ADVERTISEMENT

ಉತ್ತಮ ಮಳೆ; ಧರೆಗುರುಳಿದ ಮರ

ಎಲ್ಲೆಡೆ ಮಳೆಯ ಅಬ್ಬರ, ಕೆಲವೆಡೆ ಹಾನಿ

​ಪ್ರಜಾವಾಣಿ ವಾರ್ತೆ
Published 12 ಜೂನ್ 2018, 11:11 IST
Last Updated 12 ಜೂನ್ 2018, 11:11 IST

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕುಗೊಂಡಿದೆ. ನಗರ ಮತ್ತು ತಾಲ್ಲೂಕಿನ ವಿವಿಧೆಡೆ ಸೋಮವಾರ ಹದ ಮಳೆ ಸುರಿಯಿತು.

ನಗರದಲ್ಲಿ ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣ ಇತ್ತು. ಮಧ್ಯಾಹ್ನದ ವೇಳೆಗೆ ಜಿಟಿಜಟಿ ಮಳೆ ಶುರುವಾಯಿತು. ಸಂಜೆ ಹೊತ್ತಿಗೆ ಮಳೆ ಬಿರುಸುಗೊಂಡಿತು. ಮಳೆಯ ರಭಸಕ್ಕೆ ರಸ್ತೆ ಬದಿಯ ಮರಗಳ ರೆಂಬೆಕೊಂಬೆಗಳು ಕೆಲವೆಡೆ ಮುರಿದು ಬಿದ್ದಿವೆ.

ಮಧ್ಯಾಹ್ನದಿಂದ ರಾತ್ರಿವರೆಗೂ ಮಳೆ ಆಗಾಗ್ಗೆ ಬಿಡುವು ನೀಡಿ ಸುರಿಯಿತು. ಕೆಲವೊಮ್ಮ ರಭಸವಾಗಿ ಸುರಿಯಿತು. ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಮುಂದಿನ ರಸ್ತೆಯಲ್ಲಿ ನೀರು ತುಂಬಿತ್ತು.

ADVERTISEMENT

ಮೈಲಿಮನೆ ಗ್ರಾಮದ ವೃತ್ತದ ಬಳಿಯ ಮರವೊಂದು ರಸ್ತೆಗೆ ಉರುಳಿದೆ. ಇದರಿಂದಾಗಿ ಮೈಲಿಮನೆ– ಆಣೂರು ಮಾರ್ಗದಲ್ಲಿ ವಾಹನ ಸಂಚಾರಕ್ಕೆ ತೊಡಕು ಉಂಟಾಯಿತು. ಅರಣ್ಯ ಸಿಬ್ಬಂದಿ ಮರ ತೆರವು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಮಳೆ ನಿಮಿತ್ತ ಮಲೆನಾಡು ಭಾಗದ ಮೂಡಿಗೆರೆ, ಕೊಪ್ಪ, ನರಸಿಂಹರಾಜಪುರ ಮತ್ತು ಶೃಂಗೇರಿ ತಾಲ್ಲೂಕುಗಳಲ್ಲಿ ಶಾಲಾ ಕಾಲೇಜುಗಳಿಗೆ ಸೋಮವಾರ ರಜೆ ನೀಡಲಾಗಿತ್ತು. ಮುಂಜಾಗ್ರತೆಯಾಗಿ ಮಂಗಳವಾರವೂ ಶಾಲಾ ಕಾಲೇಜುಗಳಿಗೆ ರಜೆಯನ್ನು ಘೊಷಿಸಲಾಗಿದೆ.

ತಾಲ್ಲೂಕುವಾರು ಚಿಕ್ಕಮಗ ಳೂರಿನಲ್ಲಿ ಸರಾಸರಿ 25.8 ಮಿ.ಮೀ, ಕಡೂರು ತಾಲ್ಲೂಕಿನಲ್ಲಿ 11.3 ಮಿ.ಮೀ, ಕೊಪ್ಪ ತಾಲ್ಲೂಕಿನಲ್ಲಿ 92.6, ಮೂಡಿ ಗೆರೆ ತಾಲ್ಲೂಕಿನಲ್ಲಿ 104.8 ಮಿ.ಮೀ, ನರಸಿಂಹರಾಜಪುರದಲ್ಲಿ 40.5, ಶೃಂಗೇರಿಯಲ್ಲಿ 137.5 ಮಿ.ಮೀ ಹಾಗೂ ತರೀಕೆರೆ ತಾಲ್ಲೂಕಿನಲ್ಲಿ 29.3 ಮಿ.ಮೀ ಮಳೆಯಾಗಿದೆ.

ನದಿ, ಜಲಪಾತ, ಕೆರೆ–ಹಳ್ಳಗಳು ಮೈದುಂಬಿಕೊಡಿವೆ. ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿವೆ.

ಶಾಲೆಗಳಿಗೆ ರಜೆ ಘೋಷಣೆ

ಜಿಲ್ಲೆಯ ಮಲೆನಾಡಿನ ಶೃಂಗೇರಿ, ಕೊಪ್ಪ, ಮೂಡಿಗೆರೆ ಮತ್ತು ಎನ್‌.ಆರ್‌.ಪುರ ಶಾಲಾಕಾಲೇಜುಗಳಿಗೆ ಮಂಗಳವಾರ ರಜೆ ಘೋಷಿಸಲಾಗಿದೆ. ಮಳೆ ಹೆಚ್ಚಾಗಿರುವುದರಿಂದ ಈ ಕ್ರಮ ವಹಿಸಲಾಗಿದೆ. ತರೀಕೆರೆ, ಅಜ್ಜಂಪುರ, ಕಡೂರು, ಚಿಕ್ಕಮಗಳೂರು ತಾಲ್ಲೂಕುಗಳಲ್ಲಿ ಶಾಲಾಕಾಲೇಜುಗಳಿಗೆ ರಜೆ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.