ADVERTISEMENT

ಕಡೂರು ಬರಪೀಡಿತ: ಘೋಷಣೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2011, 9:05 IST
Last Updated 20 ಸೆಪ್ಟೆಂಬರ್ 2011, 9:05 IST

ಕಡೂರು: ತಾಲ್ಲೂಕಿನಲ್ಲಿ ಮಳೆ ಬಾರದೆ ರೈತರು ಬೆಳೆದ ಬೆಳೆಗಳು ನಾಶವಾಗಿ ದನಕರುಗಳಿಗೆ ಮೇವು ಇಲ್ಲದೆ ತತ್ತರಿಸುತ್ತಿವೆ. ತಾಲ್ಲೂಕನ್ನು ಬರಪೀಡಿತ  ಪ್ರದೇಶವೆಂದು ಘೋಷಿಸಿ ರೈತರಿಗೆ ಪರಿಹಾರ ನೀಡಬೇಕೆಂದು ಅಗ್ರಹಿಸಿ ಸೋಮವಾರ ಪ್ರತಿಭಟನೆ ನಡೆಯಿತು.

ಕಡೂರು-ಬೀರೂರು ಬ್ಲಾಕ್ ಕಾಂಗ್ರೆಸ್ ಘಟಕದ ಕಾರ್ಯಕರ್ತರು ಘೋಷಣೆಗೆ ಸರ್ಕಾರಕ್ಕೆ ಅ.2 ರವರೆಗೆ  ಗಡುವು ನೀಡಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.  

 ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಲ್.ಮೂರ್ತಿ, ಕಡೂರು -ಬೀರೂರು ಬ್ಲಾಕ್ ಕಾಂಗ್ರೆಸ್ ಘಟಕಗಳ ಅಧ್ಯಕ್ಷ ರಾದ ಚಂದ್ರಪ್ಪ ಮತ್ತು ವಿನಾಯಕ, ಮುಖಂಡರಾದ ನೀಲಕಂಠಪ್ಪ,  ಕೆಂಪರಾಜ್. ಕೆ.ಬಿ.ಮಲ್ಲಿಕಾರ್ಜುನ್  ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಮರವಂಜಿ ವೃತ್ತದಿಂದ ಕಾಂಗ್ರೆಸ್ ಮುಖಂಡರ ನೇತೃತ್ವದಲ್ಲಿ ಹೊರಟ ನೂರಾರು ಸಂಖ್ಯೆಯ ಕಾರ್ಯಕರ್ತರು ರಾಜ್ಯ ಸರ್ಕಾರದ ನಿಲುವಿನ ವಿರುದ್ಧ ಘೋಷಣೆ ಕೂಗಿದರು. ನಂತರ ತಾಲ್ಲೂಕು ಕಚೇರಿಯ ಮುಂದೆ ಜಮಾಯಿಸಿ ಪ್ರತಿಭಟಿಸಿದರು.

ಎಂ.ಎಲ್.ಮೂರ್ತಿ ಮಾತನಾಡಿ, ತಾಲ್ಲೂಕಿನ ರೈತರು ಅನಾವೃಷ್ಟಿಯಿಂದ  ಲಕ್ಷಾಂತರ ರೂ ವಿವಿಧ ಬೆಳೆಗಳನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಈ ಬಗ್ಗೆ ಸರ್ಕಾರ ಯಾವ ಕ್ರಮಕ್ಕೂ ಮುಂದಾಗುತ್ತಿಲ್ಲ ಎಂದು ಆರೋಪಿಸಿದರು. 

ಕೆ.ಎಂ.ಕೆಂಪರಾಜು ಮಾತನಾಡಿ, ತಿಂಗಳಿಂದ ಕಡೂರು ತಾಲ್ಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸುವುದಾಗಿ ಸರ್ಕಾರದಲ್ಲಿ ಪಾಲುದಾರರಾಗಿರುವ ಶಾಸಕ ಡಾ.ವೈ.ಸಿ.ವಿಶ್ವನಾಥ್ ಮಾಧ್ಯಮಗಳಲ್ಲಿ ಹೇಳುತ್ತಿದ್ದಾರೆ. ಆದರೂ ರೈತರ ಸಂಕಷ್ಟಕ್ಕೆ ಸ್ಪಂದಿಸಿಲ್ಲ ಎಂದು ಆರೋಪಿಸಿದರು.

ತರೀಕೆರೆ ಮಾಜಿ ಶಾಸಕ ನೀಲಕಂಠಪ್ಪ ಮಾತನಾಡಿ, ರೈತರಿಗೆ ಕನಿಷ್ಠ  ಎಕರೆಗೆ 5 ಸಾವಿರ ರೂಗಳ ಪರಿಹಾರ ಹಾಗು ಬಡ್ಡಿ ರಹಿತ ಸಾಲ ನೀಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕೆ.ಬಿ.ಮಲ್ಲಿಕಾರ್ಜುನ್, ಡಿ.ಲಕ್ಷ್ಮಣ್, ಸಾವಿತ್ರಿ ಗಂಗಪ್ಪ, ಟಿ.ವಿ.ಶಿವಶಂಕರ್, ಪುರಸಭಾ ಸದಸ್ಯ ಎಂ.ರೇಣುಕಾರಾಧ್ಯ, ಆನಂದ್, ಕೆ.ಜಿ.ಲೋಕೇಶ್, ಕಾರ್ಯದರ್ಶಿ ಚಂದ್ರಮೌಳಿ ಇದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.