ADVERTISEMENT

ಕಡೂರು: ಮೇವು ಬ್ಯಾಂಕ್ ಶೀಘ್ರ ಆರಂಭ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2011, 5:15 IST
Last Updated 13 ಅಕ್ಟೋಬರ್ 2011, 5:15 IST

ಕಡೂರು: ತಾಲ್ಲೂಕು ಜಾನುವಾರುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಶೀಘ್ರದಲ್ಲೇ ಐದು ಮೇವು ಬ್ಯಾಂಕ್ ಆರಂಭಿಸಲಾಗುವುದು ಎಂದು ಶಾಸಕ ಡಾ.ವೈ.ಸಿ.ವಿಶ್ವನಾಥ್ ತಿಳಿಸಿದರು. 

ತಾಲ್ಲೂಕಿನ ಕೆಲವು ಹೋಬಳಿಗಳನ್ನು ಬರಗಾಲದಿಂದ ಕೈಬಿಟ್ಟಿರುವುದನ್ನು ಸರ್ಕಾರದ ಗಮನಕ್ಕೆ ತರಲಾಗಿದ್ದು ತಾಲ್ಲೂಕಿನ 59 ಗ್ರಾ.ಪಂನ ಎಂಟು ಹೋಬಳಿಗಳನ್ನು ಬರಗಾಲ ಪೀಡಿತ ಪ್ರದೇಶ ಎಂದು ಸರ್ಕಾರ ಘೋಷಿಸಿ ಸಂಪೂರ್ಣ ಸಹಕಾರ ನೀಡಲಿದೆ. ಮೇವು ಬ್ಯಾಂಕ್‌ಗಳನ್ನು ಬಸವನಹಳ್ಳಿ, ಸಿಂಗಟಗೆರೆ, ಅಂತರಘಟ್ಟೆ, ಬಿ.ಮಲ್ಲೇನಹಳ್ಳಿಗಳಲ್ಲಿ ತೆರೆದು ಜಾನುವಾರುಗಳ ರಕ್ಷಣೆಗೆ ಸರ್ಕಾರ ಮುಂದಾಗಲಿದೆ ಎಂದರು.

ಕುಡಿಯುವ ನೀರು ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುವುದಾಗಿ ತಿಳಿಸಿದರು. ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ಕರೆದು ಬರಪೀಡಿತ ಪ್ರದೇಶಗಳಿಗೆ ಮೂಲ ಸೌಕರ್ಯಗಳಿಗೆ ಕೊರತೆಯಾಗದ ರೀತಿಯಲ್ಲಿ ನೋಡಿಕೊಳ್ಳಲು ಸೂಚನೆ ನೀಡಲಾಗಿದೆ.

ಪ್ರತಿ ಜಿ.ಪಂ. ಕ್ಷೇತ್ರಕ್ಕೆ ರೂ.25 ಲಕ್ಷ ವೆಚ್ಚದಲ್ಲಿ ವಿವಿಧ ಕಾಮಗಾರಿ ಕೈಗೆತ್ತಿಕೊಳ್ಳುವುದರ ಮೂಲಕ ಕಾರ್ಮಿಕರಿಗೆ ಉದ್ಯೋಗ ನೀಡಲು ನಿರ್ಧರಿಸಲಾಗಿದೆ. ತುರ್ತು ಅನುದಾನ ತರುವ ಮೂಲಕ ಚರಂಡಿ, ಕುಡಿಯುವ ನೀರು ಸೇರಿದಂತೆ ಅನೇಕ ಕಾಮಗಾರಿ ನಡೆಸಲಾಗುವುದು ಎಂದು ಹೇಳಿದರು.

ರೈತರ ಬೆಳೆ ವಿಮೆ ದಿನಾಂಕ ವಿಸ್ತರಿಸಲು ಅಧಿಕೃತವಾಗಿ ಸಂಬಂಧಿಸಿದ ಇಲಾಖೆಗೆ ಆದೇಶ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಶೀಘ್ರ ಆದೇಶ ಪ್ರಕಟವಾಗಲಿದೆ ಎಂದರು.

ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್‌ಗಳ ವ್ಯವಸ್ಥಾಪಕರೊಂದಿಗೆ ಚರ್ಚಿಸಿ ರೈತರು ಮಾಡಿರುವ ಸಾಲ ವಸೂಲಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಿ ಕಾಲಾವಕಾಶ ನೀಡಿ ಅಲ್ಪಾವಧಿ ಸಾಲಗಳನ್ನು ದೀರ್ಘಾವಧಿ ಸಾಲವಾಗಿ ಪರಿವರ್ತಿಸುವ ಮೂಲಕ ರೈತರಿಗೆ ಸಹಕರಿಸಬೇಕು ಎಂದು ಸೂಚಿಸಿದರು.

ಕಡೂರು-ಬೀರೂರು ಪಟ್ಟಣ ಸೇರಿ ಗ್ರಾಮೀಣ ಪ್ರದೇಶದ ಜನರಿಗೆ ಕುಡಿಯುವ ನೀರಿಗೆ ಕೊರತೆಯಾಗದಂತೆ ಅಗತ್ಯವಿರುವ ಕಡೆ ಹೊಸದಾಗಿ ಕೊಳವೆಬಾವಿ ಕೊರೆಸಿ ನೀರು ನೀಡಲು ಸೂಚಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.