ADVERTISEMENT

ಕೊಪ್ಪ: ವಾಣಿಜ್ಯ ಸಂಕೀರ್ಣಕ್ಕೆ ಬಾಲಗ್ರಹ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2011, 7:05 IST
Last Updated 5 ಫೆಬ್ರುವರಿ 2011, 7:05 IST

ಕೊಪ್ಪ: ಪಟ್ಟಣದ ಬಸ್ ನಿಲ್ದಾಣದಲ್ಲಿ ಪಟ್ಟಣ ಪಂಚಾಯಿತಿ 5ವರ್ಷದ ಹಿಂದೆ ನಿರ್ಮಿಸಿರುವ 24 ಮಳಿಗೆಯ ವಾಣಿಜ್ಯ ಸಂಕೀರ್ಣ ಬಳಕೆಯಿಲ್ಲದೆ ಹಾಳುಸುರಿಯುತ್ತಿದೆ.
ಪಟ್ಟಣ ಪಂಚಾಯಿತಿ ನೆಲಬಾಡಿಗೆ ತೆರವಿಗಾಗಿ ಐಡಿಎಸ್‌ಎಂಟಿ ಯೋಜನೆಗಾಗಿ ರೂ.58ಲಕ್ಷದಲ್ಲಿ ವಾಣಿಜ್ಯ ಸಂಕೀಣ ನಿರ್ಮಿಸಿತು. 2006ರಲ್ಲಿ ಗೃಹ ಸಚಿವ ವಿ.ಎಸ್.ಆಚಾರ್ಯ ಉದ್ಘಾಟಿಸಿದರು. ಈವರೆಗೆ ಮಳಿಗೆಗಳನ್ನು ಸಾರ್ವಜನಿಕರ ಸೇವೆಗೆ ಒದಗಿಸುವಲ್ಲಿ ಪಟ್ಟಣ ಪಂಚಾಯಿತಿ ವಿಫಲವಾಗಿದೆ.

ವಾಣಿಜ್ಯ ಸಂಕೀರ್ಣ ನಿರ್ಮಾಣದಿಂದ ಬಸ್ ನಿಲ್ದಾಣ ಕಿರಿದಾಗಿದ್ದು, ಸಾರಿಗೆ ಬಸ್‌ಗಳಿಗೆ ಅಡ್ಡಿಯಾಗುತ್ತಿದೆ. ಕಟ್ಟಡ ಕಾಮಗಾರಿ ಪೂರ್ಣಗೊಳಿಸದೆ ಗುತ್ತಿಗೆದಾರರು ಬಾಕಿ ಹಣ ಪಾವತ್ತಿಗೆ ಒತ್ತಾಯಿಸುತ್ತಿದಾರೆ. ಅದಕ್ಕೆ ಪೂರಕವಾಗಿ ಜಿಲ್ಲಾಧಿಕಾರಿಗಳು ಗುತ್ತಿಗೆದಾರರ ರೂ. 5 ಲಕ್ಷ ಬಾಕಿ ಹಣ ಪಾವತಿಸಿ ಉಳಿದ ಕಾಮಗಾರಿಗಳಿಗೆ ಹೊಸದಾಗಿ ಪ್ರಸ್ತಾವನೆ ಸಲ್ಲಿಸುವಂತೆ ಪಂಚಾಯಿತಿಗೆ ಸೂಚಿಸಿದ್ದಾರೆ.

ಟಾರ್‌ಸ್ಟೀಲ್ ಸಂಸ್ಥೆಯಿಂದ ಥರ್ಡ್ ಪಾರ್ಟಿ ಪರಿಶೀಲನೆ ನಡೆಸಿ ವರದಿ ತರಿಸಿಕೊಂಡಿರುವ ಪ.ಪಂ. ವರದಿಯಲ್ಲಿ ಸೂಚಿಸಲಾದ ಲೋಪಗಳನ್ನು ಸರಿಪಡಿಸಲು ಮುಂದಾಗಿಲ್ಲ, ಕಟ್ಟಡದ ಬಿರುಕು ಬಿಟ್ಟ ಭಾಗಗಳು ಹಾಗೆ ಇದೆ. ಕಳಪೆ ಕಾಮಗಾರಿ ನಡೆದಿದೆ ಎಂದು ಸಂಸ್ಥೆ ಹೇಳಿದೆ.

ಬಸ್ ನಿಲ್ದಾಣದ ಪಕ್ಕದಲ್ಲೆ ಖಾಲಿ ಬಿದ್ದಿರುವ ಬೃಹತ್ ವಾಣಿಜ್ಯ ಸಂಕೀರ್ಣ ಅನೈತಿಕ ಚಟುವಟಿಕೆಗೆ ಮುಕ್ತವಾಗಿ ತೆರೆದುಕೊಂಡಿದೆ. ಕಳೆದ ಐದು ವರ್ಷದಿಂದ ಅದಾಯವಿಲ್ಲದೆ ಲಕ್ಷಾಂತರ ನಷ್ಟ ಅನುಭವಿಸಿರುವುದಲ್ಲದೆ, ಸಾಲದ ಹಣದಲ್ಲಿ ಕಟ್ಟಲಾಗಿರುವ ಕಟ್ಟಡದಿಂದಾಗಿ ಬಡ್ಡಿ ಬೆಳೆಯುತ್ತಿದೆ. ಜನರ ತೆರಿಗೆಯನ್ನು ಬೇಕಾಬಿಟ್ಟಿ ಬಳಕೆ ಮಾಡಿ ನಿರರ್ಥಕ ಕಾಮಗಾರಿ ಮಾಡಿದ ಪ.ಪಂ. ಬಗ್ಗೆ ಜನ ಹಿಡಿಶಾಪ ಹಾಕುತಿದ್ದಾರೆ.

ಕಟ್ಟಡದ ಕೆಳ ಅಂತಸ್ತು ಸುರಕ್ಷಿತವಾಗಿದ್ದು, 34 ಮಳಿಗೆಗಳ ಹರಾಜಿಗೆ ಪ್ರಕ್ರಿಯೆಗೆ ಪ.ಪಂ. ಜಿಲ್ಲಾಧಿಕಾರಿಗಳನ್ನು ಕೋರಿದೆ. ಮುಂಬಯಿಯ ಆದರ್ಶ ಕಟ್ಟಡ ತೆರವುಗೊಳಿಸುವ ಯೋಜನೆ ಇರುವಂತೆ ಈ ವಾಣಿಜ್ಯ ಸಂಕೀರ್ಣ ತೆರವುಗೊಳಿಸಿ ಎಂಬ ಮೊಬೈಲ್ ಸಂದೇಶಗಳು ಪಟ್ಟಣದಲ್ಲಿ ಹರಿದಾಡುತ್ತಿದೆ.ಇಂತಹ ನಿರರ್ಥಕ ವಾಣಿಜ್ಯ ಸಂಕೀರ್ಣಕ್ಕೆ ಮಾಜಿಮುಖ್ಯಮಂತ್ರಿ ಕಡಿದಾಳ್ ಮಂಜಪ್ಪರ ಹೆಸರಿಸಿರುವುದು ವಿಪರ್ಯಾಸ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.