ADVERTISEMENT

ಒತ್ತುವರಿ ಆದೇಶ ಪರಿಷ್ಕರಣೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2011, 11:05 IST
Last Updated 15 ಅಕ್ಟೋಬರ್ 2011, 11:05 IST

ಚಿಕ್ಕಮಗಳೂರು:  ಒತ್ತುವರಿ ತೆರವುಗೊಳಿಸುವ ಆದೇಶವನ್ನು ಜಿಲ್ಲಾಧಿಕಾರಿ ಪರಿಷ್ಕರಿಸಬೇಕು ಎಂದು ಕಾಂಗ್ರೆಸ್ ಜಿಲ್ಲಾ ಘಟಕ ಅಧ್ಯಕ್ಷ ಎಂ.ಎಲ್.ಮೂರ್ತಿ ಒತ್ತಾಯಿಸಿದರು. ಒತ್ತುವರಿಯನ್ನು ಕೂಡಲೇ ತಡೆಹಿಡಿಯಬೇಕು.

ಸರ್ವಪಕ್ಷ ಸಭೆ ಕರೆದು ಚರ್ಚಿಸಿ, ಸಾಮಾಜಿಕ, ಆರ್ಥಿಕಾಗಿ ಹಿಂದುಳಿದಿರುವವರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಶಾಶ್ವತ ಪರಿಹಾರ ಕೈಗೊಳ್ಳಬೇಕೆಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಒತ್ತುವರಿ ಖುಲ್ಲಾಪಡಿಸಲು ಹೊರಡಿಸಿರುವ ಆದೇಶ ಅವೈಜ್ಞಾನಿಕವಾಗಿದೆ. ಇದಕ್ಕೆ ವೈಜ್ಞಾನಿಕ ವಿಶ್ಲೇಷಣೆ ಅಗತ್ಯ. ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ತಲೆದೋರಿರುವುದು ಬಿಜೆಪಿ ಸ್ವಯಂಕೃತ ಅಪರಾಧ. ರಾಜ್ಯ ಸರ್ಕಾರ ಜವಾಬ್ದಾರಿಯಿಂದ ವರ್ತಿಸಿ ವಿದ್ಯುತ್ ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆ: ಕಡೂರು, ಚಿಕ್ಕಮಗಳೂರು ರಸ್ತೆ ಅಭಿವೃದ್ಧಿಪಡಿಸುವಂತೆ ಒತ್ತಾಯಿಸಿ, ಇದೇ 17ರಂದು ಕಡೂರಿನಲ್ಲಿ, 18ಕ್ಕೆ ಸಖರಾಯಪಟ್ಟಣ ಮತ್ತು 19ರಂದು ಚಿಕ್ಕಮಗಳೂರಿನಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ ಎಂದರು.

ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ. ಪೊಲೀಸರು ರಕ್ಷಣೆ ನೀಡುವ ಬದಲು ಮೂಕಪ್ರೇಕ್ಷಕರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

ಕೊಪ್ಪ ತಾಲ್ಲೂಕು ಅಲ್ಪಸಂಖ್ಯಾತರ ವಿಭಾಗ ಅಧ್ಯಕ್ಷರ ಮೇಲೆ ಹಲ್ಲೆ ನಡೆಸಿದ ಕಿಡಿಗೇಡಿಗಳನ್ನು ಬಂಧಿ ಸುವಲ್ಲಿ ಪೊಲೀಸರು ವಿಫಲವಾಗಿದ್ದಾರೆ. ಕಿಡಿಗೇಡಿಗಳನ್ನು ವಾರದೊಳಗೆ ಬಂಧಿಸದಿದ್ದರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.

ಆಯ್ಕೆ: ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ಘಟಕದ ಕಾರ್ಯದರ್ಶಿಯಾಗಿ ಬಿ.ಸಿ.ಗೀತಾ ಮತ್ತು ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಉಡುಪಿ, ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಧ್ಯಕ್ಷರಾಗಿ ಕೊಪ್ಪದ ನಿಖಿಲ್ ಆಯ್ಕೆಯಾಗಿದ್ದಾರೆಂದು ತಿಳಿಸಿದರು.

ಪಕ್ಷದ ಜಿಲ್ಲಾ ವಕ್ತಾರ ಎ.ಎನ್.ಮಹೇಶ್, ಕ್ಷೇತ್ರ ಸಮಿತಿ ಅಧ್ಯಕ್ಷ ಶ್ರೀಧರಉರಾಳ್, ಮುಖಂಡರಾದ ರಾಜು, ಹನೀಫ್, ಷಹಬುದ್ದೀನ್, ವೇಣುಗೋಪಾಲ್ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.