ಚಿಕ್ಕಮಗಳೂರು: ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿಗೆ ಅತಿಶೀಘ್ರ ಸ್ಥಳನೀಡಿ 2013ನೇ ಸಾಲಿನಿಂದಲೇ ಪ್ರವೇಶ ಕಲ್ಪಿಸಲಾಗುವುದು ಎಂದು ಉನ್ನತಶಿಕ್ಷಣ ಸಚಿವ ಸಿ.ಟಿ.ರವಿ ತಿಳಿಸಿದರು.
ಗೌರಿಕಾಲುವೆಯಲ್ಲಿ ನಿರ್ಮಿಸಿರುವ ಜಯಪ್ರಕಾಶ್ ನಾರಾಯಣ ಪಾರ್ಕ್ ಅನ್ನು ಸೋಮವಾರ ಉದ್ಘಾಟಿಸಿ, ಸ್ಥಳೀಯ ನಿವೇಶನ ರಹಿತರಿಗೆ ಸ್ವಾಧೀನ ಪತ್ರ ವಿತರಿಸಿ ಮಾತನಾಡಿದರು.
ಗೌರಿಕಾಲುವೆಯ 20ನೆಯ ವಾರ್ಡ್ ಒಂದರಲ್ಲೆ 5.8ಕೋಟಿ ರೂಪಾಯಿಗಳ ಅಭಿ ವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಇದುವರೆಗೆ ಗೌರಿಕಾಲುವೆಯ 120ಜನರಿಗೆ ಆಶ್ರಯಮನೆ ನೀಡಲಾಗಿದೆ. ಉಳಿದ 60 ಜನರಿಗೂ ಸೌಲಭ್ಯ ದೊರಕಿಸಿಕೊಡಲಾಗುವುದು ಎಂದರು.
ನಗರವ್ಯಾಪ್ತಿಯಲ್ಲಿ 165 ಕಿ.ಮೀ.ರಸ್ತೆ ಇದೆ. ಇವೆಲ್ಲವನ್ನೂ ಅಭಿವೃದ್ಧಿಪಡಿಸಲು ಮಂಜೂರಾತಿ ಪಡೆಯಲಾಗಿದೆ. ಯುಜಿಡಿ ಕಾಮಗಾರಿ ಪೂರ್ಣ ಗೊಂಡ ನಂತರ ನಾಲ್ಕು ತಿಂಗಳಲ್ಲಿ ನಗರದ ಚಿತ್ರಣವೇ ಬದಲಾಗುವುದು ಎಂದು ಹೇಳಿದರು.
ಸುಮಾರು 186 ಕೋಟಿ ರೂಪಾಯಿಗಳ ವಿವಿಧ ಕಾಮಗಾರಿ ಗಳನ್ನು ಮಂಜೂರು ಮಾಡಿಸಲಾಗಿದೆ. ಮೇ ಅಂತ್ಯದ ವೇಳೆಗೆ ಶೇ.80ರಷ್ಟು ರಸ್ತೆ ಕಾಮಗಾರಿ, ಮಾರ್ಚ್ ಅಂತ್ಯದೊಳಗೆ ಯುಜಿಡಿ ಪೂರ್ಣಗೊಳಿಸುವುದಾಗಿ ಗುತ್ತಿಗೆದಾರರು ಭರವಸೆ ನೀಡಿದ್ದಾರೆ ಎಂದರು.
ಪಾರ್ಕ್ ಉಳಿಸಿಕೊಳ್ಳಲು ಕಾನೂನುಸಮರಕ್ಕೆ ಸಹಕರಿಸಿದ್ದಕಾಗಿ ಸ್ಥಳೀಯರು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಹಿರಿಯವಕೀಲ ಟಿ.ಎಸ್.ಉತ್ತಯ್ಯ, ಜೆ.ಪಿ.ಪಾರ್ಕ್ ಉದ್ಘಾಟನೆಯಲ್ಲಿ ಪಾಲ್ಗೊಂಡಿರುವುದು ಹರ್ಷತಂದಿದೆ ಎಂದು ತಿಳಿಸಿದರು. ನಗರಸಭಾ ಸದಸ್ಯೆ ಕೆ.ಆರ್.ಲೀಲಾ ಮಾತನಾಡಿ, ವಾರ್ಡ್‌ನಲ್ಲಿ 208 ಲಕ್ಷರೂಪಾಯಿ ಅಭಿವೃದ್ಧಿ ಕಾಮಗಾರಿ ನಡೆದಿವೆ. 105ಲಕ್ಷ ವೆಚ್ಚದ ಡಾಂಬರೀಕರಣ ಮಂಜೂರಾಗಿದೆ ಎಂದು ಹೇಳಿದರು.
ನಗರಸಭಾಧ್ಯಕ್ಷ ಸಿ.ಆರ್.ಪ್ರೇಮ್‌ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಪಾರ್ಕ್ ಅನ್ನು ಮಾದರಿಯಾಗಿ ಅಭಿವೃದ್ಧಿಪಡಿಸಲಾಗುವುದು. ಈಗಾಗಲೇ ವಾಕಿಂಗ್‌ಪಾತ್ ನಿರ್ಮಾಣಗೊಂಡಿದೆ. ಗಿಡಗಳನ್ನು ನೆಡಲಾಗಿದೆ. ಮಕ್ಕಳ ಆಟಿಕೆಗಳನ್ನು ಅಳವಡಿಸಲಾಗುವುದೆಂದು ಭರವಸೆ ನೀಡಿದರು.
ನಗರಸಭಾ ಉಪಾಧ್ಯಕ್ಷೆ ಲಕ್ಷ್ಮಮ್ಮ, ಮಾಜಿ ಅಧ್ಯಕ್ಷರಾದ ಎಚ್.ಡಿ.ತಮ್ಮಯ್ಯ, ಶ್ರೀನಿವಾಸ್, ಸದಸ್ಯರಾದ ಮಂಜುನಾಥ, ಕಸ್ತೂರಿ ಪವಾರ್, ಮುತ್ತಯ್ಯ, ಪಾರ್ಕ್‌ಸಮಿತಿ ಅಧ್ಯಕ್ಷ ಮುನಾವರ್‌ಖಾನ್, ಸಿಡಿಎ ಅಧ್ಯಕ್ಷ ರಾಜಪ್ಪ ವೇದಿಕೆಯಲ್ಲಿ ದ್ದರು. ಪಾರ್ಕ್ ಸಮಿತಿ ಕಾರ‌್ಯದರ್ಶಿ ರಾಬರ್ಟ್, ಉಮಾ ಪ್ರೇಮಕುಮಾರ್, ಪ್ರೇಮ ಲತಾ, ಉಪಾಧ್ಯಕ್ಷ ಶ್ರಿಕಾಂತ, ಸಹಕಾರ್ಯದರ್ಶಿ ವೆಂಕಟೇಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.