ಕಳಸ: ಗುಟ್ಕಾ ವಿವಾದ ಅಡಿಕೆ ಬೆಲೆಯನ್ನು ಮತ್ತಷ್ಟು ಕುಗ್ಗುವಂತೆ ಮಾಡಿದೆ. ಗುಟ್ಕಾಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ಬರುವ ಮುನ್ನ ಬೆಳೆಗಾರರಲ್ಲಿ ಆತಂಕ ಮನೆಮಾಡಿದೆ. ಈ ನಡುವೆಯೇ ಹೋಬಳಿ ಎಲ್ಲೆಡೆ ಅಡಿಕೆ ಎಳೆಮಿಡಿಗಳು ಉದುರಲಾರಂಭಿಸಿದ್ದು ಇಳುವರಿ ಕುಸಿತದ ಭೀತಿ ರೈತರನ್ನು ಆವರಿಸಿದೆ.
ಅಡಿಕೆ ಬೆಳೆಯುವ ಪ್ರಮುಖ ಪ್ರದೇಶಗಳಾದ ಮುನ್ನೂರುಪಾಲ್, ಬಾಳೆಹೊಳೆ, ತೋಟದೂರು, ಸಂಸೆಯಲ್ಲಿ ಇದುವರೆಗೆ ಮಳೆ ಆಗಿಲ್ಲ. ತಾಪಮಾನ 39 ಡಿಗ್ರಿ ಸೆಲ್ಸಿಯಸ್‌ವರೆಗೂ ಏರಿದೆ. ವಾತಾವರಣದ ಬಿಸಿಗೆ ಅಡಿಕೆ ಹರಳು ಉದುರುತ್ತಿದೆ ಎಂಬುದು ಬೆಳೆಗಾರರ ಆತಂಕ.
ಆದರೆ ತಕ್ಕಮಟ್ಟಿಗೆ ಮಳೆಯಾಗಿರುವ ಹೊರನಾಡು ಮತ್ತು ಭದ್ರಾ ನದಿಯ ದಂಡೆಯಲ್ಲಿದ್ದು ನೀರಾವರಿ ಇರುವ ತೋಟಗಳಲ್ಲೂ ಹರಳು ಉದುರುತ್ತಿರುವುದು ಕಂಡು ಬಂದಿದೆ. ‘ಎಷ್ಟು ನೀರು ಹೊಡೆದ್ರೂ ಎರಡು ದಿನದಲ್ಲೇ ಮಣ್ಣು ಗಾರು ಆಗುತ್ತೆ. ಅಡಿಕೆ ಮರಗಳಿಗೆ ಬಿಸಿಲಿನ ಪೆಟ್ಟು ಜಾಸ್ತಿ ಆಯ್ತು’ ಎಂದು ಸಮಸ್ಯೆ ತೋಡಿಕೊಳ್ಳುತ್ತಾರೆ ಇಲ್ಲಿನ ರೈತರು.
ಅಡಿಕೆಗೆ ಸೂಕ್ಷ್ಮ ಪೋಷಕಾಂಶ ನೀಡಿದರೆ ಹರಳು ಉದುರುವುದು ನಿಲ್ಲುತ್ತದೆ ಎಂಬುದು ತೋಟಗಾರಿಕಾ ಇಲಾಖೆಯ ಸಲಹೆ. ಆದರೆ ಇಲಾಖೆಯೇ ನೀಡಿದ ಪೋಷಕಾಂಶವನ್ನು ಸಕಾಲದಲ್ಲೇ ನೀಡಿದ್ದರೂ ಅಡಿಕೆ ಉದುರುವುದು ನಿಂತಿಲ್ಲ ಎನ್ನುತ್ತಾರೆ ಕಳಕೋಡಿನ ಬೆಳೆಗಾರ ಸುದರ್ಶನ.
‘ಈ ಸಮಸ್ಯೆ ಬಗೆಹರಿಯಬೇಕಾದರೆ ಸರಿಯಾಗಿ ನಾಲ್ಕು ಮಳೆ ಬೀಳಬೇಕು. ಅದುವರೆಗೆ ಅಡಿಕೆ ಉದುರುವುದನ್ನು ತಡೆಯಲು ಸಾಧ್ಯವೇ ಇಲ್ಲ’ ಎನ್ನುತ್ತಾರೆ ಅಡಿಕೆ ಬೆಳೆಗಾರ ವಿಘ್ನೇಶಮೂರ್ತಿ.ವರ್ಷದ ಮೊದಲ ಹಿಂಗಾರಗಳು ಮರದಲ್ಲಿ ಒಣಗಿ ನಿಂತಿವೆ. ಅಡಿಕೆ ಮರಗಳ ಬುಡದಲ್ಲಿ ಬಿದ್ದಿರುವ ಹೀಚುಕಾಯಿಗಳನ್ನು ಕಂಡರೆ ಮುಂದಿನ ಫಸಲಿನ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿರುವುದು ಸ್ಪಷ್ಟವಾಗುತ್ತದೆ ಎಂದು ಇಲ್ಲಿನ ಕೃಷಿಕರು ಆತಂಕ ವ್ಯಕ್ತಪಡಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.