ADVERTISEMENT

ಕಣ್‍ಕುಟ್ಲು ರಸ್ತೆ ಡಾಂಬರೀಕರಣ ಗುಣಮಟ್ಟದಲ್ಲಿ ಆಗಿದೆ

ಗ್ರಾಮ ಪಂಚಾಯಿತಿ ಸದಸ್ಯ ಮೊಯಿದ್ದೀನ್ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2018, 11:32 IST
Last Updated 4 ಏಪ್ರಿಲ್ 2018, 11:32 IST

ಶೃಂಗೇರಿ: ಮೂರು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ರಸ್ತೆಗಳು ನಮ್ಮ ಗ್ರಾಮಗಳಲ್ಲಿ ಇದ್ದು, ಮಳೆಗಾಲದಲ್ಲಿ ನಡೆದಾಡುವುದೇ ಕಷ್ಟಕರವಾಗಿತ್ತು. ಪ್ರಸ್ತುತ ಕೆಸರುಮಯ ರಸ್ತೆಗಳಿಗೆ ಡಾಂಬರೀಕರಣ ಮಾಡಲಾಗಿದ್ದು, ಈ ಮಳೆಗಾಲದ ಸಂಚಾರಕ್ಕೆ ಅನುಕೂಲವಾಗಿದೆ ಎಂದು ವಿದ್ಯಾರಣ್ಯಪುರ ಗ್ರಾಮ ಪಂಚಾಯ್ತಿ ಸದಸ್ಯ ಮೊಯಿದ್ದೀನ್ ಹೇಳಿದರು.ಶೃಂಗೇರಿ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 169ನ ವಿದ್ಯಾರಣ್ಯಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕಣ್‍ಕುಟ್ಲು-ತ್ಯಾವಣ ಗ್ರಾಮೀಣ ರಸ್ತೆ ಅಭಿವೃದ್ಧಿ ಗುಣಮಟ್ಟದ ಬಗ್ಗೆ ಬಂದ ತಕರಾರಿನ ಕುರಿತು ರಸ್ತೆಯ ಸ್ಥಿತಿಗತಿ ಪರಿಶೀಲನೆಗಾಗಿ ಪತ್ರಕರ್ತರನ್ನು ಕರೆದೊಯ್ದು ಸ್ಪಷ್ಟನೆ ನೀಡಿದರು.

‘ಇಲ್ಲಿ ಮುಖ್ಯರಸ್ತೆಯಿಂದ ಒಂದಷ್ಟು ದೂರ ಉಳವಳ್ಳಿ ಗ್ರಾಮದ ರಸ್ತೆ ಆಗಿದ್ದರೆ ನಡುವಿನಲ್ಲಿ ಮರ್ಕಲ್ ಗ್ರಾಮ ಪಂಚಾಯಿತಿ ಗ್ರಾಮೀಣ ರಸ್ತೆ ಬರುತ್ತದೆ. ಈ ರಸ್ತೆಯು ತ್ಯಾವಣದ ಪರಿಶಿಷ್ಟ ಜಾತಿ ಪಂಗಡದ ಕಾಲನಿ ಸೇರುತ್ತದೆ. ಹೀಗಾಗಿ ಸಮಗ್ರ ರಸ್ತೆ ಅಭಿವೃದ್ಧಿಗೆ ತೊಡಕಾಗಿತ್ತು. ದಾರಿಯ ಮಧ್ಯ ಭಾಗ ಮಣ್ಣಿನಿಂದ ಕೂಡಿದ್ದು, ಮಳೆಗಾಲದಲ್ಲಿ ನೀರು ನಿಂತು ಸಂಚರಿಸುವುದೇ ಅಸಾಧ್ಯವಾಗಿತ್ತು’ ಎಂದರು.‘ಪ್ರಸ್ತುತ ಈ ಭಾಗದ ರಸ್ತೆ ಅಭಿವೃದ್ಧಿಗೆ ₹1.48 ಲಕ್ಷ ತಾಲ್ಲೂಕು ಪಂಚಾಯಿತಿ ಅನುದಾನ ಮತ್ತು ₹1 ಲಕ್ಷ ಮುಖ್ಯಮಂತ್ರಿ ಗ್ರಾಮೀಣಾಭಿವೃದ್ಧಿ ನಿಧಿಯನ್ನು ಬಳಸಿ 108 ಮೀಟರ್ ರಸ್ತೆಗೆ ಎರಡು ಪದರ ಜಲ್ಲಿ ಹಾಸಿ, ಡಾಂಬರು ಮಾಡಲಾಗಿರುತ್ತದೆ. ಈ ರಸ್ತೆಯ ಗುತ್ತಿಗೆದಾರ ಅರುಣ್ ಮನೆಯೂ ಇದೇ ಮಾರ್ಗದಲ್ಲಿ ಬರುತ್ತಿರುವುದರಿಂದ 120 ಮೀಟರ್ ರಸ್ತೆ ಮಾಡಲಾಗಿದೆ’ ಎಂದು ಅವರು ವಿವರಿಸಿದರು.

ಕಾಮಗಾರಿಯ ಸಮರ್ಪಕತೆ ಬಗ್ಗೆ ಜಿಲ್ಲಾ ಪಂಚಾಯಿತಿಯ ಕಿರಿಯ ಎಂಜಿನಿಯರ್‌ ಸೈಫುಲ್ಲ ಅವರನ್ನು ವಿಚಾರಿಸಿದಾಗ, ‘ರಸ್ತೆ ಡಾಂಬರೀಕರಣವು ಕ್ರಿಯಾಯೋಜನೆಯ ಗುಣಮಟ್ಟದಲ್ಲಿ ಆಗಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.ಕಾಮಗಾರಿಯ ಬಗ್ಗೆ ಗ್ರಾಮಸ್ಥರಾದ ಶ್ರೀನಿವಾಸ, ಹಸನಬ್ಬ, ಅಬೂಬಕರ್ ಮತ್ತು ಮಹಮದ್ ಅವರು ತೃಪ್ತಿ ವ್ಯಕ್ತಪಡಿಸಿ, ಗುಣಮಟ್ಟದ ಬಗ್ಗೆ ತಕರಾರು ಎತ್ತಿರುವುದು ಸಲ್ಲ ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.