಅಪಾಯಕಾರಿ ವಿದ್ಯುತ್‌ಲೈನ್ ಸರಿಪಡಿಸದ, ಕುಡಿಯುವ ನೀರಿನ ಕೊಳವೆಬಾವಿಗೆ ಪ್ರತ್ಯೇಕ ಟ್ರಾನ್ಸ್‌ಪಾರ್ಮರ್ ಅಳವಡಿಸದ ಹಾಗೂ ಸರಿಯಾಗಿ ಕರ್ತವ್ಯ ನಿರ್ವಹಿಸದ ಲೈನ್‌ಮೆನ್‌ನನ್ನು ವರ್ಗಾವಣೆ ಮಾಡದಿರುವ ಬಗ್ಗೆ ಗ್ರಾಮಸ್ಥರು ಮೆಸ್ಕಾಂ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

`ಅಮೃತ್ ಮಹಲ್ ಕಾವಲಿನ ಭೂಮಿಯಲ್ಲಿ ಅನುಪಯುಕ್ತ ಮುಳ್ಳುಗಿಡ ಗೆಂಟಿಗಳು ಬೆಳದಿದ್ದು, ಅಲ್ಲಿನ ರಾಸುಗಳು ಮೇವಿಗಾಗಿ ನಮ್ಮ ಕೃಷಿಭೂಮಿಗೆ ನುಗ್ಗಿ, ಬೆಳೆ ನಾಶಮಾಡುತ್ತಿವೆ. ನಿಮ್ಮ ರಾಸುಗಳನ್ನು ಮುಂದಿನ ದಿನಗಳಲ್ಲಿ ನಿಯಂತ್ರಣದಲ್ಲಿ ಇಡದಿದ್ದರೆ  ನಮ್ಮ ಪ್ರತಿಭಟನೆ ಎದುರಿಸಬೇಕಾದೀತು' ಎಂದು ರೈತರು ಅಧಿಕಾರಿಗೆ ಬಿಸಿ ಮುಟ್ಟಿಸಿದರು.

`ಸುಮಾರು ಆರೆಂಟು ತಿಂಗಳಿಂದ ಸರಿಯಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಈ ಬಗ್ಗೆ ಗ್ರಾ.ಪಂ.ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ, ಈಗಾದರೆ ನಾವೇಕೆ ನೀರಿನ ಕಂದಾಯ ಪಾವತಿಸಬೇಕು? ಕೂಡಲೇ ವಾಟರ್‌ಮೆನ್‌ಗೆ ಸಮರ್ಪಕ ನೀರು ಪೂರೈಸಲು ನಿರ್ದೇಶನ ನೀಡಿ' ಎಂದು ಗ್ರಾಮಸ್ಥ ಮಹೇಶ್ ಆಗ್ರಹಿಸಿದರು. ಗ್ರಾಮದ ನ್ಯಾಯಬೆಲೆ ಅಂಗಡಿಯವರು ಕೇವಲ ಮೂರುದಿನಗಳು ಮಾತ್ರ ಪಡಿತರ ವಿತರಿಸುತ್ತಿದ್ದು, ಎಲ್ಲರೂ ಪಡಿತರ ಕೊಳ್ಳಲು ಸಹಾಯವಾಗುವಂತೆ ವಿತರಣೆ ಸಮಯವನ್ನು ವಿಸ್ತರಿಸುವಂತೆ ತಾಕೀತು ಮಾಡಲು ಅಧಿಕಾರಿಗಳಿಗೆ ಮನವಿ ಮಾಡಿದರು.

ತೋಟಗಾರಿಕೆ ಇಲಾಖೆಯ ಕರಿಬಸವನಾಯ್ಕ ಕೃಷಿ ಉತ್ತೇಜಿಸಲು ಸರ್ಕಾರ ನೀಡುವ ಸಹಾಯಧನ ಹಾಗೂ ತೋಟಗಾರಿಗೆ ಬೆಳೆಗೆ ತಗುಲುವ ರೋಗ ಹಾಗೂ ಪರಿಹಾರ ಕ್ರಮಗಳನ್ನು ವಿಸ್ತರವಾಗಿ ತಿಳಿಸಿ, ರೈತರ ಮೆಚ್ಚುಗೆ ಗಳಿಸಿದರು. ಆರೋಗ್ಯ ಇಲಾಖೆಯ ನಾರಾಯಣಸ್ವಾಮಿ, ಪೊಲೀಸ್ ಇಲಾಖೆಯ ಗೌಡ್ರು, ಅರಣ್ಯ,ಅಂಗನವಾಡಿ, ಶಿಕ್ಷಣ ಹಾಗೂ ಇತರ ಇಲಾಖೆಯವರು ಹಾಜರಿದ್ದರು.

ತಾ.ಪಂ. ಸಹಾಯಕ ನಿರ್ದೇಶಕ ಗಂಗಾಧರ ಮೂರ್ತಿ, ಕೂಡಲೇ ಗ್ರಾಮಸ್ಥರ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಹಾಗೂ ಲೈನ್‌ಮೆನ್ ಬದಲಿಸಬೇಕೆಂದು ಮೆಸ್ಕಾಂ ಅಧಿಕಾರಿ ಧನರಾಜ್‌ಗೆ ಸೂಚಿಸಿದರು. ಅರಣ್ಯ ಇಲಾಖೆಯವರು ಕೃಷಿಕರಿಗೆ 500 ಸಾಗುವಾನಿ ಹಾಗೂ 2500 ಸಿಲ್ವರ್‌ಗಿಡ ವಿತರಿಸಲು ಕ್ರಮಕೈಗೊಳ್ಳಬೇಕು. ಸರಿಯಾಗಿ ಕರ್ತವ್ಯ ನಿರ್ವಹಿಸದ ವಾಟರ್‌ಮೆನ್‌ಗೆ ನೋಟಿಸ್ ನೀಡಿ ಎಂದು ಪಿಡಿಒಗೆ ಸೂಚಿಸಿದರು. ಶಾಲಾ ಆಸುಪಾಸಿನಲ್ಲಿರುವ ತಿಪ್ಪೆ ತೆರವುಗೊಳಿಸಿ ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು.

ತಾ.ಪಂ.ಸದಸ್ಯ ರಾಜ್‌ಕುಮಾರ್ ಆರೋಗ್ಯ, ಕೃಷಿ, ಅಂಗನವಾಡಿ ಇಲಾಖೆಯಿಂದ ಜನಸಾಮಾನ್ಯರಿಗೆ ದೊರಕಬಹುದಾದ ಸರ್ಕಾರದ ಸೌಲಭ್ಯಗಳ ಪಟ್ಟಿ ತಯಾರಿಸಿ ಗ್ರಾಮ ಪಂಚಾಯಿತಿಯ ಸೂಚನಾಫಲಕದಲ್ಲಿ ಹಾಕುವಂತೆ ತಿಳಿಸಿದರು. ಅಲ್ಲದೇ ಅಂಗನವಾಡಿ ಹಾಗೂ ಶಾಲಾ ದುರಸ್ತಿಗೆ ತಮ್ಮ ಅನುದಾನದಲ್ಲಿ ಹಣ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು.

ನೋಡಲ್ ಅಧಿಕಾರಿ ಕೆ.ಸಿ.ಜ್ಯೋತಿ, ಪಿಡಿಒ ಎನ್.ಕೆ.ಪವಿತ್ರಾ, ಗ್ರಾ.ಪಂ.ಉಪಾಧ್ಯಕ್ಷೆ ಚಿಕ್ಕಮ್ಮ, ಸದಸ್ಯ ಈಶ್ವರಪ್ಪ, ಜಯದೇವಪ್ಪ, ಹನುಮಂತಪ್ಪ, ತೀರ್ಥ, ಸರೋಜಮ್ಮ, ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.