ADVERTISEMENT

ಕೊಪ್ಪ: ಧಾರಾಕಾರ ಮಳೆ, ಪ್ರವಾಹ ಭೀತಿ

ರಸ್ತೆ ಸಂಪರ್ಕ ಕಡಿತ - ಶಾಲೆಗಳಿಗೆ ರಜೆ ಘೋಷಣೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2013, 9:44 IST
Last Updated 4 ಜುಲೈ 2013, 9:44 IST
ಕೊಪ್ಪ ತಾಲ್ಲೂಕಿನ ಕಾರಂಗಿ ಸಮೀಪ ಬುಧವಾರ ತುಂಗಾನದಿ ಪ್ರವಾಹದಿಂದ ರಸ್ತೆ ಮುಳುಗಡೆಯಾಗಿ ಸಂಚಾರ ಸ್ಥಗಿತಗೊಂಡಿತು.
ಕೊಪ್ಪ ತಾಲ್ಲೂಕಿನ ಕಾರಂಗಿ ಸಮೀಪ ಬುಧವಾರ ತುಂಗಾನದಿ ಪ್ರವಾಹದಿಂದ ರಸ್ತೆ ಮುಳುಗಡೆಯಾಗಿ ಸಂಚಾರ ಸ್ಥಗಿತಗೊಂಡಿತು.   

ಕೊಪ್ಪ: 2 ದಿನಗಳಿಂದ ಎಡೆಬಿಡದೆ ಸುರಿದ ಆರ್ದ್ರಾ ಮಳೆಯ ಅಬ್ಬರಕ್ಕೆ ತಾಲ್ಲೂಕಿನಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದೆ. ತಾಲ್ಲೂಕಿನ ಪ್ರಮುಖ ನದಿಯಾದ ತುಂಗೆ ಮತ್ತದರ ಉಪನದಿಗಳು ತುಂಬಿ ಹರಿಯುತ್ತಿದ್ದು, ಎಲ್ಲೆಡೆ ಪ್ರವಾಹ ಭೀತಿ ವ್ಯಾಪಿಸಿದೆ. ಬುಧವಾರ ಬೆಳಗ್ಗಿನಿಂದಲೇ ತಾಲ್ಲೂಕಿನ ಎಲ್ಲ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು.

ತುಂಗಾನದಿ ತುಂಬಿ ಹರಿಯುತ್ತಿದ್ದು, ಹರಿಹರಪುರ, ನಾಗಲಾಪುರ, ನಾರ್ವೆ, ಆರ್ಡಿಕೊಪ್ಪ, ಕ್ಬೊಮ್ಲೋಪುರ, ಕಾರಂಗಿ, ಭಂಡಿಗಡಿ ಮುಂತಾದೆಡೆ ನದಿದಂಡೆಯ ಗದ್ದೆ ತೋಟಗಳು ಜಲಾವ್ರತಗೊಂಡಿವೆ. ಅಂಬಳಿಕೆ, ಕಾರಂಗಿಗಳಲ್ಲಿ ತುಂಗಾಪ್ರವಾಹದಿಂದ ರಸ್ತೆ ಮುಳುಗಡೆಯಾಗಿ ಆಗುಂಬೆ, ಕಮ್ಮರಡಿ ರಸ್ತೆ ಸಂಚಾರ ಸ್ಥಗಿತಗೊಂಡಿದೆ.

ಕುದುರೆಗುಂಡಿ ಸಮೀಪ ಕಪಿಲಾ ಹೊಳೆ ಪ್ರವಾಹದಿಂದ ರಸ್ತೆಗೆ ಮುಳುಗಡೆಯಾಗಿದ್ದು, ಕಾನೂರು, ಕಟ್ಟಿನಮನೆ ಭಾಗದ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಹರಿಹರಪುರ, ನಾಗಲಾಪುರ ರಸ್ತೆಗಳಲ್ಲಿ ಮರಗಳು ಬಿದ್ದಿದ್ದರೂ ಸಂಚಾರಕ್ಕೆ ತೊಡಕಾಗದಂತೆ ಕೂಡಲೇ ತೆರೆವು ಗೊಳಿಸಲಾಯಿತು.

ಜಿಲ್ಲಾಧಿಕಾರಿ ಯಶವಂತ್, ತಹಶೀಲ್ದಾರ್ ಶ್ರಿಧರಮೂರ್ತಿ ಎಸ್. ಪಂಡಿತ್, ಪೊಲೀಸ್ ಉಪಾಧೀಕ್ಷಕ ಕೆ.ವಿ. ಜಗದೀಶ್ ಅವರು ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದು, ಬಳಿಕ ಇಲ್ಲಿನ ತಾ.ಪಂ. ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳು ಲೋಕೋಪಯೋಗಿ, ಕಂದಾಯ, ಮೆಸ್ಕಾಂ, ಅರಣ್ಯ, ಇಲಾಖಾಧಿಕಾರಿಗಳು ಹಾಗೂ ಅಗ್ನಿಶಾಮಕ ಸಿಬ್ಬಂದಿಯ ಸಭೆ ನಡೆಸಿ ಪ್ರವಾಹಪೀಡಿತ ಪ್ರದೇಶಗಳಲ್ಲಿ ಮನ್ನೆಚ್ಚರಿಕೆ ಕ್ರಮಗಳ ಬಗ್ಗೆ ಹಾಗೂ ಯಾವುದೇ ಆಪತ್ತು ಸಂಭವಿಸಿದರೂ ಕೈಗೊಳ್ಳಬೇಕಾದ ಪರಿಹಾರೋಪಾಯಗಳ ಬಗ್ಗೆ ಮಾರ್ಗದರ್ಶನ ನೀಡಿ ಸರ್ವಸನ್ನದ್ಧರಾಗಿರುವಂತೆ ಸೂಚಿಸಿದರು.

ಗುರುವಾರದವರೆಗೂ ಇದೇ ರೀತಿ ಮಳೆ ಸುರಿದಲ್ಲಿ ಪ್ರವಾಹ ಹೆಚ್ಚಾಗಿ ಬಹುತೇಕ ರಸ್ತೆ ಸಂಪರ್ಕ ಕಡಿತಗೊಳ್ಳಲಿರುವುದರಿಂದ ಗುರುವಾರವೂ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ತುರ್ತುಸೇವೆಗೆ ದೂರವಾಣಿ 08265-221047 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.