ADVERTISEMENT

ಕೋಪದ ವೀರಭದ್ರಸ್ವಾಮಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2012, 9:20 IST
Last Updated 7 ಏಪ್ರಿಲ್ 2012, 9:20 IST

ಕೊಪ್ಪ: ಪಟ್ಟಣದ ಊರದೇವತೆ ಕೋಪದ ವೀರಭದ್ರಸ್ವಾಮಿ ರಥೋತ್ಸವ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.

ಕಳೆದ ಮೂರು ದಿನಗಳಿಂದ ವೀರಭದ್ರಸ್ವಾಮಿಗೆ ವಿಶೇಷ ಪೂಜೆ ಉತ್ಸವಗಳು ನಡೆಯುತಿದ್ದು, ಶುಕ್ರವಾರ ಮುಂಜಾನೆ ದೇವಸ್ಥಾನದಲ್ಲಿ ನಡೆದ ಕೆಂಡೋತ್ಸವದಲ್ಲಿ ಪಟ್ಟಣದ ನೂರಾರು ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡು ಕೆಂಡ ಹಾಯ್ದರು.

ವರ್ಣರಂಜಿತ ಪತಾಕೆಗಳು, ಹೂಮಾಲೆಗಳಿಂದ ಅಲಂಕೃತ ರಥಕ್ಕೆ ಸ್ವಾಮಿಯ ಆರೋಹಣವಾಗುತಿದ್ದಂತೆ ಭಕ್ತರು ಫಲಪುಷ್ಪಗಳ ಸುರಿಮಳೆಗರೆದರು.  ರಥೋತ್ಸವದ ನಂತರ ನಡೆದ ಅನ್ನಸಂತರ್ಪಣೆಯಲ್ಲಿ ಸಾವಿರಾರು ಜನ ಪಾಲ್ಗೊಂ ಡರು. ಸತ್ಯಸಾಯಿ ಸೇವಾಸಮಿತಿ ಭಕ್ತರಿಗೆ ಉಚಿತ ಮಜ್ಜಿಗೆ ಸೇವೆ ಸಲ್ಲಿಸಿತು.

ತಾಲ್ಲೂಕಿನ ಗಬ್ಬಾನೆ ಪಂಚಲಿಂಗಸ್ವಾಮಿ ದುರ್ಗಾ ಪರಮೆಶ್ವರಿ ರಥೋತ್ಸವವು  ಶುಕ್ರವಾರ ವಿಜೃಂಭಣೆಯಿಂದ ನಡೆಯಿತು. ಉತ್ಸವದ ಅಂಗವಾಗಿ ತುಲಾಭಾರ ಸೇರಿದಂತೆ ಹಲವು ಹರಕೆಗಳನ್ನು ಭಕ್ತರು ಸಮರ್ಪಿಸಿದರು.
ಕಾಚಕಲ್ ಸೋಮ್ಲಾಪುರ, ಮರಿತೊಟ್ಲು, ನುಗ್ಗಿ, ಬಿಂತ್ರವಳ್ಳಿ, ಕೊಪ್ಪ ಮೊದಲಾದೆಡೆಯಿಂದ ಸಾವಿರಾರು ಭಕ್ತರು ಜಾತ್ರೋತ್ಸವದಲ್ಲಿ ಪಾಲ್ಗೊಂಡಿದ್ದರು.

ಕಡೂರು: ಕರುಮಾರಿಯಮ್ಮನ ಕರಗ
ಕಡೂರು:
ಪಟ್ಟಣದ ಕೆ.ಎಂ.ರಸ್ತೆಯಲ್ಲಿರುವ ಮಾತಾ ಕರುಮಾರಿಯಮ್ಮ ಕರಗ  ನೂರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ನಡೆಯಿತು. ದೇವಿಯ ಕರಗವನ್ನು ಬ್ರಹ್ಮಚಾರಿ ವಿಜಯ್ ಹೊತ್ತು ತೆರಳಿದಾಗ ಸೇರಿದ್ದ ಸಾವಿರಾರು ಭಕ್ತರ ಘೋಷಣೆಗಳೊಂದಿಗೆ ಮೆರವಣಿಗೆ ತೆರಳಿತು.

ಶುಕ್ರವಾರ ಬೆಳಗ್ಗಿನಿಂದ ದೇವಿಗೆ ಅಭಿಷೇಕ, ಕುಂಕುಮಾರ್ಚನೆ, ಮದುವಣಗಿತ್ತಿ ಸೇವೆ, ಕಂಕಣಧಾರಣೆ ಮೊದಲಾದ ಪೂಜೆ ಮಾಡಲಾಯಿತು. ದೇವಾಲಯ ಸಮಿತಿ ಅಧ್ಯಕ್ಷ ಅರುಣ್‌ಕುಮಾರ್, ಟಿ.ಎನ್.ಎ.ಮೊದಲಿಯಾರ್, ಎ.ಮಣಿ, ಮಂಜುನಾಥ್, ಕೃಷ್ಣಪ್ಪ, ರವಿ, ಬಾಬು ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ಬಾಲಸುಬ್ರಹ್ಮಣ್ಯಸ್ವಾಮಿ ರಥೋತ್ಸವ
ಚಿಕ್ಕಮಗಳೂರು:
  ಸಖರಾಯಪಟ್ಟಣದ ಶಿವಬಾಲ ಸುಬ್ರಹ್ಮಣ್ಯಸ್ವಾಮಿ ರಥೋತ್ಸವ ಗುರುವಾರ ವಿಜೃಂಭಣೆಯಿಂದ ನಡೆಯಿತು.ಬೆಳಿಗ್ಗೆ ಸಿದ್ದಿವಿನಾಯಕಸ್ವಾಮಿ, ವಿಶ್ವನಾಥಸ್ವಾಮಿ, ವಿಶಾಲಾಕ್ಷಮ್ಮ ಅವರಿಗೆ ಅಭಿಷೇಕ, ಬಾಲಸುಬ್ರಹ್ಮಣ್ಯ ಸ್ವಾಮಿಗೆ ಅಭಿಷೇಕ ಮಹಾಮಂಗಳಾರತಿ ನೆರವೇರಿಸಲಾ ಯಿತು. ಕಾವಡಿ ಸಮರ್ಪಣೆ, ಊರಿನ ಮುಖ್ಯ ಬೀದಿಗಳಲ್ಲಿ ವೆುರವಣಿಗೆ ಮೂಲಕ ದೇವರನ್ನು ಕರೆತರಲಾಯಿತು.
ರಥೋತ್ಸವಕ್ಕೆ ಸಹಸ್ರಾರು ಮಂದಿ ಆಗಮಿಸಿದ್ದರು. ನಂತರ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.