ADVERTISEMENT

ಕುಡಿಯುವ ನೀರಿಗಾಗಿ ತಪ್ಪದ ಅಲೆದಾಟ

ಮಹದೇವ್ ಹೆಗ್ಗವಾಡಿಪುರ
Published 20 ಜೂನ್ 2012, 9:00 IST
Last Updated 20 ಜೂನ್ 2012, 9:00 IST
ಕುಡಿಯುವ ನೀರಿಗಾಗಿ ತಪ್ಪದ ಅಲೆದಾಟ
ಕುಡಿಯುವ ನೀರಿಗಾಗಿ ತಪ್ಪದ ಅಲೆದಾಟ   

ಸಂತೇಮರಹಳ್ಳಿ: ಕಸ, ಕಡ್ಡಿ ತುಂಬಿ ಹೂಳು ತೆಗೆಸದೇ ಕೊಳೆತು ನಾರುತ್ತಿರುವ ಚರಂಡಿ, ಬೆಳೆದು ನಿಂತಿರುವ ಗಿಡ-ಗಂಟೆಗಳು, ಕುಡಿಯುವ ನೀರಿಗಾಗಿ ಅಲೆದಾಟ, ಸ್ವಚ್ಛತೆಗೆ ಆದ್ಯತೆ ನೀಡದ ಪರಿಣಾಮ ಕೊಳಗೇರಿಯತ್ತ ಮುಖ ಮಾಡಿರುವ ಬಡಾವಣೆ.

ಇದು ಇಲ್ಲಿನ ಜನತಾ ಬಡಾವಣೆಯ ಸ್ಥಿತಿ-ಗತಿ. ಗ್ರಾಮ ಪಂಚಾಯಿತಿ ನಿರ್ಲಕ್ಷ್ಯದಿಂದ ಮನೆಗಳ ಮುಂಭಾಗ ಇರುವ ಚರಂಡಿ ಹೂಳು ತೆಗೆಸದೇ ದುರ್ವಾಸನೆಯಲ್ಲಿಯೇ ಜನರು ವಾಸಿಸುವಂತಾಗಿದೆ. ಮುಸ್ಸಂಜೆಯಾಗುತ್ತಿದ್ದಂತೆ ಮನೆಗಳ ಬಾಗಿಲು ತೆರೆದರೆ ಸೊಳ್ಳೆ ಕಾಟ ಹೇಳತೀರದು. ಸಂಬಂಧಪಟ್ಟವರು ಸಮಸ್ಯೆ  ಬಗೆ ಹರಿಸದ ಕಾರಣ ನಿವಾಸಿಗಳು ಹಿಡಿಶಾಪ ಹಾಕುತ್ತಿದ್ದಾರೆ.

ಕುಡಿಯುವ ನೀರು ತೆಗೆದುಕೊಳ್ಳುವ ತೊಂಬೆಯ ಸುತ್ತಲೂ ಅನೈರ್ಮಲ್ಯ ಸೃಷ್ಟಿಯಾಗಿದೆ. ತೊಂಬೆಯ ಸನಿಹದಲ್ಲಿ ಚರಂಡಿ ಇದ್ದು, ತ್ಯಾಜ್ಯ ನೀರು ಹರಿದು ಹೋಗುವಂತಹ ವ್ಯವಸ್ಥೆ ಸಮರ್ಪಕವಾಗಿ ಮಾಡಿಲ್ಲ. ಕೊಚ್ಚೆಯ ನಡುವೆ ಕುಡಿಯುವ ನೀರು ಹಿಡಿಯುವಂತಹ ದುಃಸ್ತಿತಿ ನಿವಾಸಿಗಳಿಗೆ ಒದಗಿ ಬಂದಿದೆ.

ಬಡಾವಣೆಯಲ್ಲಿ 2 ಸಾವಿರದಷ್ಟು ಜನಸಂಖ್ಯೆ ಇದೆ. 2 ಕೊಳವೆ ಬಾವಿಗಳಿಂದ ಬಡಾವಣೆಗಳಿಗೆ ನೀರು ಸರಬರಾಜು ಮಾಡಲಾಗುತ್ತಿದ್ದರೂ ಸಹಾ ನಿವಾಸಿಗಳಿಗೆ ಸಮರ್ಪಕವಾಗಿ ಕುಡಿಯುವ ನೀರು ಲಭಿಸುತ್ತಿಲ್ಲ. ಇದಕ್ಕಾಗಿ ಗ್ರಾಮ ಪಂಚಾಯಿತಿ ಮುಂಭಾಗ ನಿವಾಸಿಗಳಿಂದ ಪ್ರತಿಭಟನೆ ಮಾಡಿದರೂ ಪ್ರಯೋಜನವಾಗಿಲ್ಲ. ಕಿರು ನೀರು ಸರಬರಾಜು ಘಟಕದ 3 ತೊಂಬೆಗಳಿಗೂ ನೀರು ತುಂಬುತ್ತಿಲ್ಲ. 

ಕೈಪಂಪುಗಳು ಕೆಟ್ಟು ನಿಂತಿವೆ. ದುರಸ್ಥಿ ಕಾರ್ಯಕ್ಕೆ ಜನ ಪ್ರತಿನಿಧಿಗಳು ಮುಂದಾಗಿಲ್ಲ.  ಕೊಳವೆ ಬಾವಿಗಳಿಗೆ ಹೆಚ್ಚು ಪೈಪ್ ಬಿಟ್ಟು, ಬಡಾವಣೆಯ ನಿವಾಸಿಗಳಿಗೆ ಸಮರ್ಪಕವಾಗಿ ನೀರು ಬಿಡಬೇಕು. ಹಾಗೂ ಸ್ವಚ್ಛತೆಗೆ ಮೊದಲು ಆದ್ಯತೆ ನೀಡಬೇಕು ಎಂದು ನಿವಾಸಿ ಆಶಾ ಕಾರ್ಯಕರ್ತೆ ಮಂಜುಳಾ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.