ADVERTISEMENT

ಐಟಿ-ಬಿಟಿ ಸಂಸ್ಕೃತಿ ಮಾತೃಭಾಷೆಗೆ ಅಡ್ಡಿ: ಚಂದ್ರು ಕಳವಳ

​ಪ್ರಜಾವಾಣಿ ವಾರ್ತೆ
Published 29 ಜನವರಿ 2011, 12:45 IST
Last Updated 29 ಜನವರಿ 2011, 12:45 IST
ಐಟಿ-ಬಿಟಿ ಸಂಸ್ಕೃತಿ ಮಾತೃಭಾಷೆಗೆ ಅಡ್ಡಿ: ಚಂದ್ರು ಕಳವಳ
ಐಟಿ-ಬಿಟಿ ಸಂಸ್ಕೃತಿ ಮಾತೃಭಾಷೆಗೆ ಅಡ್ಡಿ: ಚಂದ್ರು ಕಳವಳ   

ಮೂಡಿಗೆರೆ:  ಬೆಂಗಳೂರಿನಲ್ಲಿ ಐಟಿಬಿಟಿ ಸಂಸ್ಕೃತಿ ಹೆಚ್ಚಾಗುತ್ತಿದ್ದು, ರಾಜ್ಯದಲ್ಲಿ ಮಾತೃಭಾಷೆಯ ಬೆಳವಣಿಗೆಗೆ ಅಡ್ಡಿ ಯಾಗಿದ್ದು ಕನ್ನಡಿಗರು ಭಾಷೆ ಉಳಿಸಲು ಸಂಘಟಿತ ಪ್ರಯತ್ನ ಅಗತ್ಯ ಎಂದು ರಾಜ್ಯ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು. ಇಲ್ಲಿನ ಅಡ್ಯಂತಾಯ ರಂಗ ಮಂದಿ ರದ ಕೆ.ಪಿ.ಪೂರ್ಣಚಂದ್ರತೇಜಸ್ವಿ ವೇದಿಕೆ ಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ವತಿ ಶುಕ್ರವಾರ ಆಯೋಜಿಸಿದ್ದ  ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಹಂಚಿಹೋಗಿರುವ ಕನ್ನಡ ನಾಡಿನಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಲಾಗುತ್ತಿದೆ. ಇದ್ದಕ್ಕೆ ನಮ್ಮ ಜನಪ್ರತಿನಿಧಿಗಳು ಮತ್ತು ಸರ್ಕಾರದ ಸಹಕಾರ ಅಗತ್ಯ ಎಂದರು. ಕರ್ನಾಟಕದಲ್ಲಿ ವಾಸಿಸುವ ಎಲ್ಲ ಕನ್ನಡಿಗರು ಕನ್ನಡ ಭಾಷೆ ಕಲಿತು ಜೀವನ ನಡೆಸುವುದು ಹಾಗೂ ಇಲ್ಲಿನ ನೆಲಜಲ ಸಂಸ್ಕೃತಿ ಗೌರವಿಸುವ ಕಾರ್ಯಮಾಡುವಂತೆ ಅನ್ಯಭಾಷಿಕರಲ್ಲಿ ಮನವಿ ಮಾಡಿ ಕನ್ನಡಿಗರು ಸ್ವಾಭಿಮಾನ ಕನ್ನಡಿಗರಾಗುವಂತೆ ಕಿವಿಮಾತು ಹೇಳಿದರು. ಕಾಂಗ್ರೆಸ್ ಮುಖಂಡ ಡಾ,ಬಿ.ಎಲ್. ಶಂಕರ್ ಮಾತನಾಡಿ, ವಿಶ್ವದಲ್ಲಿ ಜಾಗತೀಕರಣ, ಉದಾರಿಕರಣ ಮತ್ತು ಖಾಸಗಿಕರಣದ ಪ್ರಭಾವ ಉದ್ಯೋಗ ಕ್ಕಾಗಿ ಭಾಷೆಯ ಅಳವಡಿಕೆಯಿಂದ, ಸ್ಥಳಿಯ ಭಾಷೆಗಳ ಮೇಲೆ ಪರಿಣಾಮ ಉಂಟಾಗುತ್ತಿದೆ ಎಂದರು.ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕಿ ಮೋಟಮ್ಮ ಮಾತನಾಡಿ ಕನ್ನಡ ಭಾಷೆ ಬಳಸಿದರೆ ಉಳಿಯುತ್ತದೆ ಎಂದರು.

ಶಾಸಕ ಎಂ.ಪಿ.ಕುಮಾರಸ್ವಾಮಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು, ಸಂಸದ ಡಿ.ವಿ.ಸದಾನಂದಗೌಡ, ಕೇಂದ್ರದ ಮಾಜಿ ಸಚಿವೆ ತಾರಾದೇವಿ, ಚಿತ್ರನಟ ಕಿರಣ್ ಶ್ರೀನಿವಾಸ್, ಡಿ.ಕೆ.ಉದಯ ಶಂಕರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಮ್ಮೇಳನಾಧ್ಯಕ್ಷ ಡಾ.ಸುಮತಿಂದ್ರ ನಾಡಿಗ್,ಮಾಲತಿ ನಾಡಿಗ್,ಎಂ.ಕೆ.ಪ್ರಾಣೇಶ್,ಜಿಲ್ಲಾ ಕಸಾಪ ಅಧ್ಯಕ್ಷ ಚಂದ್ರಪ್ಪ,ತಾಲ್ಲೂಕು ಅಧ್ಯಕ್ಷ ರಾಧಾಕೃಷ್ಣ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಹಳಸೆಶಿವಣ್ಣ, ಕುಂದೂರು ಅಶೋಕ್, ಹಳೇಕೋಟೆ ರಮೇಶ್, ಧರ್ಮಪಾಲ್, ಕೋರ್ಮಾಕ್ ಅಧ್ಯಕ್ಷ ಸುಬ್ಬೇಗೌಡ, ಮೈಸೂರು ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಗೌಡಹಳ್ಳಿ ಪ್ರಸನ್ನ,ರಮೇಶ್ ಇದ್ದರು.

11ಪುಸ್ತಕ ಬಿಡುಗಡೆ
ಸಮ್ಮೇಳನದಲ್ಲಿ  ತಾಲ್ಲೂಕಿನ 11 ಲೇಖಕರ 11ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು. ಹಳೇಕೋಟೆ ರಮೇಶ್ ರವರ ಬಂಗಾರದ ಮನುಷ್ಯ, ಸುಂದರ್ ಬಂಗೇರಾ ಅವರ ಶೂದ್ರ-ರುದ್ರ, ಹಾ.ಬಾ.ನಾಗೇಶ್ ಅವರ ವಚನ ದನಿ, ಮನುಶ್ರೀ ಕುಮಾರ್ ಅವರ ಲಾಸ್ಯ, ಎಂ.ಎಸ್.ನಾಗರಾಜು ಅವರ ಹೊಂಗಿರಣ, ಸನ್ಮತಿ ಹಾರ್ಮಕ್ಕಿ ಅವರ ಜೋಗುಳ, ಕು.ಸುಶ್ರವ್ಯ ಜೀವಾಳ ಅವರ ಯಾರೋ ಬಿತ್ತಿದ ಬೀಜ, ವಿಶ್ವ ಹಾರ್ಲಗದ್ದೆ ಅವರ ಗಿರಿನವಿಲು, ಕೆ.ವಿನಾಯಕ್ ರಾಜ್ ಅವರರ ಕಡ ಲಾಳದ ಕನ್ನಡ ಮುತ್ತು, ಮೇಕನ ಗದ್ದೆ ಲಕ್ಷ್ಮಣ್‌ಗೌಡ  ಅವರ ಹೊಸ ಶಾಸನ ಗಳು. ಕಳಸದ ದಿವಂಗತ ಮೃತ್ಯುಂಜಯ ಅವರ ದೇವರನಾಮ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.

‘ಭಾಷೆ ಅಭಿಮಾನ ಅಗತ್ಯ’
ಮಾತೃಭಾಷೆ ಪ್ರೀತಿಸಿ ಗೌರವಿಸಿ ಬಳಸಿದರೆ ಭಾಷೆ ಉಳಿಯುತ್ತದೆ. ಕನ್ನಡ ಬಳಕೆ ಮಾಡಿದಾಗ ಮಾತ್ರ ಕನ್ನಡ ಉಳಿಯಲು ಸಾಧ್ಯ ಎಂದು ಸಾಹಿತಿ ಡಾ.ಸುಮತಿಂದ್ರ ನಾಡಿಗ್ ಹೇಳಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ  ಅಧ್ಯಕ್ಷ ಭಾಷಣ ಮಾಡಿದರು. ಕನ್ನಡ ಇಂದು ನಗರ ಪ್ರದೇಶಕ್ಕಿಂತ ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚಾಗಿ ಉಳಿದು ಬೆಳೆದಿದೆ. ನಗರದ ಯಾಂತ್ರಿಕತೆಗಿಂತ ಹಳ್ಳಿ ಜನರ ಪ್ರೀತಿ ಹಾಗೂ ಪ್ರಕೃತಿ ಪ್ರೇಮದಿಂದ ಭಾಷೆ ಉಳಿಯಲು ಸಾಧ್ಯವಾಗಿದೆ ಎಂದರು. ಕಾರ್ಯಕ್ರಮದ ಮುನ್ನಾ ಪಟ್ಟಣದ ಪ್ರವಾಸಿ ಮಂದಿರದಿಂದ ಜಾನಪದ ಕಲಾವಿದರೊಂದಿಗೆ ಮೆರವಣಿಗೆಯನ್ನು ಆಯೋಜಿಸಿ ಕನ್ನಡ ನಾಡು ನುಡಿ ಬಿಂಬಿಸುವ ಕಲಾಮೇಳ, ಕಲಾವಿದರು, ಶಾಲಾ ಮಕ್ಕಳು, ಮುಸ್ಲಿಂ ಮದರಸ ಮಕ್ಕಳು ಜನಪ್ರತಿನಿಧಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.