ADVERTISEMENT

ಕಳಸ: ಕಾಮಗಾರಿಗೆ ಗ್ರಾಮಸ್ಥರ ತಡೆ; ಆಕ್ರೋಶ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2012, 6:10 IST
Last Updated 18 ಫೆಬ್ರುವರಿ 2012, 6:10 IST

ಕಳಸ: 1.50 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಸಲು ಉದ್ದೇಶಿಸಿರುವ ಇಲ್ಲಿನ ಮುಖ್ಯ ರಸ್ತೆಯ ಕಾಂಕ್ರಿಟೀಕರಣ ಕಾಮಗಾರಿಗೆ ಗ್ರಾಮಸ್ಥರು ಅಡ್ಡಿಪಡಿಸಿದ ಘಟನೆ ಶುಕ್ರವಾರ ನಡೆದಿದೆ.

ಮಧ್ಯಾಹ್ನದ ವೇಳೆಗೆ ಗ್ರಾಮ ಪಂಚಾ ಯಿತಿ ಮುಂಭಾಗ ಜೆಸಿಬಿ ಯಂತ್ರ ಬಳಸಿ ಕಾಮಗಾರಿ ಆರಂಭಿಸಿದಾಗ ಅನೇಕ ಗ್ರಾಮ ಸ್ಥರು ಒಗ್ಗೂಡಿ ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿದರು. ಮುಖ್ಯ ರಸ್ತೆ ವಿಸ್ತರಣೆ ವಿಷಯ ಇನ್ನೂ ನಿರ್ಧಾರವಾಗದಿರುವ ಹಿನ್ನೆಲೆಯಲ್ಲಿ ಏಕಾಏಕಿ ಕಾಮಗಾರಿ ನಡೆಸುವ ತುರ್ತು ಏನಿತ್ತು? ಎಂದು ಜನರು ಕೋಪ ಪ್ರದರ್ಶಿಸಿದರು.

  `ಇಷ್ಟು ಚೆನ್ನಾಗಿರುವ ರಸ್ತೆಯ ಮೇಲೆ ಕಾಂಕ್ರಿಟ್ ಸುರಿದು ದುಡ್ಡು ಮಾಡಲು ಕಾಮಗಾರಿ ನಡೆಸುತ್ತಿದ್ದೀರಾ. ನಮಗೆ ಈ ಕಾಮಗಾರಿಯೇ ಬೇಡ. ಇದೇ ಹಣದಲ್ಲಿ ಯಾವುದಾದರೂ ಅಗತ್ಯ ಕೆಲಸ ಮಾಡಿ~ ಎಂದು ಕಲಾಸಂಗಮದ ಸಂಚಾಲಕಿ ಮುಮ್ತಾಜ್ ಬೇಗಂ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ರನ್ನು ತರಾಟೆಗೆ ತೆಗೆದುಕೊಂಡರು.

ಕರ್ನಾಟಕ ರಕ್ಷಣಾ ವೇದಿಕೆಯ ಬ್ರಹ್ಮದೇವ ಮಾತನಾಡಿ, ಕಾಂಕ್ರಿಟೀಕರಣದ ನಂತರ ರಸ್ತೆಯ ಎರಡೂ ಬದಿ ಒಂದು ಮೀಟರ್‌ನಷ್ಟು ಜಾಗ ಉಳಿಯುತ್ತದೆ. ಈ ಜಾಗ ರಸ್ತೆಯಿಂದ ಒಂದು ಅಡಿ ಕೆಳಗೆ ಉಳಿಯಲಿದ್ದು ಯಾವ ಉಪಯೋಗಕ್ಕೂ ಬರದಾಗುತ್ತದೆ. ಚರಂಡಿಯಿಂದ ಚರಂಡಿ ಯವರೆಗೆ ಕಾಂಕ್ರಿಟ್ ಹಾಕಿದರೆ ಸಮಸ್ಯೆ ಬಗೆ ಹರಿಯುತ್ತದೆ~ ಎಂದು ಸಲಹೆ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್, ತಮಗೆ ಕೂಡ ಕಾಮಗಾರಿಯ ಬಗ್ಗೆ ಮಾಹಿತಿ ಇಲ್ಲ ಎಂದರು. ಜೆಡಿಎಸ್ ಮುಖಂಡ ಸುರೇಶ್, ಪಶ್ಚಿಮಘಟ್ಟ ಅಭಿವೃದ್ಧಿ ನಿಧಿ ಯನ್ನು ಸುಸ್ಥಿತಿಯಲ್ಲಿರುವ ರಸ್ತೆಗೆ ಬಳಸುತ್ತಿರುವುದು ಕಾನೂನು ಬಾಹಿರ ಎಂದು ಗಮನ ಸೆಳೆದರು. ಕಾಂಗ್ರೆಸ್ ಮುಖಂಡ ಕೆ.ಸಿ.ಧರಣೇಂದ್ರ ಮಾತನಾಡಿ, ಉಪವಿಭಾಗಾಧಿಕಾರಿಗಳು ರಸ್ತೆ ವಿಸ್ತರಣೆಯ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಮೊದಲೇ ಕಾಮಗಾರಿಗೆ ಮುಂದಾಗಿದ್ದು ಅಧಿಕಾರಿಗಳ ತಪ್ಪು ಎಂದು ವಿಶ್ಲೇಷಣೆ ಮಾಡಿದರು.

ಆದರೆ ಸ್ಥಳದಲ್ಲಿದ್ದ ಕಿರಿಯ ಎಂಜಿನಿಯರ್ `ಕಾಮಗಾರಿಯಲ್ಲಿ ಬದಲಾವಣೆಗೆ ಅವಕಾಶ ಇಲ್ಲ. ನಮ್ಮ ಯೋಜನಾ ವರದಿಯಂತೆ ಮಾತ್ರ ಕೆಲಸ ಮಾಡುತ್ತೇವೆ. ಹಿರಿಯ ಅಧಿಕಾರಿಗಳ ಆದೇಶ ಇರುವುದರಿಂದ ಕಾಮಗಾರಿ ನಡೆಸಬೇಕಾಗಿದೆ~ ಎಂದರು. ಕಾಮಗಾರಿಗೆ ಜನ ಅಡ್ಡಿಪಡಿಸದಂತೆ ಪೊಲೀಸ್ ಸುರಕ್ಷತೆಯನ್ನೂ ಪಡೆಯ ಲಾಗಿತ್ತು.
 
ಆದರೆ ಸ್ಥಳದಲ್ಲಿದ್ದ ಜನರು ಮಾತ್ರ ಯಾವುದೇ ಕಾರಣಕ್ಕೂ ಕಾಮಗಾರಿ ನಡೆಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.

ಸ್ಥಳೀಯರಾದ ಮಂಜಪ್ಪ ಪೂಜಾರಿ, ರಿಜ್ವಾನ್ ಮತ್ತಿತರರು ಜೆಸಿಬಿ ಯಂತ್ರದ ಕೆಳಗೆ ಮಲಗುವುದಾಗಿ ಬೆದರಿಕೆ ಹಾಕಿದ ನಂತರ ಯಂತ್ರ ಸ್ಥಗಿತಗೊಳಿಸಲಾಯಿತು. ಸಿ.ಪಿ.ಐ. ಮುಖಂಡ ಗೋಪಾಲ ಶೆಟ್ಟಿ ಕೂಡ ಕಾಮಗಾರಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಎಂ.ಪಿ.ಕುಮಾರಸ್ವಾಮಿ ಅವರಿಗೆ ಸ್ಥಳೀಯರು ದೂರವಾಣಿ ಕರೆ ಮಾಡಿ ಕಾಮಗಾರಿ ನಿಲ್ಲಿಸುವಂತೆ ಒತ್ತಾಯ ಮಾಡಿದರು. ಶಾಸಕರು ಕೂಡಲೇ ಕಾಮಗಾರಿ ನಿಲ್ಲಿಸುವಂತೆ ಅಧಿಕಾರಿಗಳಿಗೆ ಆದೇಶ ನೀಡಿದ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಳಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.