ADVERTISEMENT

ಕೇಂದ್ರ ಅನುದಾನ ಬಳಕೆಯಾಗಿಲ್ಲ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2012, 7:45 IST
Last Updated 10 ಮಾರ್ಚ್ 2012, 7:45 IST

ಶೃಂಗೇರಿ: ಕೇಂದ್ರ ಸರ್ಕಾರದಿಂದ ಕೋಟ್ಯಂತರ ರೂಪಾಯಿ ಅನುದಾನ ರಾಜ್ಯಕ್ಕೆ ಬರುತ್ತಿದ್ದರೂ ಅದನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಕೇಂದ್ರ ಕಂಪೆನಿ ವ್ಯವಹಾರಗಳ ಸಚಿವ ಎಂ. ವೀರಪ್ಪ ಮೊಯಿಲಿ ಹೇಳಿದರು.

ತಾಲ್ಲೂಕಿನ ಕಿಗ್ಗದಲ್ಲಿ ಶುಕ್ರವಾರ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಪರ ಮತಯಾಚನೆಗಾಗಿ ಏರ್ಪಡಿಸಿದ್ದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಬಗೆಹರಿಸಲು ಸಾಧ್ಯವಾಗದ ರಾಜ್ಯ ಸರ್ಕಾರ ಕೇಂದ್ರದ ವಿದ್ಯುತ್ ಯೋಜನೆಗಳಿಗೂ ಸಹಕಾರ ನೀಡುತ್ತಿಲ್ಲ. ರಾಜೀವ್ ಗಾಂಧಿ ವಿದ್ಯುತ್ ಯೋಜನೆಯ ಎರಡನೇ ಮತ್ತು ಮೂರನೇ ಹಂತದ ಯೋಜನಗೆ ಬಿಡುಗಡೆಯಾದ ಹಣವನ್ನು ರಾಜ್ಯ ಸರ್ಕಾರ ವಿನಿಯೋಗ ಮಾಡದೆ ಜನತೆಗೆ ದ್ರೋಹ ಬಗೆದಿದೆ ಎಂದು ದೂರಿದರು.

ಭೂಕಬಳಿಕೆಯಲ್ಲಿ ಮಂತ್ರಿಗಳು ಶಾಸಕರು ಸೇರಿಕೊಂಡಿದ್ದಾರೆ. ಮಾಜಿ ಸಿಎಂಗೆ ತಾತ್ಕಾಲಿಕ ವಿನಾಯಿತಿ ದೊರಕಿದ್ದು ನ್ಯಾಯಯುತ ವಿಚಾರಣೆ ಯಿಂದ ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇಬೇಕಿದೆ. ಕೇಂದ್ರ ಸರ್ಕಾರ ರೈತರ ಪರವಾಗಿದ್ದು, ಈ ಹಿಂದೆ ಎಪ್ಪತ್ತೆರಡು ಸಾವಿರ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದೆ.
 
ಅಡಕೆ ಬೆಳೆ ಗಾರರ ಪರವಾದ ನಿರ್ಧಾರವನ್ನು ಸರ್ಕಾರ ಕೈಗೊಳ್ಳಲಿದ್ದು, ಚುನಾವಣಾ ಸಂದರ್ಭದಲ್ಲಿ ಈ ಬಗ್ಗೆ ಭರವಸೆ ನೀಡಲಾಗದು. ಜಯಪ್ರಕಾಶ್ ಹೆಗ್ಡೆ ಅವರನ್ನು ನಾವು ಈ ಬಾರಿ ದಿಲ್ಲಿಗೆ ಕರೆದೊಯ್ಯಲು  ಸಹಕಾರ ಅಗತ್ಯ ಎಂದರು. ಸಭೆಯಲ್ಲಿ ಮಾಜಿ ಮಂತ್ರಿ ಬೇಗಾನೆ ರಾಮಯ್ಯ, ಬಾಳೆಮನೆ ನಟರಾಜ್, ಸಚಿನ್ ಮೀಗಾ, ಕಾಂಗ್ರೆಸ್ ಅಧ್ಯಕ್ಷೆ ಸೌಭಾಗ್ಯ , ಹುಲ್ಸೆ ರಾಜಶೇಖರ್ ಮುಂತಾದವರು ಹಾಜರಿದ್ದರು.

ಇದೇ ಸಂದರ್ಭದಲ್ಲಿ ಗಂಡಗಟ್ಟ ನಾಗೇಶ್, ಯಡದಾಳು ಶಂಕರಪ್ಪ, ತಿಮ್ಮಪ್ಪ ಮುಂತಾದವರು ಬಿ.ಜೆ.ಪಿ.ಯಿಂದ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.