ADVERTISEMENT

ಅಭಿವೃದ್ಧಿಗೆ ಶ್ರಮಿಸುವ ಅಭ್ಯರ್ಥಿ ಆಯ್ಕೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2018, 9:19 IST
Last Updated 28 ಫೆಬ್ರುವರಿ 2018, 9:19 IST
ಮುಖ್ಯಮಂತ್ರಿ ಚಂದ್ರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು. ಮುಖಂಡರಾದ ಬಿ.ಎಲ್. ಶಂಕರ್, ಡಾ.ಡಿ.ಎಲ್.ವಿಜಯಕುಮಾರ್, ಗಾಯತ್ರಿ ಶಾಂತೇಗೌಡ ಇದ್ದಾರೆ.
ಮುಖ್ಯಮಂತ್ರಿ ಚಂದ್ರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು. ಮುಖಂಡರಾದ ಬಿ.ಎಲ್. ಶಂಕರ್, ಡಾ.ಡಿ.ಎಲ್.ವಿಜಯಕುಮಾರ್, ಗಾಯತ್ರಿ ಶಾಂತೇಗೌಡ ಇದ್ದಾರೆ.   

ಚಿಕ್ಕಮಗಳೂರು: ಕ್ಷೇತ್ರಕ್ಕೆ ಉತ್ತಮ ಹಣೆ ಬರಹ ಬರೆಯಬಲ್ಲ ಅಭ್ಯರ್ಥಿಯನ್ನು ಜನರು ಆಯ್ಕೆ ಮಾಡಬೇಕು ಎಂದು ನಟ ಮುಖ್ಯಮಂತ್ರಿ ಚಂದ್ರು ಸಲಹೆ ನೀಡಿದರು. ಕಡೂರು ತಾಲ್ಲೂಕಿನ ದೇವನೂರಿನಲ್ಲಿ ಈಚೆಗೆ ಏರ್ಪಡಿಸಿದ್ದ ‘ನಮ್ಮ ಕ್ಷೇತ್ರ ನಮ್ಮ ಹೊಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ದಶಕದಿಂದ ಕುಡಿಯುವ ನೀರಿನ ಸಮಸ್ಯೆ ಇದೆ. ಸಮಸ್ಯೆ ಬಗೆಹರಿಸಲು ಇಲ್ಲಿನ ಶಾಸಕರು ನಿರ್ಲಕ್ಷ ತೋರಿದ್ದಾರೆ. ಜನರ ಸಮಸ್ಯೆ ಬಗೆಹರಿಸಲು ಮುಂದಾಗುವ ಅಭ್ಯರ್ಥಿಯನ್ನು ಈ ಬಾರಿ ಚುನಾವಣೆಯಲ್ಲಿ ಜನರು ಚುನಾಯಿಸಬೇಕು ಎಂದರು.

ರಾಜಕಾರಣಿಗಳು ಕೆಟ್ಟ ಮಾತು ಮತ್ತು ವರ್ತನೆಯಿಂದ ಇಡೀ ರಾಜಕೀಯವನ್ನು ಜನರು ಶಪಿಸುವಂತಾಗಿದೆ. ಸಂಸ್ಕೃತಿ ಹೀನ ರಾಜಕಾರಣಿಗಳನ್ನು ಜನರು ಪ್ರೋತ್ಸಾಹಿಸಬಾರದು ಎಂದರು.

ADVERTISEMENT

ಕಾಂಗ್ರೆಸ್ ಮುಖಂಡ ಬಿ.ಎಲ್.ಶಂಕರ್ ಮಾತನಾಡಿ, ಜಿಲ್ಲೆಯಲ್ಲಿ ಹುಟ್ಟಿ ಹೊರ ಜಿಲ್ಲೆ ಜನರಿಗೆ ಅನುಕೂಲವಾಗುತ್ತಿರುವ ನದಿ ನೀರನ್ನು ಜಿಲ್ಲೆಯ ಬಯಲುಸೀಮೆ ಭಾಗಕ್ಕೆ ತರಲು ಜಿಲ್ಲೆಯ ಬಿಜೆಪಿ ಶಾಸಕರು ವಿಫಲರಾಗಿದ್ದಾರೆ.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಗಾಯತ್ರಿ ಶಾಂತೇಗೌಡ ಮಾತನಾಡಿ, ‘ಶಾಸಕ ಸಿ.ಟಿ ರವಿ ಅವರು ಕ್ಷೇತ್ರದ ಅಭಿವೃದ್ಧಿಗಿಂತ ತಮ್ಮ ಅಭಿವೃದ್ಧಿಯೇ ಮುಖ್ಯ ಎಂಬುವಂತೆ ವರ್ತಿಸಿದ್ದಾರೆ. ಅವರ ನಿರ್ಲಕ್ಷ್ಯದಿಂದಾಗಿ ಈ ಭಾಗ ಅಭಿವೃದ್ಧಿ ಆಗಿಲ್ಲ’ ಎಂದು ಆರೋಪಿಸಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಡಿ.ಎಲ್.ವಿಜಯಕುಮಾರ್ ಮಾತ ನಾಡಿ, ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಿದ ಎಲ್ಲ ಭರವಸೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಈಡೇರಿಸಿದ್ದಾರೆ. ರೈತರ ಸಾಲಮನ್ನಾ ಮಾಡಿ ರೈತ ಪರ ಸರ್ಕಾರ ಎನ್ನುವುದನ್ನು ಸಾಬೀತು ಮಾಡಿದ್ದಾರೆ ಎಂದರು.

ದೇವನೂರು ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಬಸವರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಡಿ ಮನೆ ಸತೀಶ್, ಮುಖಡರಾದ ರೇಣುಕಮೂರ್ತಿ, ರವೀಶ್ ಬಸಪ್ಪ, ಕೆ.ಎಸ್ ಶಾಂತೇಗೌಡ, ಬಿ.ಎಂ.ಸಂದೀಪ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.