ADVERTISEMENT

ಕ್ರೈಸ್ತರ ಮನೆಮನದಲ್ಲಿ ಕ್ರಿಸ್‌ಮಸ್ ಸಂಭ್ರಮ

ಪ್ರಜಾವಾಣಿ ವಿಶೇಷ
Published 26 ಡಿಸೆಂಬರ್ 2012, 9:11 IST
Last Updated 26 ಡಿಸೆಂಬರ್ 2012, 9:11 IST
ಕ್ರೈಸ್ತರ ಮನೆಮನದಲ್ಲಿ ಕ್ರಿಸ್‌ಮಸ್ ಸಂಭ್ರಮ
ಕ್ರೈಸ್ತರ ಮನೆಮನದಲ್ಲಿ ಕ್ರಿಸ್‌ಮಸ್ ಸಂಭ್ರಮ   

ಚಿಕ್ಕಮಗಳೂರು: ಕ್ರಿಸ್‌ಮಸ್ ವಿಶ್ವದ ದೊಡ್ಡ ಹಬ್ಬ. ಕ್ರೈಸ್ತರಿಗಂತೂ ಸಂಭ್ರಮದ ಹಬ್ಬ. ಅದು ಅವರಿಗೆ ದೇವ ಮಾನವನ ಆಗಮನದ ಹಬ್ಬ. ಕ್ರೈಸ್ತರ ಪ್ರತಿ ಮನೆ-ಮನದಲ್ಲೂ ಕ್ರಿಸ್‌ಮಸ್ ಸಂಭ್ರಮ ತುಂಬಿ ತುಳುಕುತ್ತಿದೆ.

ವಿದ್ಯಾಭ್ಯಾಸ, ಉದ್ಯೋಗ, ವ್ಯಾಪಾರ....ಇತ್ಯಾದಿ ಕಾರಣಗಳಿಂದ ದೂರದೂರುಗಳಲ್ಲಿ ನೆಲೆಸಿದ್ದವರೂ ಕ್ರಿಸ್‌ಮಸ್ ರಜೆ ಮೇಲೆ ಆಗಮಿಸಿ ಕುಟುಂಬ ಕೂಡಿಕೊಂಡಿದ್ದಾರೆ. ಸೋಮವಾರದ ಮಧ್ಯರಾತ್ರಿ (ಮಿಡ್‌ನೈಟ್ ಮಾಸ್)ಯೇ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ಮೂಲಕ ವಿಧ್ಯುಕ್ತವಾಗಿ ಕ್ರಿಸ್‌ಮಸ್ ಆಚರಣೆ ಶುರುವಾಗಲಿದೆ.

ಆನಂತರ ಸಂತ ಜೋಸೆಫರ ಪ್ರಧಾನಾಲಯದ ಚಿಕ್ಕಮಗಳೂರು ಧರ್ಮ ಕ್ಷೇತ್ರದ ಧರ್ಮಾಧ್ಯಕ್ಷರಾದ ಡಾ.ಅಂತೋನಿ ಸ್ವಾಮಿ ದಿವ್ಯ ಬಲಿ ಪೂಜೆ ನೆರವೇರಿಸಿ, ಬಾಲ ಯೇಸುವನ್ನು ಗೋದಲಿಯಲ್ಲಿ ಪ್ರತಿಷ್ಠಾಪಿಸಲಿದ್ದಾರೆ. ಶ್ರೇಷ್ಠ ಗುರು ಜಾರ್ಜ್ ಡಿಸೋಜಾ ಧಾರ್ಮಿಕ ಸಂದೇಶ ನೀಡುತ್ತಾರೆ. ಕ್ರೈಸ್ತರೆಲ್ಲರೂ ಮುಂಜಾನೆ ಸಾಮೂಹಿಕ ಪ್ರಾರ್ಥನೆ ಮುಗಿಸಿ, ತಮ್ಮ ಮನೆಗಳಿಗೆ ತೆರಳಿ ಬಂಧು-ಬಾಂಧವರು, ನೆರೆ ಹೊರೆಯವರು, ಆತ್ಮೀಯರೊಂದಿಗೆ ಸೇರಿ ಸಂಭ್ರಮದಿಂದ ಹಬ್ಬ ಆಚರಿಸುತ್ತಾರೆ. ಭೂರಿ ಭೋಜನ ಸವಿಯುತ್ತಾರೆ. ಕೇಕ್-ವೈನ್ ವಿತರಿಸಿ ಶುಭಾಶಯ ಹಂಚಿಕೊಳ್ಳುತ್ತಾರೆ. ಹಬ್ಬದ ದಿನ ಸಂಜೆ ಚರ್ಚ್ ಆವರಣದಲ್ಲಿ ಬಾಲ ಯೇಸುವಿನ ಜನನ ವೃತ್ತಾಂತ ಸಾರುವ ಗೋದಲಿ ವೀಕ್ಷಿಸಲು ಅನ್ಯಧರ್ಮೀಯರು ಆಗಮಿಸುತ್ತಾರೆ.

ಹಬ್ಬ ಆಚರಣೆ ಯಾವಾಗ ಶುರು: ಡಿಸೆಂಬರ್ 2ನೇ ವಾರದಲ್ಲಿ ಸಂತಕ್ಲಾಸ್‌ನ ವೇಷ ಧರಿಸಿ, ಯೇಸುವಿನ ಜನನದ ಗೀತೆ ಹಾಡುತ್ತಾ ಮನೆಮನೆಗೆ ಭೇಟಿ ನೀಡುವ ಕ್ಯಾರಲ್ಸ್ ಶುರುವಾಗುತ್ತದೆ. ಇದು ಕ್ರಿಶ್ಚಿಯನ್ನರ ಮನೆ, ಮನ, ಚರ್ಚ್‌ಗಳಲ್ಲಿ ಕ್ರಿಸ್‌ಮಸ್ ಸಂಭ್ರಮಕ್ಕೆ ಮುನ್ನುಡಿ. ಚರ್ಚ್ ಧರ್ಮ ಗುರುಗಳು ತಮ್ಮ ವ್ಯಾಪ್ತಿಯ ಕುಟುಂಬಗಳ ಪಟ್ಟಿ ತಯಾರಿಸಿ, ಡಿಸೆಂಬರ್ 23ರೊಳಗೆ ಎಲ್ಲ ಮನೆಗಳಿಗೆ ಭೇಟಿ ನೀಡುತ್ತಾರೆ. ಭಜನೆ ತಂಡಗಳು ಕ್ರಿಸ್‌ಮಸ್ ಸಂದೇಶ ಸಾರುತ್ತವೆ. ಪ್ರತಿ ಕ್ರೈಸ್ತ ಮನೆಗಳು ಕ್ರಿಸ್‌ಮಸ್ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಲು ತೊಡಗುತ್ತವೆ.

ಭೂರಿ ಭೋಜನ...: ಹಬ್ಬವೆಂದರೇ ಭೂರಿ ಭೋಜನ ಇರಲೇಬೇಕು. ಹಬ್ಬದಲ್ಲಿ ಪ್ರತಿಯೊಂದು ಕ್ರೈಸ್ತ ಕುಟುಂಬಗಳು ವಿವಿಧ ಬಗೆಯ ತಿನಿಸುಗಳ ತಯಾರಿಸಲು ಮಗ್ನವಾಗುತ್ತವೆ. ಹಬ್ಬದ ದಿನದ ವಿಶೇಷವಾದ ಕೇಕ್, ಬಿರಿಯಾನಿ, ಕಜ್ಜಾಯ, ಸಜ್ಜಿಗೆ, ಕೋಡುಬಳೆ, ನಿಪ್ಪಟ್ಟು, ರವೆ ಉಂಡೆ, ಪಾಯಸ, ಕ್ಯಾರೆಟ್ ಹಲ್ವಾ, ಪೈನಾಪಲ್ ಹಲ್ವಾ, ಪ್ರೂಟ್ ಸಲಾಡ್....ತರಹೇವಾರಿ ಭಕ್ಷ್ಯಭೋಜನ ಸಿದ್ಧಪಡಿಸಲಾಗುತ್ತದೆ.

ಕ್ರಿಸ್‌ಮಸ್‌ಗಾಗಿಯೇ ಕೆಲವರ ಮನೆಗಳಲ್ಲಿ ವಿಶೇಷ ವೈನ್ ತಯಾರಾಗುವುದುಂಟು. ಹಬ್ಬಕ್ಕೆ ಬಂದ ಆತ್ಮೀಯರಿಗೆ ವೈನ್ ರುಚಿ ಸವಿಯ ಅವಕಾಶ ಸಿಗುತ್ತದೆ. ಕ್ರೈಸ್ತ ಬಾಂಧವರು ತಮಗಿರುವ ಎಲ್ಲ ವರ್ಗದ ಸ್ನೇಹಿತರು, ಬಂಧುಗಳ ಮನೆಗೆ ಹೋಗಿ ಹಬ್ಬದ ದಿನ ಪರಸ್ಪರ ಶುಭಾಶಯ ವಿನಿಮಯ ಮಾಡಿ, ಸಿಹಿತಿನಿಸುಗಳನ್ನು ಹಂಚುತ್ತಾರೆ. ಹಬ್ಬದ ಹಿಂದಿನ ದಿನ ಬಡವರು, ದೀನರಿಗೆ ಕೈಲಾದಷ್ಟು ದಾನ ಧರ್ಮವನ್ನು ಮಾಡುತ್ತಾರೆ.

ಧರ್ಮದ ನಂಟು: ಜಿಲ್ಲೆಗೆ 1864ರಲ್ಲಿ ಕ್ರೈಸ್ತ ಧರ್ಮ ಪದಾರ್ಪಣೆ ಮಾಡಿತು. ಫಾದರ್ ಟೋಪ್ನೊ ಎಂಬುವವರು 1867ರಲ್ಲಿ ಚಿಕ್ಕಮಗಳೂರು ನಗರದಲ್ಲಿ ಚಿಕ್ಕ ದೇವಾಲಯ ಕಟ್ಟಿಸಿದರು. ಇದಕ್ಕೆ ಮೈಸೂರು ಧರ್ಮ ಕ್ಷೇತ್ರ ಮೂಲವಾಗಿತ್ತು.

ಉಪಕೇಂದ್ರವಾಗಿಯೇ ಇದ್ದ ಚಿಕ್ಕಮಗಳೂರನ್ನು 1888ರಲ್ಲಿ ಸ್ವತಂತ್ರ ಧರ್ಮ ಕೇಂದ್ರವಾಗಿ ಸ್ಥಾಪಿಸಲಾಯಿತು. 1963ರಲ್ಲಿ ಚಿಕ್ಕಮಗಳೂರು, ಹಾಸನ ಹಾಗೂ ಶಿವಮೊಗ್ಗ ಜಿಲ್ಲೆಗಳನ್ನು ಸೇರಿಸಿ ಚಿಕ್ಕಮಗಳೂರು ಧರ್ಮಕೇಂದ್ರ ಸ್ಥಾಪನೆಯಾಯಿತು. ಈಗ ಈ ಧರ್ಮ ಕೇಂದ್ರ ಸುವರ್ಣ  ಸಂಭ್ರಮೋತ್ಸವದಲ್ಲಿದೆ. ಇದು ಕೂಡ ಈ ಬಾರಿಯ ಕ್ರಿಸ್‌ಮಸ್ ಆಚರಣೆಯನ್ನು ಇನ್ನಷ್ಟು ಕಳೆಕಟ್ಟುವಂತೆ ಮಾಡಿದೆ.

ಚಿಕ್ಕಮಗಳೂರು, ಮೂಡಿಗೆರೆ, ಎನ್.ಆರ್.ಪುರ, ಕೊಪ್ಪ ತಾಲ್ಲೂಕುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರೈಸ್ತರಿದ್ದಾರೆ. ತರೀಕೆರೆ ಹಾಗೂ ಕಡೂರು ಭಾಗದಲ್ಲಿ ಕಡಿಮೆ ಸಂಖ್ಯೆಯಲ್ಲಿ ಕ್ರೈಸ್ತ ಕುಟುಂಬಗಳು ನೆಲೆಸಿವೆ. ಜಿಲ್ಲೆಯಲ್ಲಿ ಕ್ಯಾಥೋಲಿಕ್ ಕ್ರೈಸ್ತರು 26 ಸಾವಿರ ಮಂದಿ, ಕೇರಳ ಮೂಲದ ಸಿರೋ ಮಲಬಾರ್, ಸಿರಿಯನ್ ಆರ್ಥೋಡಕ್ಸ್ ಸೇರಿ 6 ಸಾವಿರ ಮಂದಿ ಇದ್ದಾರೆ. ಪ್ರಾಟೆಸ್ಟೆಂಟರು ಸುಮಾರು 8 ಸಾವಿರ ಮಂದಿ ಇದ್ದಾರೆ. ಕ್ಯಾಥೋಲಿಕ್‌ಗೆ ಸೇರಿದ 22 ಚರ್ಚುಗಳು, ಸಿರೋ ಮಲಬಾರ್, ಸಿರಿಯನ್ ಆರ್ಥೋಡೆಕ್ಸ್, ಜಾಕೋಬೈಟ್‌ಗೆ ಸೇರಿದ 16 ಚರ್ಚ್‌ಗಳೂ ಹಾಗೂ ಪ್ರೊಟೆಸ್ಟೆಂಟರ 6 ಚರ್ಚುಗಳು ಸೇರಿ ಜಿಲ್ಲೆಯಲ್ಲಿ 44 ಚರ್ಚುಗಳು ಕಾರ್ಯಾಚರಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.