ADVERTISEMENT

ಕಾಡಾನೆ ದಾಳಿ: ಭಯದಿಂದ ಕಾರ್ಮಿಕರು ವಿಮುಖ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2012, 7:00 IST
Last Updated 27 ಡಿಸೆಂಬರ್ 2012, 7:00 IST

ಮೂಡಿಗೆರೆ: ತಾಲ್ಲೂಕಿನಲ್ಲಿ ಕಳೆದ ಹಲವಾರು ದಿನಗಳಿಂದ ದಾಳಿ ನಡೆಸುತ್ತಿರುವ ಕಾಡಾನೆಗಳಿಂದಾಗಿ ಕಾಫಿ ತೋಟದಲ್ಲಿ ಬೆಳೆದ ಬೆಳೆಗಳನ್ನು ಉಳಿಸಿಕೊಳ್ಳಲು ಕಾಫಿ ಬೆಳೆಗಾರರು ಹೆಣಗಾಡುತ್ತಿದ್ದಾರೆ.

ಕಳೆದ ನಾಲ್ಕೈದು ತಿಂಗಳಿನಿಂದಲೂ ತಾಲ್ಲೂಕಿನ ಕೆಂಜಿಗೆ, ಭಾರತಿಬೈಲು, ಬಾನಳ್ಳಿ, ಸಬ್ಬೇನಹಳ್ಳಿ, ಬಡವನ ದಿಣ್ಣೆ, ಹೊರಟ್ಟಿ, ಸಾರಗೋಡು, ಕುಂದೂರು, ದರ್ಶನ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಹಲವು ಬಾರಿ ಕಾಡಾನೆಗಳು ದಾಳಿ ನಡೆಸಿದ್ದವು. ಆದರೂ ರೈತರ ಗೋಗೆರೆಯುವ ಪರಿಸ್ಥಿತಿಯನ್ನು ಕಂಡು ಕಾರ್ಮಿಕರು ಧೈರ್ಯ ಮಾಡಿ ತೋಟದ ಕೆಲಸಗಳಿಗೆ ತೆರಳುತ್ತಿದ್ದರು. ಇದಕ್ಕೆ ರೈತರು ನೀಡುತ್ತಿದ್ದ ದುಪ್ಪಟ್ಟು ವೇತನವೂ ಕಾರಣವಾಗಿತ್ತು. ಆದರೆ ಕಳೆದ ನಾಲ್ಕು ದಿನಗಳ ಹಿಂದೆ, ಒಂದೇ ದಿನದಲ್ಲಿ ಬಗ್ಗಸಗೋಡು ಮತ್ತು ಬಾನಳ್ಳಿಯಲ್ಲಿ ಕಾಡಾನೆ ದಾಳಿ ನಡೆಸಿ, ಕಾರ್ಮಿಕರನ್ನು ಗಾಯಗೊಳಿಸಿದ ನಂತರ ಎಷ್ಟೇ ಹಣ ನೀಡಿದರೂ, ತೋಟದ ಕೆಲಸಗಳಿಗೆ ಮಾತ್ರ ಬರುವುದಿಲ್ಲ ಎಂದು ಕಾರ್ಮಿಕರು ಕಠಿಣ ನಿಲುವನ್ನು ತಳೆದಿದ್ದಾರೆ.

ಈಗಾಗಲೇ ತಾಲ್ಲೂಕಿನಾದ್ಯಂತ ಅರೆಬಿಕಾ ಕಾಫಿಯ ಮೊದಲ ಹಂತದ ಕೊಯ್ಯಲು ಪ್ರಾರಂಭವಾಗಿದ್ದು, ಇತರೆ ಪ್ರದೇಶಗಳಲ್ಲಿ ಮುಕ್ತಾಯವನ್ನು ಕಂಡಿದ್ದರೂ ಆನೆ ದಾಳಿ ಪ್ರದೇಶದ ಹಲವು ತೋಟಗಳು ಇದುವರೆಗೂ ಅರೇಬಿಕಾ ಕೊಯ್ಯಲು ಕಾರ್ಮಿಕರಿಲ್ಲದೇ ಪ್ರಾರಂಭವನ್ನೇ ಕಂಡಿಲ್ಲ.

ಮುಂದಿನ ಹದಿನೈದು ದಿನಗಳಲ್ಲಿ ರೋಬಾಸ್ಟಾ ಕಾಫಿ ಕೊಯ್ಯಲು ಪ್ರಾರಂಭವಾಗತ್ತಿದ್ದು, ಕಾಫಿ ತೋಟಕ್ಕೆ ತೆರಳದ ಕಾರ್ಮಿಕರ ಕಠಿಣ ನಿಲುವಿನಿಂದ ಕಾಫಿ ಬೆಳೆಗಾರರು ಕಂಗಲಾಗಿದ್ದಾರೆ. ಇದೇ ಪರಿಸ್ಥಿತಿ ಮುಂದುವರೆದರೇ ರೋಬಾಸ್ಟ, ಕಾಳುಮೆಣಸು, ಏಲಕ್ಕಿಗಳನ್ನು ಕೊಯ್ದುಕೊಳ್ಳಲಾಗದೇ ಬೆಳೆದ ಬೆಳೆಯನ್ನು ಉದುರಲು ಬಿಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂಬುದು ಈ ಭಾಗದ ರೈತರ ಅಳಲು.

`ಆನೆ ದಾಳಿಯಿಂದಾಗಿ ಬೆಳೆದ ಭತ್ತದ ಬೆಳೆ ಕೈಗೆ ಸಿಗದೇ ಹೆಚ್ಚಿನ ರೈತರಿಗೆ ನಷ್ಟವಾಗಿದೆ. ಈಗ ಕಾಫಿ ಹಣ್ಣಾಗಿದೆ. ಕಾರ್ಮಿಕರು ಕಾಫಿ ತೋಟದ ಕೆಲಸಕ್ಕೆ ಬರಲು ನಿರಾಕರಿಸುತ್ತಿರುವುದರಿಂದ ಪುನಃ ರೈತರ ಪರಿಸ್ಥಿತಿ ಕೇಳುವವರಿಲ್ಲದಂತಾಗಿದೆ. ಸಾಲ ಮಾಡಿ ಬೆಳೆದ ಬೆಳೆ ಕೈಗೆ ಸಿಗದಿದ್ದರೆ ಸಾಲ ತೀರಿಸೋದು ಹೇಗೆ ಎಂಬ ಹೆದರಿಕೆ ಶುರುವಾಗಿದೆ' ಎನ್ನುತ್ತಾರೆ ರೈತ ಕುಂದೂರಿನ ಶಶಿಗೌಡ.

ಅರಣ್ಯ ಇಲಾಖೆಯು ತಕ್ಷಣವೇ ಕಾರ್ಯಚರಣೆಗಿಳಿದು, ಆನೆಯನ್ನು ಹಿಡಿದು ಸ್ಥಳಾಂತರ ನಡೆಸಬೇಕು ಮತ್ತು ರೈತರು ಬೆಳೆದಿರುವ ಬೆಳೆಗಳ ಕಟಾವಿನವರೆಗೆ ನಿತ್ಯ ಗಸ್ತು ಪ್ರಕ್ರಿಯೆಯನ್ನು ಮುಂದುವರೆಸಿ ಕಾರ್ಮಿಕರಲ್ಲಿರುವ ಭಯವನ್ನು ಹೋಗಲಾಡಿಸಬೆಕು ಎಂಬುದು ಈ ಭಾಗದ ಕಾಫಿ ಬೆಳೆಗಾರರ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.