ADVERTISEMENT

ಕೊಪ್ಪದಲ್ಲಿ ‘ಕೃಷಿಕರ ಹಬ್ಬ’ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2017, 8:44 IST
Last Updated 1 ಡಿಸೆಂಬರ್ 2017, 8:44 IST
ಕೊಪ್ಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಇಂದಿನಿಂದ ನಡೆಯುವ ಜಿಲ್ಲಾ ಮಟ್ಟದ ಕೃಷಿ ಉತ್ಸವದಲ್ಲಿ ಊಟೋಪಹಾರದ ವ್ಯವಸ್ಥೆಗಾಗಿ ರೈತರು ನೀಡಿದ ಧವಸ ಧಾನ್ಯ, ದಿನಸಿ, ತರಕಾರಿ ಮುಂತಾದ ಅಗತ್ಯವಸ್ತುಗಳ ಹೊರೆ ಕಾಣಿಕೆಗಳ ಮೆರವಣಿಗೆ ಗುರುವಾರ ಕೊಪ್ಪ ಪಟ್ಟಣದಲ್ಲಿ ನಡೆಯಿತು.
ಕೊಪ್ಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಇಂದಿನಿಂದ ನಡೆಯುವ ಜಿಲ್ಲಾ ಮಟ್ಟದ ಕೃಷಿ ಉತ್ಸವದಲ್ಲಿ ಊಟೋಪಹಾರದ ವ್ಯವಸ್ಥೆಗಾಗಿ ರೈತರು ನೀಡಿದ ಧವಸ ಧಾನ್ಯ, ದಿನಸಿ, ತರಕಾರಿ ಮುಂತಾದ ಅಗತ್ಯವಸ್ತುಗಳ ಹೊರೆ ಕಾಣಿಕೆಗಳ ಮೆರವಣಿಗೆ ಗುರುವಾರ ಕೊಪ್ಪ ಪಟ್ಟಣದಲ್ಲಿ ನಡೆಯಿತು.   

ಕೊಪ್ಪ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಬಾಳಗಡಿಯ ಪ್ರಥಮದರ್ಜೆ ಕಾಲೇಜು ಕ್ರೀಡಾಂಗಣದಲ್ಲಿ ಇದೇ 1ರಿಂದ 3ರವರೆಗೆ ನಡೆಯುವ ಜಿಲ್ಲಾ ಮಟ್ಟದ ಕೃಷಿ ಉತ್ಸವದ ಸಿದ್ಧತಾ ಕಾರ್ಯಗಳು ಪೂರ್ಣಗೊಂಡಿದೆ. ಕೊಪ್ಪ ಪಟ್ಟಣವಿಡೀ ತಳಿರು ತೋರಣ, ಭವ್ಯ ಸ್ವಾಗತ ಕಮಾನುಗಳು, ವಿದ್ಯುದ್ದೀಪಗಳ ಅಲಂಕಾರದೊಂದಿಗೆ ನವವಧುವಿನಂತೆ ಕಂಗೊಳಿಸುತ್ತಿದೆ.

ಧರ್ಮಸ್ಥಳದ ವಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ನಡೆಯುವ ಕೃಷಿ ಹಬ್ಬದ ಯಶಸ್ಸಿಗೆ ಕೃಷಿ ಉತ್ಸವ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಲ್.ಎಂ. ಪ್ರಕಾಶ್ ಕೌರಿ, ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್. ಮಂಜುನಾಥ್, ಪ್ರಾದೇಶಿಕ ನಿರ್ದೇಶಕ ಮಹಾವೀರ ಅಜ್ರಿ, ಜಿಲ್ಲಾ ನಿರ್ದೇಶಕಿ ಗೀತಾ, ಕೊಪ್ಪ ಯೋಜನಾಧಿಕಾರಿ ಡಿ. ದಿನೇಶ್, ಕೃಷಿ ಅಧಿಕಾರಿ ಪ್ರೇಮ್‌ಕುಮಾರ್, ಉತ್ಸವ ಸಮಿತಿ ಪದಾಧಿಕಾರಿಗಳು, ಯೋಜನೆಯ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ಪ್ರಗತಿಬಂಧು, ಸ್ವಸಹಾಯ ಸಂಘಗಳ ಒಕ್ಕೂಟದ ಕಾರ್ಯಕರ್ತರು ಅಹರ್ನಿಶಿ ಶ್ರಮಿಸುತ್ತಿದ್ದಾರೆ.

ಉತ್ಸವಕ್ಕೆ ಜಿಲ್ಲೆಯ ವಿವಿಧ ಭಾಗಗಳಿಂದ 50 ಸಾವಿರಕ್ಕೂ ಹೆಚ್ಚು ಮಂದಿ ಬರುವ ನಿರೀಕ್ಷೆ ಇದೆ. ಎಲ್ಲರಿಗೂ ಊಟೋಪಹಾರದ ವ್ಯವಸ್ಥೆಗಾಗಿ ತಾಲ್ಲೂಕಿನ ವಿವಿಧ ಭಾಗಗಳಿಂದ ರೈತರು ತಂದಿದ್ದ ಧವಸ ಧಾನ್ಯ, ದಿನಸಿ, ತರಕಾರಿ ಮುಂತಾದ ಅಗತ್ಯ ವಸ್ತುಗಳ ಹೊರೆ ಕಾಣಿಕೆಗಳ ಮೆರವಣಿಗೆಯು ಗುರುವಾರ ಬೆಳಿಗ್ಗೆ ಮೇಲಿನಪೇಟೆಯ ವೀರಭದ್ರ ದೇವಸ್ಥಾನದಿಂದ ಬಾಳಗಡಿ ಪ್ರಥಮದರ್ಜೆ ಕಾಲೇಜು ಕ್ರೀಡಾಂಗಣದವರೆಗೆ ಅದ್ದೂರಿಯಾಗಿ ನಡೆಯಿತು.

ADVERTISEMENT

ಶಾಸಕ ಡಿ.ಎನ್. ಜೀವರಾಜ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಎಸ್.ಎನ್. ರಾಮಸ್ವಾಮಿ, ಮುಖಂಡರಾದ ಟಿ.ಡಿ. ರಾಜೇಗೌಡ, ಎಚ್.ಜಿ. ವೆಂಕಟೇಶ್, ಕೌರಿ ಪ್ರಕಾಶ್, ಸಚಿನ್ ಮೀಗ, ದಿವ್ಯ ದಿನೇಶ್, ವಾಣಿ ಸತೀಶ್, ಕೋಡ್ರು ಶ್ರೀನಿವಾಸ್, ಓಣಿತೋಟ ರತ್ನಾಕರ್, ಬಿ.ಎಂ. ಕೃಷ್ಣಪ್ಪ, ಈ.ಎಸ್. ಧರ್ಮಪ್ಪ, ಜಿ. ಆರ್. ವಿಶ್ವನಾಥ್, ಸುಬ್ರಹ್ಮಣ್ಯ ಶೆಟ್ಟಿ, ಯೋಜನೆಯ ಜಿಲ್ಲಾ ನಿರ್ದೇಶಕಿ ಗೀತಾ, ಕೊಪ್ಪ ಯೋಜನಾಧಿಕಾರಿ ಡಿ. ದಿನೇಶ್ ಭಾಗವಹಿಸಿದ್ದರು.

ವರ್ಣರಂಜಿತ ರೈತ ಶೋಭಾಯಾತ್ರೆ

ಶುಕ್ರವಾರ ಮಧ್ಯಾಹ್ನ 3ಕ್ಕೆ ಪುರಸಭಾ ಕ್ರೀಡಾಂಗಣದಿಂದ ಬಾಳಗಡಿಯ ಪ್ರಥಮದರ್ಜೆ ಕಾಲೇಜು ಕ್ರೀಡಾಂಗಣದವರೆಗೆ ವರ್ಣರಂಜಿತ ರೈತ ಶೋಭಾಯಾತ್ರೆ ನಡೆಯಲಿದ್ದು, ಪ್ರಗತಿಪರ ಕೃಷಿಕ ಗೋಳ್ಗಾರ್ ನಾಗೇಂದ್ರ ರಾವ್ ಚಾಲನೆ ನೀಡುವರು. ಸಂಜೆ 4.30ಕ್ಕೆ ಶಾಸಕ ಡಿ.ಎನ್. ಜೀವರಾಜ್ ಅಧ್ಯಕ್ಷತೆಯಲ್ಲಿ ಹರಿಹರಪುರ ಮಠದ ಪೂಜ್ಯ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಕೃಷಿ ಉತ್ಸವವನ್ನು ಉದ್ಘಾಟಿಸುವರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಚೈತ್ರಶ್ರೀ ಮಾಲತೇಶ್, ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿವಿ ವಿಸ್ತರಣಾ ನಿರ್ದೇಶಕ ಡಾ. ಟಿ.ಎಚ್. ಗೌಡ, ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್. ಮಂಜುನಾಥ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಎಸ್.ಎನ್. ರಾಮಸ್ವಾಮಿ, ಮಾಜಿ ಅಧ್ಯಕ್ಷ ಟಿ.ಡಿ. ರಾಜೇಗೌಡ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎನ್.ಕೆ. ಉದಯ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಾಣಿ ಸತೀಶ್, ಐಡಿಬಿಐ ಬ್ಯಾಂಕ್ ಉಪ ಮಹಾ ಪ್ರಬಂಧಕ ಎನ್. ಶ್ರೀನಿವಾಸ್, ಹರಂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ.ಎಸ್. ರಮ್ಯಾ ಭಾಗವಹಿಸುವರು.

ಸಂಜೆ 6ಕ್ಕೆ ಸ್ಥಳೀಯ ಆಯುರ್ವೇದ ಕಾಲೇಜು, ಡೆಸ್ಟಿನಿ ನೃತ್ಯಕೇಂದ್ರದ ವಿದ್ಯಾರ್ಥಿಗಳು ಹಾಗೂ ಕರ್ನಾಟಕ ಜಾನಪದ ಪರಿಷತ್ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.