ADVERTISEMENT

`ಕ್ಯಾನ್ಸರ್ ರೋಗವನ್ನು ಆರಂಭದಲ್ಲೆ ಪತ್ತೆ ಮಾಡಿ'

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2012, 8:31 IST
Last Updated 3 ಡಿಸೆಂಬರ್ 2012, 8:31 IST

ನರಸಿಂಹರಾಜಪುರ: ಕ್ಯಾನ್ಸರ್ ರೋಗ ಪ್ರಾರಂಭದ ಹಂತದಲ್ಲಿಯೇ ಪತ್ತೆ ಮಾಡಿದರೆ ಅದನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಾಗುತ್ತದೆ ಎಂದು ಕಳಸ ಕಾವೇರಿ ಸ್ಮಾರಕ ಚಾರಿಟಬಲ್ ಟ್ರಸ್ಟ್‌ನ ಡಾ.ವಿಕ್ರಮ್ ಪ್ರಭು ತಿಳಿಸಿದರು.

ಇಲ್ಲಿನ ಪುಷ್ಪ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆ, ಮಂಗಳೂರು ಕ್ಯಾನ್ಸರ್ ಆಸ್ಪತ್ರೆ ಹಾಗೂ ರೋಟರಿ ಕ್ಲಬ್ ಮತ್ತಿತರ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಶನಿವಾರ ನಡೆದ ಉಚಿತ ಆರೋಗ್ಯ ತಪಾಸಣೆ, ಸಲಹೆ ಹಾಗೂ ಚಿಕಿತ್ಸಾ ಶಿಬಿರ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಮಲೆನಾಡಿನ ಭಾಗದಲ್ಲಿ ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ಜನರಲ್ಲಿ ಅರಿವಿನ ಕೊರತೆಯಿದೆ. ಇದರ ಬಗ್ಗೆ ಅರಿವು ಮೂಡಿ ಸಲು ಇಂತಹ ಶಿಬಿರಗಳು ಸಹಕಾರಿ ಎಂದರು.

ರಾಷ್ಟ್ರೀಯ ಸ್ವಾಸ್ಥ್ಯ ಭಿಮಾ ಯೋಜನೆ ಬಗ್ಗೆ ಮಾಹಿತಿ ನೀಡಿದ ಯೋಜನೆಯ ಜಿಲ್ಲಾ ಸಂಯೋಜಕ ಸಂಪತ್, 2004ರ ಸರ್ವ ಕುಟುಂಬ ಸಮೀಕ್ಷೆಯ ಪ್ರಕಾರ ಬಿಪಿಎಲ್ ಕುಟುಂಬದವರಿಗೆ ಹಾಗೂ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 15ದಿನಗಳ ಕಾಲ ಕೆಲಸ ಮಾಡಿದವರಿಗೆ ಈ ಯೋಜನೆ ಅನ್ವಯವಾಗಲಿದೆ. ಎನ್.ಆರ್.ಪುರ ತಾಲ್ಲೂಕಿನಲ್ಲಿ 5,505 ಫಲಾನುಭವಿಗಳನ್ನು ಗುರುತಿಸಲಾಗಿದೆ ಎಂದರು.

ಕಾರ್ಯಕ್ರಮವನ್ನು ರೋಟರಿಕ್ಲಬ್ ಅಧ್ಯಕ್ಷ ಎಚ್‌ಟಿ.ಧನಂಜಯ ಉದ್ಘಾಟಿಸಿದರು. ಪುಷ್ಪ ಆಸ್ಪತ್ರೆ ವೈದ್ಯ  ಡಾ.ಮೇರಿ ಸೂಸನ್ನ, ಮಂಗಳೂರು ಕ್ಯಾನ್ಸರ್ ಆಸ್ಪತ್ರೆಯ ಡಾ.ಸನತ್ ಹೆಗ್ಡೆ, ಡಾ.ನವೀನ್‌ಇನ್ನರ್‌ವ್ಹೀಲ್‌ಕ್ಲಬ್ ಅಧ್ಯಕ್ಷೆ ಸಾಗರಿ ನಾಗೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.