ADVERTISEMENT

ಕಾಂಗ್ರೆಸ್‌, ಜೆಡಿಎಸ್‌ ರೈತ ವಿರೋಧಿ

ಬಂದ್‌ಗೆ ಮಿಶ್ರ ಪ್ರತಿಕ್ರಿಯೆ– ಪ್ರತಿಭಟನಾಕಾರರ ಆರೋಪ

​ಪ್ರಜಾವಾಣಿ ವಾರ್ತೆ
Published 30 ಮೇ 2018, 13:28 IST
Last Updated 30 ಮೇ 2018, 13:28 IST

ಕೊಪ್ಪ: ಸೋಮವಾರ ಕರೆಯಲಾಗಿದ್ದ ಕರ್ನಾಟಕ ಬಂದ್‌ಗೆ ಪಟ್ಟಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ತಾಲ್ಲೂಕಿನ ಕೆಲವೆಡೆ ಬಂದ್ ನಡೆಯಲಿಲ್ಲ.

ಪಟ್ಟಣದಲ್ಲಿ ಬೆಳಿಗ್ಗೆ ಬಿಜೆಪಿ ಕಾರ್ಯಕರ್ತರ ತಂಡ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಲು ಮುಂದಾದಾಗ ಕೆಲವೆಡೆ ಪ್ರತಿರೋಧ ವ್ಯಕ್ತವಾಯಿತು. ಸರ್ಕಾರಿ ಮತ್ತು ಖಾಸಗಿ ಬಸ್ ಸಂಚಾರಕ್ಕೆ ತಡೆಯೊಡ್ಡಿದ್ದರಿಂದ ಪ್ರಯಾಣಿಕರು ಪರದಾಡುವಂತಾಯಿತು. ಸೋಮವಾರ ಎಲ್ಲೆಡೆ ಶಾಲಾ ಪ್ರಾರಂಭೋತ್ಸವ ದಿನವಾಗಿದ್ದರಿಂದ ಸಂಭ್ರಮದಿಂದ ಶಾಲೆಗೆ ಹೊರಟಿದ್ದ ವಿದ್ಯಾರ್ಥಿಗಳು ಬಸ್ ಸೌಕರ್ಯವಿಲ್ಲದೆ ನಿಲ್ದಾಣದಲ್ಲೇ ಕಾಯಬೇಕಾಯಿತು. ಬಹುತೇಕ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಿತ್ತು. ಪೆಟ್ರೋಲ್ ಬಂಕ್ ಗಳು ಮುಚ್ಚಿದ್ದರಿಂದ ಸರ್ಕಾರಿ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರದ ಜನರೇಟರ್‌ಗೆ ಡೀಸೆಲ್ ಪೂರೈಸಲಾಗದೆ ರೋಗಿಗಳು ಪರದಾಡುವಂತಾಯಿತು.

ಬಂದ್ ವಿರುದ್ಧ ಸಾರ್ವಜನಿಕರಿಂದ ಅಸಮಾಧಾನ ವ್ಯಕ್ತವಾಗುತ್ತಿದ್ದಂತೆ ಬಸ್ ನಿಲ್ದಾಣದ ಆವರಣದಲ್ಲಿ ಜಮಾಯಿ
ಸಿದ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು, ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಸಬ್ ಇನ್‌ಸ್ಪೆಕ್ಟರ್ ಯೋಗೀಶ್ ಬಳಿ ತೆರಳಿ ‘ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ತೊಂದರೆಯಾಗುವ ಬಂದ್‌ಗೆ ಅವಕಾಶ ನೀಡಬಾರದು. ಬಸ್ ಸಂಚಾರಕ್ಕೆ ಕೂಡಲೇ ಅನುವು ಮಾಡಿಕೊಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಈ ಸಂದರ್ಭದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು ಪರಸ್ಪರ ಧಿಕ್ಕಾರದ ಘೋಷಣೆ ಕೂಗತೊಡಗಿದ್ದರಿಂದ ಕೆಲ ಹೊತ್ತು ಬಿಗುವಿನ ವಾತಾವರಣ ಸೃಷ್ಟಿಯಾಯಿತು. ಪರಿಸ್ಥಿತಿ ವಿಕೋಪಕ್ಕೆ ತಿರುಗುವುದನ್ನು ಅರಿತ ಎಸ್‌ಐ ಯೋಗೀಶ್ ಬಂದ್ ಕೈಬಿಡುವಂತೆ ಬಿಜೆಪಿ ಮುಖಂಡರ ಮನವೊಲಿಸಿದ್ದರಿಂದ ಬೆಳಿಗ್ಗೆ 11ಕ್ಕೆ ಬಂದ್ ಕೈಬಿಡಲಾಯಿತು. ನಂತರ ಬಸ್ ಸಂಚಾರ ಆರಂಭಗೊಂಡಿತು. ಬಹುತೇಕ ಅಂಗಡಿ ಮುಂಗಟ್ಟುಗಳು ತೆರೆದುಕೊಂಡವು.

ಬಿಜೆಪಿ ಮುಖಂಡ ಎಸ್.ಎನ್. ರಾಮಸ್ವಾಮಿ ಪತ್ರಿಕಾ ಹೇಳಿಕೆ ನೀಡಿ, ‘ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ವಚನ ಭ್ರಷ್ಟರಾಗಿರುವ ವಿರುದ್ಧ ರೈತ ಹೋರಾಟಗಾರರು ಕರೆದಿದ್ದ ಬಂದ್ ಗೆ ಬಿಜೆಪಿ ಬೆಂಬಲ ನೀಡಿದೆ. ಈ ಬಂದ್‌ಅನ್ನು ತಡೆಯುವ ಮೂಲಕ ಕಾಂಗ್ರೆಸ್ ಮತ್ತು ಜೆಡಿಎಸ್ ನವರು ತಾವು ರೈತರ ವಿರೋಧಿಗಳೆಂದು ಸಾಬೀತುಪಡಿಸಿದ್ದಾರೆ. ಅವರಿಗೆ ಚುನಾವಣೆವರೆಗೆ ರೈತರು ಬೇಕಾಯಿತು. ಈಗ ಬೇಡವಾಗಿದ್ದಾರೆ’ ಎಂದು ವ್ಯಂಗ್ಯವಾಡಿದರು.

ಬಂದ್ ಗೆ ಸಹಕರಿಸಿದ ಪಟ್ಟಣದ ವರ್ತಕರು, ಬಸ್ ಮಾಲೀಕರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು. ಹೊಸೂರು ದಿನೇಶ್, ಪುಣ್ಯಪಾಲ್, ಎಂ.ಕೆ. ಕಿರಣ್, ದಿವಾಕರ್, ವಾಣಿ ಸತೀಶ್, ಸುಜನ, ಪೂರ್ಣೇಶ್, ದಿನೇಶ್, ರಾಕಿ ಹಿರೇಕೊಡಿಗೆ ಮುಂತಾದವರಿದ್ದರು.

**
ಕ್ಷೇತ್ರದ ಶಾಸಕರು ನಾಪತ್ತೆಯಾಗಿದ್ದಾರೆ. ಇನ್ನು 2-3 ದಿನದೊಳಗೆ ಕ್ಷೇತ್ರಕ್ಕೆ ಬರದಿದ್ದರೆ ಅವರನ್ನು ಹುಡುಕಿಕೊಡುವಂತೆ ಪೊಲೀಸ್ ದೂರು ನೀಡಲಾಗುವುದು
ಎಸ್.ಎನ್. ರಾಮಸ್ವಾಮಿ, ಬಿಜೆಪಿ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.