ಮೂಡಿಗೆರೆ: ದೇಶದ ಕೃಷಿ ಹಾಗೂ ಹಸಿರು ಕ್ರಾಂತಿಗೆ ಮಾಜಿ ಉಪ ಪ್ರಧಾನಿ ಬಾಬು ಜಗಜೀವನ್ ರಾಮ್ ಕೊಡುಗೆ ಅಪಾರವಾಗಿದ್ದು, ಅಂದು ಅವರು ಕೃಷಿ ಕ್ಷೇತ್ರಕ್ಕೆ ಪ್ರಾಮುಖ್ಯತೆ ನೀಡಿದ್ದರಿಂದ ದೇಶ ಆಹಾರದಲ್ಲಿ ಸ್ವಾವಲಂಬನೆ ಸಾಧಿಸಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಜ್ಯೋತಿ ಹೇಮಶೇಖರ್ ಹೇಳಿದರು.ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಸಮಾಜ ಕಲ್ಯಾಣ ಇಲಾಖೆ, ತಾಲ್ಲೂಕು ಆಡಳಿತ ಆಯೋಜಿಸಿದ್ದ ಜಗಜೀವನ್ ರಾಮ್ ಅವರ 104ನೇ ಜನ್ಮದಿನೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಜಿ.ಪಂ. ಸದಸ್ಯ ಅರೆಕೊಡಿಗೆ ಶಿವಣ್ಣ ಮಾತನಾಡಿ, ಪ್ರಸ್ತುತ ದೇಶದ ಕೃಷಿ ನೀತಿಯಿಂದ ರೈತರಿಗೆ, ಬೆಳೆ ಗಾರರಿಗೆ ಅನುಕೂಲ ಕಲ್ಪಿಸಿ, ಕೃಷಿಯಲ್ಲಿ ಯಾಂತ್ರಿಕತೆ ಜತೆ ವೈಜ್ಞಾನಿಕತೆಯನ್ನು ತರಲು ಶ್ರಮಿಸಿದವರು ಎಂದರು. ಜಿಪಂ ಸದಸ್ಯ ಎಂ.ಎಸ್.ಅನಂತು ಮಾತ ನಾಡಿ, ದೇಶದ ಅತ್ಯುನ್ನತ ರಾಜಕೀಯ ಮುತ್ಸದ್ದಿಯಾಗಿ ದಲಿತರ ಆಶಾಕಿರಣವಾಗಿದ್ದರು ಎಂದರು.
ನಿವೃತ್ತ ಶಿಕ್ಷಕ ನಂಜುಂಡ ಪ್ರಧಾನ ಭಾಷಣ ಮಾಡಿ ಬಾಬುಜಿಯ ಜೀವನ ಚರಿತ್ರೆಯನ್ನು ಸವಿಸ್ತಾರವಾಗಿ ತಿಳಿಸಿ, ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್‌ರೊಂದಿನ ಸಂಬಂಧ ವಿವರಿಸಿದರು.ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಾವೀದ್ ಹುಸೇನ್, ತಾಪಂ ಸದಸ್ಯರಾದ ಹೂವಮ್ಮ, ಸುಧಾ, ತಹಸೀಲ್ದಾರ್ ಶಿವೇಗೌಡ, ಸಮಾಜ ಕಲ್ಯಾಣಾಧಿಕಾರಿ ಹರ್ಷಕುಮಾರ್, ಶ್ರೀನಿವಾಸ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.