
ಚಿಕ್ಕಮಗಳೂರು: ಉಡುಪಿ-ಚಿಕ್ಕಮಗಳೂರು ಲೋಕ ಸಭೆ ಉಪ ಚುನಾವಣೆಯನ್ನು ಪಕ್ಷ ಸವಾಲಾಗಿ ಸ್ವೀಕರಿಸಿದೆ ಎಂದು ಗೃಹ ಸಚಿವ ಆರ್.ಅಶೋಕ್ ತಿಳಿಸಿದರು.
ನಗರದಲ್ಲಿ ಶುಕ್ರವಾರ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸಿದ ನಂತರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಈ ಉಪ ಚುನಾವಣೆಯನ್ನು ಡಿ.ವಿ.ಸದಾನಂದಗೌಡ ,ಕೆ.ಎಸ್.ಈಶ್ವರಪ್ಪ, ಬಿ.ಎಸ್.ಯಡಿಯೂರಪ್ಪ ಸವಾಲಾಗಿ ತೆಗೆದುಕೊಂಡಿದ್ದಾರೆ. ಪಕ್ಷ ಪ್ರಚಾರ ಮತ್ತು ಸಂಘಟನೆಯಲ್ಲಿ ಎದುರಾಳಿಗಳಿಗಿಂತ ಮುಂದಿದೆ ಎಂದು ಹೇಳಿದರು.
ಮೂರ‌್ನಾಲ್ಕು ತಾಲ್ಲೂಕುಗಳನ್ನು ಹೊರತುಪಡಿಸಿದರೆ ಉಳಿದೆಡೆ ಜೆಡಿಎಸ್ ಅಭ್ಯರ್ಥಿಯ ಹೆಸರೇ ಮತದಾರರಿಗೆ ಗೊತ್ತಿಲ್ಲ. ಕೇಂದ್ರದಲ್ಲಿ ಆಡಳಿತ ಪಕ್ಷದ ಕಡೆ ಅಥವಾ ವಿರೋಧ ಪಕ್ಷದ ಕಡೆಯೂ ಇರದ ಪ್ರಾದೇಶಿಕ ಪಕ್ಷ ಜೆಡಿಎಸ್ ಕೇಂದ್ರಕ್ಕೆ ಹೋಗಿ ಮಾಡು ವಂತಹುದು ಏನು ಇಲ್ಲ. ಇನ್ನು ಮೊನ್ನೆವರೆಗೂ ಕಾಂಗ್ರೆಸ್ ಚುರುಕಾಗಿತ್ತು.
ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶದ ನಂತರ ಹುಮ್ಮಸ್ಸು ಕಳೆದುಕೊಂಡಿದೆ. ಕಾಂಗ್ರೆಸ್‌ಗೆ ಕ್ಷೇತ್ರದಲ್ಲಿ ಕಾರ್ಯಕರ್ತರ ಕೊರತೆ ಇದೆ. ನಮ್ಮ ಪಕ್ಷಕ್ಕೆ ತಳಮಟ್ಟದಲ್ಲಿ ಕಾರ್ಯಕರ್ತರಿದ್ದು, 15 ವರ್ಷ ಕಾಲ ಸಾಮಾನ್ಯ ಕಾರ್ಯಕರ್ತರಾಗಿ ದುಡಿದಿರುವ ಅಭ್ಯರ್ಥಿ ಗೆಲುವಿಗೆ ಇದು ಸಹಕಾರಿಯಾಗಲಿದೆ.
ನಮ್ಮ ಅಭ್ಯರ್ಥಿ ಸುನೀಲ್‌ಕುಮಾರ್ ಅತ್ಯಂತ ಚುರುಕಿನ ಮತ್ತು `ಎ~ ದರ್ಜೆಯ ಅಭ್ಯರ್ಥಿ. ಕ್ಷೇತ್ರದಲ್ಲಿ ನಡೆದ ಹಲವು ಹೋರಾಟಗಳಲ್ಲಿ ಪಾಲ್ಗೊಂಡಿದ್ದಾರೆ. ನಮ್ಮ ಗೆಲುವು ನಿಸ್ಸಂಶಯ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದ ರಾಜ್ಯ ಪ್ರಧಾನಕಾರ್ಯದರ್ಶಿ ಸಿ.ಟಿ.ರವಿ, ನಗರಸಭೆ ಅಧ್ಯಕ್ಷ ಪ್ರೇಂಕುಮಾರ್, ಮುಖಂಡರಾದ ವರಸಿದ್ದಿ ವೇಣುಗೋಪಾಲ್, ಬಿ.ರಾಜಪ್ಪ, ಬೆಳ್ಳಿ ಪ್ರಕಾಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.